
ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ (ಐಸೆಕ್) ನಿರ್ದೇಶಕರ ಹುದ್ದೆಯ ನೇಮಕಾತಿಗೆ ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆ ಹಾಗೂ ಅನುಭವದ ಮಾನದಂಡಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ.
ಐಸೆಕ್ ಪ್ರಾಧ್ಯಾಪಕ ಡಾ. ಸಿ ಎಂ ಲಕ್ಷ್ಮಣ ಎಂಬುವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಚ್ ಟಿ ನರೇಂದ್ರ ಪ್ರಸಾದ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ಪೀಠ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಐಸೆಕ್ ಸಂಸ್ಥೆಯ ರಿಜಿಸ್ಟ್ರಾರ್, ಐಸೆಕ್ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಸೆಪ್ಟಂಬರ್ 8ಕ್ಕೆ ಮುಂದೂಡಿತು. ಅರ್ಜಿದಾರರ ಪರ ವಕೀಲ ವಿಕ್ರಂ ಫಡ್ಕೆ ವಾದ ಮಂಡಿಸಿದರು.
ಐಸೆಕ್ ಸಂಸ್ಥೆಯ ನಿರ್ದೇಶಕರ ನೇಮಕಾತಿ ಸಂಬಂಧ 2025ರ ಮಾರ್ಚ್ 1ರಂದು ನಡೆದ ಆಡಳಿತ ಮಂಡಳಿಯ 214ನೇ ಸಭೆಯಲ್ಲಿ ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಯಿತು. ಇದು ನಿಯಮಬಾಹಿರವಾಗಿದೆ. ನಿರ್ದೇಶಕರ ನೇಮಕಾತಿಗೆ ಮಾನದಂಡಗಳನ್ನು ನಿಗದಿಪಡಿಸಲು ಆಡಳಿತ ಮಂಡಳಿಗೆ ಅಧಿಕಾರವಿಲ್ಲ. ಇದರ ಮಧ್ಯೆ ನಿರ್ದೇಶಕರ ನೇಮಕಾತಿ ಸಂಬಂಧ ರಿಜಿಸ್ಟ್ರಾರ್ 2025ರ ಜುಲೈ 26ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಆಡಳಿತ ಮಂಡಳಿಯ ತೀರ್ಮಾನಕ್ಕೆ ವ್ಯತಿರಿಕ್ತವಾಗಿ ಮಾನದಂಡಗಳನ್ನು ಸೂಚಿಸಲಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಹಾಗಾಗಿ, ಆಡಳಿತ ಮಂಡಳಿಯ ನಿರ್ಣಯ ಹಾಗೂ ರಿಜಿಸ್ಟ್ರಾರ್ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು. ಅಲ್ಲದೆ ಅರ್ಜಿದಾರರಿಗೆ ನಿರ್ದೇಶಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಐಸೆಕ್ ಸಂಸ್ಥೆಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.