ಮೂರು ವಾರಗಳಲ್ಲಿ ರೇರಾ ಮೇಲ್ಮನವಿ ನ್ಯಾಯಾಧಿಕರಣಕ್ಕೆ ಅಧ್ಯಕ್ಷರು, ಸದಸ್ಯರ ನೇಮಕ: ಹೈಕೋರ್ಟ್‌ಗೆ ಸರ್ಕಾರದ ವಿವರಣೆ

ರೇರಾದ ಅಧ್ಯಕ್ಷರು ಮತ್ತು ಸದಸ್ಯರ ನೇಮಕದಲ್ಲಿ ವಿಳಂಬ ನೀತಿ ಅನುಸರಿಸದೆ ನೇಮಕ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ವಿಚಾರಣೆ ಮುಂದೂಡಿದ ನ್ಯಾಯಾಲಯ.
High Court of Karnataka
High Court of Karnataka
Published on

ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದ (ರೇರಾ) ಮೇಲ್ಮನವಿ ನ್ಯಾಯಾಧಿಕರಣಕ್ಕೆ ಮುಂದಿನ ಮೂರು ವಾರಗಳಲ್ಲಿ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಲಾಗುವುದು ಎಂದು ಕರ್ನಾಟಕ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ತಿಳಿಸಿದೆ.

ರೇರಾ ಮೇಲ್ಮನವಿ ನ್ಯಾಯಾಧಿಕರಣಕ್ಕೆ ಮುಖ್ಯಸ್ಥರನ್ನು ನೇಮಿಸುವಂತೆ ಕೋರಿ ಬೆಂಗಳೂರಿನ ಮ್ಯಾಥ್ಯೂ ಥಾಮಸ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅಡ್ವೋಕೇಟ್‌ ಜನರಲ್​ ಕೆ ಶಶಿಕಿರಣ್​ ಶೆಟ್ಟಿ ಅವರು, ರೇರಾದ ಒಬ್ಬ ಸದಸ್ಯರು 2024ರ ಏಪ್ರಿಲ್‌ನಲ್ಲಿ ನಿವೃತ್ತರಾಗಲಿದ್ದಾರೆ. ಇದನ್ನು ಒಳಗೊಂಡು ಅಧ್ಯಕ್ಷರೂ ಸೇರಿದಂತೆ ಎಲ್ಲಾ ಸ್ಥಾನಗಳನ್ನು ಭರ್ತಿ ಮಾಡಲಾಗುವುದು ಎಂದು ಪೀಠಕ್ಕೆ ತಿಳಿಸಿದರು.

ಈ ಅಂಶವನ್ನು ದಾಖಲಿಸಿಕೊಂಡ ಪೀಠವು ರೇರಾದ ಅಧ್ಯಕ್ಷರು ಮತ್ತು ಸದಸ್ಯರ ನೇಮಕದಲ್ಲಿ ವಿಳಂಬ ನೀತಿ ಅನುಸರಿಸದೆ ನೇಮಕ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ವಿಚಾರಣೆಯನ್ನು ಮುಂದೂಡಿತು.

ಕಳೆದ ವಿಚಾರಣೆಯಲ್ಲಿ ಪೀಠವು ನ್ಯಾಯಾಧಿಕರಣಕ್ಕೆ ಅಧ್ಯಕ್ಷರನ್ನು ನೇಮಿಸಲು ಹಾಗೂ ಅಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ಕ್ರಮಕೈಗೊಂಡಿಲ್ಲ. ರೇರಾದ ಸೆಕ್ಷನ್‌ 22ರ ಪ್ರಕಾರ ರಾಜ್ಯ ಸರ್ಕಾರ ಹುದ್ದೆಗಳನ್ನು ತುಂಬಿದರೆ ಪ್ರಕ್ರಿಯೆ ಮುಂದುವರಿಯಲಿದೆ. ರೇರಾ ಹೊರಡಿಸಿದ ಆದೇಶಗಳನ್ನು ಕಾಯಿದೆಯ ಸೆಕ್ಷನ್‌ 44(5)ರ ಅಡಿ ಪ್ರಶ್ನಿಸಬಹುದಾಗಿದೆ. ಮೇಲ್ಮನವಿ ನ್ಯಾಯಾಧಿಕರಣವು 60 ದಿನಗಳ ಒಳಗಾಗಿ ಮೇಲ್ಮನವಿ ಇತ್ಯರ್ಥಪಡಿಸಬೇಕು.‌ಆದರೆ, ನ್ಯಾಯಾಧಿಕರಣಕ್ಕೆ ಅಧ್ಯಕ್ಷರನ್ನು ನೇಮಕ ಮಾಡದಿರುವುದರಿಂದ ಸಕ್ಷಮ ಪ್ರಾಧಿಕಾರ ಮಾಡಿದ ಆದೇಶಗಳನ್ನು ಬಿಲ್ಡರ್ಸ್​ಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸುತ್ತಿದ್ದಾರೆ. ಈ ಎಲ್ಲಾ ಅರ್ಜಿಗಳು ನ್ಯಾಯಾಧಿಕರಣದ ಮುಂದೆ ಸಲ್ಲಿಸಬೇಕಾಗಿದೆ. ನ್ಯಾಯಾಧಿಕರಣ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಏಕೈಕ ಕಾರಣಕ್ಕೆ ಈ ನ್ಯಾಯಾಲಯದಲ್ಲಿ ಸಾಕಷ್ಟು ಅರ್ಜಿಗಳು ಬಾಕಿ ಉಳಿದಿವೆ. ರಾಜ್ಯ ಸರ್ಕಾರವು ಅಧ್ಯಕ್ಷರನ್ನು ನೇಮಕ ಮಾಡದಿರುವುದರಿಂದ ನ್ಯಾಯಾಧಿಕರಣ ಕೆಲಸ ಮಾಡುತ್ತಿಲ್ಲ. ಹೀಗಾಗಿ, ಮೇಲ್ನೋಟಕ್ಕೆ ಹೈಕೋರ್ಟ್‌ನಲ್ಲಿ ಬಾಕಿ ಪ್ರಕರಣ ಹೆಚ್ಚಲು ಕಾರಣವಾಗುತ್ತಿದೆ ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ: 2021ರ ಮಾರ್ಚ್ 17ರಂದು ನಿರ್ಮಾಣ ಯೋಜನೆಯೊಂದಕ್ಕೆ ಸಂಬಂಧಿಸಿದಂತೆ ರೇರಾ ರಿಯಲ್ ಎಸ್ಟೇಟ್‌ ಸಂಸ್ಥೆಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಂಸ್ಥೆ ನ್ಯಾಯಾಧಿಕರಣದಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಅದನ್ನು ಪುರಸ್ಕರಿಸಿ ಪ್ರಕರಣವನ್ನು ರೇರಾಕ್ಕೆ ಮರಳಿಸಲಾಗಿತ್ತು. ಆನಂತರ ರೇರಾ ಮತ್ತೆ 2022ರ ಸೆಪ್ಟೆಂಬರ್‌ 2ರಂದು ಅರ್ಜಿದಾರರ ಪರವಾಗಿ ಆದೇಶಿಸಿದ್ದು, ಇದನ್ನು ಪ್ರಶ್ನಿಸಿ 2023ರ ಫೆಬ್ರವರಿ 2ರಂದು ಸಂಸ್ಥೆ ನ್ಯಾಯಾಧಿಕರಣದಲ್ಲಿ ಮೇಲ್ಮನವಿ ಸಲ್ಲಿಸಿತ್ತು.

Also Read
ರೇರಾ ಮೇಲ್ಮನವಿ ನ್ಯಾಯಾಧಿಕರಣಕ್ಕೆ ಅಧ್ಯಕ್ಷರ ನೇಮಕ ವಿಳಂಬ: ಬಾಕಿ ಪ್ರಕರಣ ಹೆಚ್ಚಳಕ್ಕೆ ಸರ್ಕಾರ ಕಾರಣ ಎಂದ ಹೈಕೋರ್ಟ್‌

ನ್ಯಾಯಾಧಿಕರಣ ರಚನೆಯಾಗದಿರುವುದರಿಂದ ಅದು ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಅರ್ಜಿದಾರರು ನ್ಯಾಯಾಧಿಕರಣದಲ್ಲಿ ಬಾಕಿ ಇರುವ ಹುದ್ದೆಗಳನ್ನು ತುಂಬುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. 2023ರ ಜೂನ್ 2 ರಂದು ನ್ಯಾಯಾಧಿಕರಣವು ಖಾಲಿಯಿದ್ದು, ಅರ್ಜಿದಾರರು ರೇರಾ ಮೇಲ್ಮನವಿ ನ್ಯಾಯಾಧಿಕರಣಕ್ಕೆ ಸದಸ್ಯರು ಮತ್ತು ಅಧ್ಯಕ್ಷರನ್ನು ನೇಮಿಸುವಂತೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಸೂಕ್ತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಅರ್ಜಿದಾರರು ಹೈಕೋರ್ಟ್‌ ಕದತಟ್ಟಿದ್ದರು.

Kannada Bar & Bench
kannada.barandbench.com