ಪೊಲೀಸ್‌ ದೂರು ಪ್ರಾಧಿಕಾರಕ್ಕೆ ಅಧ್ಯಕ್ಷ, ಸದಸ್ಯರ ನೇಮಕಾತಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಸಕಾಲಕ್ಕೆ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಿಸದ ಕಾರಣ ಪ್ರಾಧಿಕಾರ ತನ್ನ ಶಾಸನಾತ್ಮಕ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿಲ್ಲ. ಅಪಾರ ಪ್ರಮಾಣದಲ್ಲಿ ದೂರುಗಳು ಮತ್ತು ಕುಂದುಕೊರತೆಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ ಎಂದು ಆಕ್ಷೇಪ.
High Court of Karnataka
High Court of Karnataka

ಹಲವು ತಿಂಗಳಿಂದ ಖಾಲಿ ಉಳಿದಿರುವ ಕರ್ನಾಟಕ ಪೊಲೀಸ್ ದೂರು ಪ್ರಾಧಿಕಾರದ ಅಧ್ಯಕ್ಷ ಮತ್ತು ಇಬ್ಬರ ಸದಸ್ಯರ ಸ್ಥಾನಗಳನ್ನು ಭರ್ತಿ ಮಾಡಲು ಆದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ನೋಟಿಸ್ ಜಾರಿಗೊಳಿಸಿದೆ.

ಬೆಂಗಳೂರಿನ ವಕೀಲೆ ಸುಧಾ ಕಾಟ್ವಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಾದ ಆಲಿಸಿದ ಪೀಠವು ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸಿಬ್ಬದಿ ಮತ್ತು ಆಡಳಿತ ಸುಧಾರಣೆ ಇಖಾಖೆ ಹೆಚ್ಚುವರಿ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.

ಅರ್ಜಿದಾರರ ಪರ ವಕೀಲ ಎಸ್ ಉಮಾಪತಿ ಅವರು “ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಪೊಲೀಸ್ ಇಲಾಖೆಯ ಎಲ್ಲಾ ಶ್ರೇಣಿಯ ಅಧಿಕಾರಿಗಳ ವಿರುದ್ಧ ದೂರು ಪರಿಶೀಲಿಸಿ, ಅಗತ್ಯ ಕ್ರಮ ಜರುಗಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪೊಲೀಸ್ ದೂರು ಪ್ರಾಧಿಕಾರ ರಚಿಸಲಾಗಿದೆ. ಆದರೆ, ಸಕಾಲಕ್ಕೆ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಕ ಮಾಡುತ್ತಿಲ್ಲ. ಪ್ರಾಧಿಕಾರಕ್ಕೆ ಅಗತ್ಯ ಸಿಬ್ಬಂದಿ ಮತ್ತು ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದರು.

ಸ್ವತಂತ್ರ ಮತ್ತು ಶಾಸನಾತ್ಮಕ ಹುದ್ದೆಯಾದ ಪ್ರಾಧಿಕಾರದ ಅಧ್ಯಕ್ಷ ಹುದ್ದೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅವರನ್ನು ನೇಮಿಸಬೇಕಿದೆ. ಅಧ್ಯಕ್ಷ ಹುದ್ದೆಯು 2022ರ ಆಗಸ್ಟ್‌ 11ರಿಂದ ಖಾಲಿ ಉಳಿದಿದೆ. ಒಂದು ಸದಸ್ಯ ಸ್ಥಾನ 2020ರ ಮೇ 8ರಿಂದ ಮತ್ತು ಮತ್ತೊಂದು ಸದಸ್ಯ ಸ್ಥಾನ 2022ರ ಡಿಸೆಂಬರ್‌ 28ರಿಂದ ಖಾಲಿಯಿದೆ. ಸಕಾಲಕ್ಕೆ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಿಸದ ಕಾರಣ ಪ್ರಾಧಿಕಾರ ತನ್ನ ಶಾಸನಾತ್ಮಕ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿಲ್ಲ. ಅಪಾರ ಪ್ರಮಾಣದಲ್ಲಿ ದೂರುಗಳು ಮತ್ತು ಕುಂದುಕೊರತೆಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಆದ್ದರಿಂದ ಖಾಲಿಯಿರುವ ಪ್ರಾಧಿಕಾರದ ಅಧ್ಯಕ್ಷ ಹಾಗೂ ಇಬ್ಬರ ಸದಸ್ಯರನ್ನು ಕೂಡಲೇ ನೇಮಕ ಮಾಡಲು ಸರ್ಕಾರಕ್ಕೆ ಅದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Related Stories

No stories found.
Kannada Bar & Bench
kannada.barandbench.com