ಸೇನಾಪಡೆಗಳ ಮುಖ್ಯಸ್ಥರ ಹುದ್ದೆ ನೇಮಕಾತಿಗೆ ಕೇಂದ್ರ ಸರ್ಕಾರದಿಂದ ಹೊಸ ನಿಯಮ

ಜನರಲ್ ಬಿಪಿನ್ ರಾವತ್ ಅವರ ನಿಧನದಿಂದ ತೆರವಾಗಿರುವ ಸೇನಾಪಡೆಗಳ ಮುಖ್ಯಸ್ಥರ ಹುದ್ದೆ ನೇಮಕಾತಿಗಾಗಿ ತಿದ್ದುಪಡಿ ನಿಯಮಗಳೊಂದಿಗೆ ರಕ್ಷಣಾ ಸಚಿವಾಲಯ ಸೋಮವಾರ ಅಧಿಸೂಚನೆ ಹೊರಡಿಸಿದೆ.
ಸೇನಾಪಡೆಗಳ ಮುಖ್ಯಸ್ಥರ ಹುದ್ದೆ ನೇಮಕಾತಿಗೆ ಕೇಂದ್ರ ಸರ್ಕಾರದಿಂದ ಹೊಸ ನಿಯಮ
Published on

ಸೇನಾಪಡೆಗಳ ಮುಖ್ಯಸ್ಥ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವ ಸಲುವಾಗಿ 1964ರ ವಾಯುಪಡೆ ನಿಯಮಾವಳಿಗಳಿಗೆ ತಿದ್ದುಪಡಿ ಮಾಡಿ ರಕ್ಷಣಾ ಸಚಿವಾಲಯ ಸೋಮವಾರ ಅಧಿಸೂಚನೆ ಹೊರಡಿಸಿದೆ.

ವಾಯುಪಡೆ (ತಿದ್ದುಪಡಿ) ನಿಯಮಗಳು- 2022 ಎಂದು ಕರೆಯಲಾಗುವ ತಿದ್ದುಪಡಿಯು, ನಿಯಮಾವಳಿ 213ಕ್ಕೆ (ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಸೇವಾ ನಿಯಮಗಳು) 213 ಬಿ ನಿಯಮವನ್ನು ಸೇರಿಸಿದೆ.

ತಿದ್ದುಪಡಿ ಪ್ರಕಾರ, ಸಿಡಿಎಸ್‌ ಹುದ್ದೆಗೆ ಏರ್ ಮಾರ್ಷಲ್ ಅಥವಾ ಏರ್ ಚೀಫ್ ಮಾರ್ಷಲ್ ಆಗಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ ಅಥವಾ ಅದೇ ಶ್ರೇಣಿಯಲ್ಲಿ ನಿವೃತ್ತಿ ಹೊಂದಿದ, ಆದರೆ ನೇಮಕಾತಿ ದಿನಾಂಕದಂದು 62 ವರ್ಷ ಮೀರದವರು ಅರ್ಹರಾಗಿದ್ದಾರೆ.

Also Read
ಸುಪ್ರೀಂನಿಂದ ನ್ಯಾಯಾಂಗ ನಿಂದನೆ ಎಚ್ಚರಿಕೆ ಬೆನ್ನಿಗೇ 11 ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಕಮಿಷನ್‌ ನೀಡಿದ ಭಾರತೀಯ ಸೇನೆ

ಹೊಸ ನಿಯಮಾವಳಿಯಲ್ಲಿ ತಿಳಿಸಿರುವಂತೆ, ಅಗತ್ಯವಿದ್ದಲ್ಲಿ, ಸಿಡಿಎಸ್‌ ಅಧಿಕಾರಿಯ ಸೇವೆಯನ್ನು ಗರಿಷ್ಠ 65 ವರ್ಷಗಳವರೆಗೆ ವಿಸ್ತರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ.

ಕಾರ್ಗಿಲ್ ಪರಿಶೀಲನಾ ಸಮಿತಿ 1999ರಲ್ಲಿ ಶಿಫಾರಸು ಮಾಡಿದ್ದ ಸಿಡಿಎಸ್‌ ಹುದ್ದೆಯನ್ನು ಡಿಸೆಂಬರ್ 2019ರಲ್ಲಿ ಸರ್ಕಾರ ಅನುಮೋದಿಸಿತು. ಸಿಡಿಎಸ್‌ ಹುದ್ದೆ ಎಂಬುದು ಸರ್ಕಾರ ಮತ್ತು ರಕ್ಷಣಾ ಪಡೆಗಳ ನಡುವೆ ಸಮನ್ವಯ ಸಾಧಿಸುವಲ್ಲಿ ಮತ್ತು ಕಾರ್ಯ ನಿರ್ವಹಿಸುವಲ್ಲಿ ಪ್ರಮುಖ ಸೇನಾ ಸುಧಾರಣೆಯಾಗಿತ್ತು. ಅಲ್ಲದೆ ಈ ಹುದ್ದೆ ರಕ್ಷಣಾ ಸಚಿವರಿಗೆ ಪ್ರಧಾನ ಸೇನಾ ಸಲಹೆಗಾರನಾಗಿ ಮತ್ತು ಸೇನಾಪಡೆಗಳ ಮುಖ್ಯಸ್ಥರ ಸಮಿತಿಗೆ ಶಾಶ್ವತ ಅಧ್ಯಕ್ಷರಾಗಿ ಕೆಲಸ ಮಾಡುತ್ತದೆ.

ದೇಶದ ಪ್ರಪ್ರಥಮ ಸಿಡಿಎಸ್‌ ಆಗಿದ್ದ ಜನರಲ್‌ ಬಿಪಿನ್‌ ರಾವತ್‌ ತಮಿಳುನಾಡಿನ ನೀಲಗಿರಿಯಲ್ಲಿ ಹೆಲಿಕಾಪ್ಟರ್‌ ಅಪಘಾತದಲ್ಲಿ ಮಡಿದಿದ್ದರು. ಅಂದಿನಿಂದ ಈ ತನಕ ಹುದ್ದೆ ಭರ್ತಿಯಾಗಿರಲಿಲ್ಲ.

Kannada Bar & Bench
kannada.barandbench.com