ರೇರಾ ಮೇಲ್ಮನವಿ ನ್ಯಾಯಾಧಿಕರಣಕ್ಕೆ 15 ದಿನಗಳಲ್ಲಿ ಅಧ್ಯಕ್ಷರ ನೇಮಕ: ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್‌

“ರೇರಾ ಮೇಲ್ಮನವಿ ನ್ಯಾಯಾಧಿಕರಣ ಕಾರ್ಯಾರಂಭಿಸಬಹುದು. ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಅಧ್ಯಕ್ಷರ ಹೆಸರನ್ನು ಒಳಗೊಂಡ ಕಡತವನ್ನು ಕಳುಹಿಸಬೇಕಿದೆ. ಅಧ್ಯಕ್ಷರನ್ನು ನೇಮಕ ಮಾಡುವುದು ಮಾತ್ರ ಬಾಕಿ ಇದೆ” ಎಂದು ಹೈಕೋರ್ಟ್‌ಗೆ ಎಜಿ ಮಾಹಿತಿ.
High Court of Karnataka
High Court of Karnataka

ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ (ರೇರಾ) ಮೇಲ್ಮನವಿ ನ್ಯಾಯಾಧಿಕರಣಕ್ಕೆ 15 ದಿನಗಳಲ್ಲಿ ಅಧ್ಯಕ್ಷರನ್ನು ನೇಮಿಸಲಾಗುವುದು ಎಂಬ ರಾಜ್ಯ ಸರ್ಕಾರದ ವಾಗ್ದಾನವನ್ನು ಮಂಗಳವಾರ ದಾಖಲಿಸಿಕೊಂಡಿರುವ ಕರ್ನಾಟಕ ಹೈಕೋರ್ಟ್‌ ಅರ್ಜಿಗಳನ್ನು ಇತ್ಯರ್ಥಪಡಿಸಿದೆ.

ರೇರಾ ಮೇಲ್ಮನವಿ ನ್ಯಾಯಾಧಿಕರಣಕ್ಕೆ ಮುಖ್ಯಸ್ಥರನ್ನು ನೇಮಿಸುವಂತೆ ಕೋರಿ ಬೆಂಗಳೂರಿನ ಮ್ಯಾಥ್ಯೂ ಥಾಮಸ್‌ ಮತ್ತಿತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ರೇರಾ ಮೇಲ್ಮನವಿ ನ್ಯಾಯಾಧಿಕರಣ ಈಗ ಕಾರ್ಯಾರಂಭಿಸಬಹುದು. ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಅಧ್ಯಕ್ಷರ ಹೆಸರನ್ನು ಒಳಗೊಂಡ ಕಡತವನ್ನು ಕಳುಹಿಸಬೇಕಿದೆ. ಅಧ್ಯಕ್ಷರನ್ನು ನೇಮಕ ಮಾಡುವುದು ಮಾತ್ರ ಬಾಕಿ ಇದೆ” ಎಂದರು.

ಆಗ ಪೀಠವು “ಈ ಎಲ್ಲಾ ಪ್ರಕರಣಗಳನ್ನು ಮೇಲ್ಮನವಿ ನ್ಯಾಯಾಧಿಕರಣದ ಮುಂದೆ ವಿಚಾರಣೆಗೆ ನಿಗದಿಪಡಿಸುತ್ತೇವೆ. ಒಮ್ಮೆ ನ್ಯಾಯಾಧಿಕರಣ ರಚನೆಯಾದ ಮೇಲೆ ಅವರು ವಿಚಾರಣೆ ನಡೆಸಬಹುದು” ಎಂದಿತು.

ಮುಂದುವರಿದು, “ಅಡ್ವೊಕೇಟ್‌ ಜನರಲ್‌ ಈ ನ್ಯಾಯಾಲಯ ಮೇಲಿಂದ ಮೇಲೆ ಆದೇಶ ಮಾಡಿರುವ ಹಿನ್ನೆಲೆಯಲ್ಲಿ 2024ರ ಏಪ್ರಿಲ್‌ 20ರಂದು ಹೊರಡಿಸಿರುವ ಅಧಿಸೂಚನೆಯನ್ನು ಸಲ್ಲಿಸಿದ್ದಾರೆ. ನ್ಯಾಯಾಧಿಕರಣಕ್ಕೆ ಸದಸ್ಯರನ್ನು ನೇಮಕ ಮಾಡಲಾಗಿದ್ದು, ಅಧ್ಯಕ್ಷರ ನೇಮಕಾತಿಯು 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಇಲ್ಲಿ ಬಾಕಿರುವ ಪ್ರಕರಣಗಳನ್ನು ನ್ಯಾಯಾಧಿಕರಣಕ್ಕೆ ವರ್ಗಾಯಿಸಬಹುದಾಗಿದ್ದು, ಶೀಘ್ರದಲ್ಲೇ ಅಧ್ಯಕ್ಷರ ನೇಮಕವಾಗಲಿದೆ. ಎಜಿ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಅರ್ಜಿಗಳು ಅಮಾನ್ಯವಾಗಿವೆ” ಎಂದು ಆದೇಶಿಸಿತು.

ಅಲ್ಲದೇ, “ಅಧ್ಯಕ್ಷರ ನೇಮಕವನ್ನು 15 ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂಬ ಎಜಿ ಅವರ ವಾದವನ್ನು ದಾಖಲಿಸಿಕೊಳ್ಳಲಾಗಿದೆ. ರೇರಾ ಅಧ್ಯಕ್ಷರು ಮತ್ತು ಸದಸ್ಯರನ್ನು ಒಂದು ತಿಂಗಳಲ್ಲಿ ನೇಮಕ ಮಾಡಲಾಗುವುದು ಎಂದು ಎಜಿ ತಿಳಿಸಿದ್ದಾರೆ” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

ಪ್ರಕರಣದ ಹಿನ್ನೆಲೆ: 17.03.2021ರಂದು ನಿರ್ಮಾಣ ಯೋಜನೆಯೊಂದಕ್ಕೆ ಸಂಬಂಧಿಸಿದಂತೆ ರೇರಾ ಪ್ರವರ್ತಕರಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪ್ರವರ್ತಕರು ನ್ಯಾಯಾಧಿಕರಣದಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಅದನ್ನು ಪುರಸ್ಕರಿಸಿ ಪ್ರಕರಣವನ್ನು ರೇರಾಕ್ಕೆ ಮರಳಿಸಲಾಗಿತ್ತು. ಆನಂತರ ರೇರಾ ಮತ್ತೆ 2022ರ ಸೆಪ್ಟೆಂಬರ್‌ 2ರಂದು ಅರ್ಜಿದಾರರ ಪರವಾಗಿ ಆದೇಶಿಸಿದ್ದು, ಇದನ್ನು ಪ್ರಶ್ನಿಸಿ 2023ರ ಫೆಬ್ರವರಿ 2ರಂದು ಪ್ರವರ್ತಕರು ನ್ಯಾಯಾಧಿಕರಣದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ನ್ಯಾಯಾಧಿಕರಣ ರಚನೆಯಾಗದಿರುವುದರಿಂದ ಅದು ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಅರ್ಜಿದಾರರು ನ್ಯಾಯಾಧಿಕರಣದಲ್ಲಿ ಬಾಕಿ ಇರುವ ಹುದ್ದೆಗಳನ್ನು ತುಂಬುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. 02.06.2023ರಿಂದ ನ್ಯಾಯಾಧಿಕರಣವು ಖಾಲಿಯಿದ್ದು, ಅರ್ಜಿದಾರರು ರೇರಾ ಮೇಲ್ಮನವಿ ನ್ಯಾಯಾಧಿಕರಣಕ್ಕೆ ಸದಸ್ಯರು ಮತ್ತು ಅಧ್ಯಕ್ಷರನ್ನು ನೇಮಿಸುವಂತೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಸೂಕ್ತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಅರ್ಜಿದಾರರು ಹೈಕೋರ್ಟ್‌ ಕದತಟ್ಟಿದ್ದಾರೆ ಎಂದು ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿತ್ತು.

Related Stories

No stories found.
Kannada Bar & Bench
kannada.barandbench.com