ಅತಿಥಿ ಉಪನ್ಯಾಸಕರ ನೇಮಕ: ಕನಿಷ್ಠ ಶೈಕ್ಷಣಿಕ ಅರ್ಹತೆ ಸೇರಿದಂತೆ ಯುಜಿಸಿ ನಿಯಮಾವಳಿ ಪರಿಗಣಿಸಲು ಹೈಕೋರ್ಟ್‌ ಸೂಚನೆ

ಹಾಲಿ ನಡೆದಿರುವ ನೇಮಕಗಳಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿರುವ ನ್ಯಾಯಾಲಯವು ಮುಂದಿನ ನೇಮಕಾತಿ ವೇಳೆ ಯುಜಿಸಿಯ ನಿಯಮಾವಳಿಗಳನ್ನು ಪರಿಗಣಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿದೆ.
Karnataka HC and Justice B M Shyam Prasad
Karnataka HC and Justice B M Shyam Prasad

ರಾಜ್ಯದ ಸರ್ಕಾರಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡುವಾಗ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿಗದಿಪಡಿಸಿರುವ ಕನಿಷ್ಠ ಶೈಕ್ಷಣಿಕ ಅರ್ಹತೆ ಸೇರಿದಂತೆ ಎಲ್ಲ ನಿಯಮಾವಳಿಗಳನ್ನು ಪರಿಗಣಿಸಿಯೇ ನೇಮಕ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕೆ ವಿ ರಂಜಿತ್ ನಾಯಕ್ ಮತ್ತಿತರ 50ಕ್ಕೂ ಹೆಚ್ಚು ಮಂದಿ ಅತಿಥಿ ಉಪನ್ಯಾಸಕರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್‌ಪ್ರಸಾದ್ ಅವರ ನೇತೃತ್ವದ ಏಕಸದಸ್ಯ ಪೀಠವು ಇತ್ಯರ್ಥಪಡಿಸಿದೆ.

ರಾಜ್ಯ ಸರ್ಕಾರ 2022ರ ಜನವರಿ 14ರಂದು ಯುಜಿಸಿ ನಿಗದಿಪಡಿಸಿದ ಕನಿಷ್ಠ ಶೈಕ್ಷಣಿಕ ಅರ್ಹತೆ ಇಲ್ಲದಿದ್ದ ಅಭ್ಯರ್ಥಿಗಳೂ ಸಹ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆದರೆ, ಆ ವಿದ್ಯಾರ್ಹತೆಗಳನ್ನು ನೇಮಕವಾದ ಮೂರು ವರ್ಷಗಳೊಳಗೆ ಹೊಂದಬೇಕು ಎಂದು ಆದೇಶ ಹೊರಡಿಸಿತ್ತು. ಈ ಆದೇಶ ಮತ್ತು ಕೃಪಾಂಕ ನೀಡುವುದನ್ನು ಅರ್ಜಿದಾರರು ಪ್ರಶ್ನಿಸಿದ್ದರು.

ಹಾಲಿ ನಡೆದಿರುವ ನೇಮಕಗಳಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿರುವ ನ್ಯಾಯಾಲಯವು ಮುಂದಿನ ನೇಮಕಾತಿ ವೇಳೆ ಯುಜಿಸಿಯ ನಿಯಮ ಪರಿಗಣಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

‘‘ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರಿಗೆ ಅವರು ಸಲ್ಲಿಸಿರುವ ವರ್ಷಗಳ ಸೇವೆಗೆ ಅನುಗುಣವಾಗಿ ವರ್ಷಕ್ಕೆ 3 ಅಂಕಗಳಂತೆ ಗರಿಷ್ಠ 16 ವರ್ಷಗಳ ಕೃಪಾಂಕ ನೀಡಿಕೆ ಸಮಂಜಸವಾಗಿದೆ. ಈ ಕುರಿತು 2022ರ ಜನವರಿ 17ರಂದು ಹೊರಡಿಸಿರುವ ಆದೇಶ ಸರಿ ಇದೆ ’’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅರ್ಜಿದಾರರ ಪರ ವಕೀಲ ಕೆ ರವಿಶಂಕರ್‌ ಅವರು “ಅತಿಥಿ ಉಪನ್ಯಾಸಕರು ಯುಜಿಸಿ ನಿಯಮದಂತೆ ಕನಿಷ್ಠ ವಿದ್ಯಾರ್ಹತೆ ಹೊಂದಬೇಕು. ಆದರೆ, ಸರ್ಕಾರ ಆ ನಿಯಮಗಳನ್ನು ಪಾಲಿಸದೆ ವಿದ್ಯಾರ್ಹತೆ ಹೊಂದಲು ನೇಮಕಗೊಂಡ ಮೂರು ವರ್ಷಗಳವರೆಗೆ ಕಾಲಾವಕಾಶ ನೀಡಿದೆ ಮತ್ತು ಕೃಪಾಂಕ ನೀಡಿಕೆ ಕ್ರಮ ಸರಿಯಿಲ್ಲ” ಎಂದು ವಾದಿಸಿದ್ದರು.

ಯುಜಿಸಿ ಪ್ರತಿನಿಧಿಸಿದ್ದ ವಕೀಲ ಸಿ ಶಶಿಕಾಂತ್‌ ಅವರು “ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಇತರೆ ಶೈಕ್ಷಣಿಕ ಸಿಬ್ಬಂದಿ ನೇಮಕಾತಿ ಸಂಬಂಧ ಕನಿಷ್ಠ ವಿದ್ಯಾರ್ಹತೆ ಕುರಿತ ಯುಜಿಸಿ ನಿಯಮಾವಳಿ ನಿಯಮ 13 ಹಾಗೂ ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಮಾನದಂಡಗಳು - 2018 ರ ಅನುಸಾರ ಅತಿಥಿ ಉಪನ್ಯಾಸಕರ ನೇಮಕಕ್ಕೆ ಕನಿಷ್ಠ ವಿದ್ಯಾರ್ಹತೆಗಳನ್ನು ನಿಗದಿಪಡಿಸಿದೆ. ಹೀಗಾಗಿ, ಅವುಗಳನ್ನು ಪಾಲನೆ ಮಾಡಬೇಕಿದೆ” ಎಂದು ವಾದಿಸಿದ್ದರು.

Related Stories

No stories found.
Kannada Bar & Bench
kannada.barandbench.com