ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಮತ್ತು 11 ಮಂದಿ ಸದಸ್ಯರ ನೇಮಕಾತಿ ಆದೇಶ ರದ್ದುಪಡಿಸುವಂತೆ ಕೋರಿ ಸಲ್ಲಿಸಲಾಗಿರುವ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್) ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ಪೂರ್ಣಗೊಳಿಸಿ, ಆದೇಶ ಕಾಯ್ದಿರಿಸಿದೆ.
ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನಕ್ಕೆ ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನು ನೇಮಿಸಿದ ಆದೇಶ ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಶಶಿ ಪ್ರಸಾದ್ ಗಾಂಧಿ ಮತ್ತು 11 ಮಂದಿ ಕೆಪಿಎಸ್‌ಸಿ ಸದಸ್ಯರ ನೇಮಕಾತಿ ಪ್ರಶ್ನಿಸಿ ಟಿ ನರಸಿಂಹ ಮೂರ್ತಿ ಸಲ್ಲಿಸಿದ್ದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಒಟ್ಟುಗೂಡಿಸಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರ ನರಸಿಂಹ ಮೂರ್ತಿ ಅವರನ್ನು ಪ್ರತಿನಿಧಿಸಿದ್ದ ವಕೀಲ ಎಸ್ ಉಮಾಪತಿ ಅವರು “ಕೆಪಿಎಸ್‌ಸಿ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿಗೆ ನಿರ್ದಿಷ್ಟ ನಿಯಮಗಳನ್ನು ರೂಪಿಸಬೇಕು. ಆ ನಿಯಮಗಳನ್ನು ರೂಪಿಸುವವರೆಗೆ ಕೇಂದ್ರ ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷ ಪೂರ್ಣಚಂದ್ರ ಹೋಟಾ ಅವರ ನೇತೃತ್ವದ ಸಮಿತಿ ಶಿಫಾರಸ್ಸು ಮಾಡಿರುವ ಮಾಗಸೂರ್ಚಿಗಳನ್ನು ಪಾಲಿಸಬೇಕು ಎಂದು 2016ರಲ್ಲಿ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿತ್ತು. ಆದರೆ, ಸಮಿತಿಯ ಮಾರ್ಗಸೂಚಿಯಂತೆ ಶೋಧನಾ ಸಮಿತಿ ರಚಿಸದೆ ಮತ್ತು ಯಾವುದೇ ನಿಯಮ ರೂಪಿಸದೆ ರಾಜ್ಯ ಸರ್ಕಾರವು ಕೆಪಿಎಸ್‌ಎಸಿಗೆ ಸದಸ್ಯರನ್ನು ನೇಮಿಸಿದೆ. ಹೀಗಾಗಿ, ಕೆಪಿಎಸ್‌ಸಿ ಸದಸ್ಯರ ನೇಮಕಾತಿ ಆದೇಶ ರದ್ದುಪಡಿಸಬೇಕು ಮತ್ತು ಹೋಟಾ ಸಮಿತಿ ಅನುಸಾರ ಹೊಸದಾಗಿ ಸದಸ್ಯರನ್ನು ನೇಮಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು” ಎಂದು ಕೋರಿದರು.
ಇನ್ನೊಬ್ಬ ಅರ್ಜಿದಾರ ಶಶಿ ಪ್ರಸಾದ್ ಗಾಂಧಿ ಪರ ವಕೀಲರು “ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರ್ ಎಸ್.ಸಾಹುಕಾರ್ ಅವರು ಹಿಂದೆ ಸದಸ್ಯರಾಗಿದ್ದರು. ಅವರನ್ನೇ 2021ರಲ್ಲಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಆದರೆ, ನೇಮಕಾತಿಯ ವೇಳೆ ಹೈಕೋರ್ಟ್ ಆದೇಶದಂತೆ ಯಾವುದೇ ನಿರ್ದಿಷ್ಟ ನಿಯಮ ಅಥವಾ ಹೋಟಾ ಸಮಿತಿಯ ಮಾರ್ಗಸೂಚಿ ಪಾಲಿಸಿಲ್ಲ. ಆದ್ದರಿಂದ ಅವರ ನೇಮಕಾತಿ ರದ್ದುಪಡಿಸಬೇಕು” ಎಂದು ಕೋರಿದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು “ಸಂವಿಧಾನದ ಪರಿಚ್ಛೇದ 316ರ ಪ್ರಕಾರ ಲೋಕಸೇವಾ ಆಯೋಗದ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿಗೆ ಯಾವುದೇ ರೀತಿಯ ಮಾನದಂಡ ಹಾಗೂ ನಿಯಮ ನಿಗದಿಪಡಿಸಿಲ್ಲ. ಹೀಗಾಗಿ, ನಿರ್ದಿಷ್ಟ ವ್ಯಕ್ತಿಯನ್ನೇ ಅಥವಾ ನಿರ್ದಿಷ್ಟ ವಿಧಾನದಲ್ಲಿ ಕೆಪಿಎಸ್‌ಸಿ ಅಧ್ಯಕ್ಷ ಹಾಗೂ ಸದಸ್ಯರಾಗಿ ನೇಮಕ ಮಾಡುವಂತೆ ನ್ಯಾಯಾಲಯಗಳು ನಿರ್ದೇಶಿಸಲು ಅವಕಾಶ ಇಲ್ಲ” ಎಂದು ವಾದಿಸಿದರು.
ಪ್ರಕರಣದ ಹಿನ್ನೆಲೆ: ಅರ್ಜಿದಾರ ಟಿ ನರಸಿಂಹ ಮೂರ್ತಿ ಅವರು 2020ರ ಜೂನ್ 6ರಂದು ಅಂದಿನ ಕೆಪಿಎಸ್‌ಸಿಯ 11 ಮಂದಿ ಸದಸ್ಯರ ನೇಮಕಾತಿಯನ್ನು ಪ್ರಶ್ನಿಸಿದ್ದರು. 11 ಮಂದಿ ಪೈಕಿ ಡಾ.ಚಂದ್ರಕಾಂತ್ ಡಿ.ಶಿವಕೇರಿ, ಎಸ್.ಎಚ್. ದುಗ್ಗಪ್ಪ, ಡಾ.ಆರ್.ಲಕ್ಷ್ಮೀನಾರಾಯಣ ಮತ್ತು ಶ್ರೀಕಂಠರಾವ್ ಅವರು ಸದ್ಯ ನಿವೃತ್ತರಾಗಿದ್ದಾರೆ. ಸದಸ್ಯರಾಗಿದ್ದ ಶಿವಶಂಕರಪ್ಪ ಎಸ್.ಸಾಹುಕಾರ್ ಅವರು ಕೆಪಿಎಸ್‌ಸಿ ಅಧ್ಯಕ್ಷರಾಗಿ 2021ರ ಏಪ್ರಿಲ್ 5ರಂದು ನೇಮಕಗೊಂಡಿದ್ದಾರೆ. ಉಳಿದಂತೆ ಡಾ. ಎಚ್ ರವಿಕುಮಾರ್, ಡಾ.ರೊನಾಲ್ಡ್ ಅನಿಲ್ ಫರ್ನಾಂಡೀಸ್, ವಿಜಯ ಕುಮಾರ್ ಡಿ. ಕುಚನೂರೆ, ಆರ್ ಗಿರೀಶ, ಪ್ರೊ.ರಂಗರಾಜನ್, ಡಾ.ಎಂ ಬಿ ಹೆಗ್ಗಣ್ಣವರ ಅವರು ಹಾಲಿ ಸದಸ್ಯರಾಗಿದ್ದಾರೆ.