ಉದ್ಯೋಗಿಗಳ ವಾರಸುದಾರರಿಗೆ ಅವರ ಹಿರಿತನ ಮತ್ತು ಅಥವಾ ನಿವೃತ್ತಿಯನ್ನು ಆಧರಿಸಿ ಅನುಕಂಪಾಧಾರಿತ ನೇಮಕಾತಿ ವಿಸ್ತರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ [ಅಹಮದ್‌ನಗರ ಮಹಾನಗರ ಪಾಲಿಕೆ ಮತ್ತು ಅಹಮದ್‌ನಗರ ಮಹಾನಗರ ಪಾಲಿಕೆ ಕಾರ್ಮಿಕರ ಸಂಘ ನಡುವಣ ಪ್ರಕರಣ].
ಅನುಕಂಪದ ಆಧಾರದ ಮೇಲೆ ನೇಮಕಾತಿಗಾಗಿ ಯಾರೂ ಪ್ರಾಪ್ತ ಹಕ್ಕು ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ತಿಳಿಸಿತು. ಅಂತಹ ನೇಮಕಾತಿಗಳಿಗೆ ಅನುಮತಿಸಿದರೆ, ಹೆಚ್ಚಿನ ಅಂಕ, ಉತ್ತಮ ಶಿಕ್ಷಣ ಅಥವಾ ಒಳ್ಳೆಯ ಅರ್ಹತೆ ಇರುವ ಬೇರೆಯವರಿಗೆ ಎಂದಿಗೂ ನೇಮಕಾತಿ ದೊರೆಯುವುದಿಲ್ಲ ಎಂದು ನ್ಯಾಯಾಲಯ ಹೇಳಿತು.
ಸಹಾನುಭೂತಿಯ ಆಧಾರದ ಮೇಲೆ (ವಾರಸು ಹಕ್ಕು) ನೇಮಕಾತಿಯು ಯಾವುದೇ ಕಾರ್ಯಯೋಜನೆಯ ಬೆಂಬಲ ಪಡೆದಿಲ್ಲ ಮತ್ತು ಅದು ಸಂವಿಧಾನದ 14 ಮತ್ತು 15ನೇ ವಿಧಿಗಳ ಅಡಿಯಲ್ಲಿ ಉಲ್ಲಂಘನೆಯಾಗುತ್ತದೆ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.
ಆ ಮೂಲಕ ಕೈಗಾರಿಕಾ ನ್ಯಾಯಾಲಯವೊಂದು ನೀಡಿದ್ದ ಮತ್ತು ಬಾಂಬೆ ಹೈಕೋರ್ಟ್ ಔರಂಗಾಬಾದ್ ಪೀಠ ಎತ್ತಿ ಹಿಡಿದಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು ಅಹಮದ್‌ನಗರ ಮಹಾನಗರ ಪಾಲಿಕೆ ತನ್ನ ಉದ್ಯೋಗಿಗಳ ವಾರಸುದಾರರಿಗೆ ಅವರ ನಿವೃತ್ತಿ ಆಧರಿಸಿ ನೇಮಕಾತಿ ನೀಡುವಂತೆ ಕೈಗಾರಿಕಾ ನ್ಯಾಯಾಲಯ ಈ ಹಿಂದೆ ಆದೇಶಿಸಿತ್ತು.
[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]