ಲೋಕಾಯುಕ್ತರನ್ನು ನೇಮಕ ಮಾಡುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರ ಜೊತೆ ಸಮಾಲೋಚನೆ ನಡೆಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಒಂದು ವಾರದಲ್ಲಿ ಈ ಬಗ್ಗೆ ನಿಮಗೆ ತಿಳಿಯಲಿದೆ ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಅರ್ಜಿದಾರರಿಗೆ ತಿಳಿಸಿತು.
ಲೋಕಾಯುಕ್ತ ಹುದ್ದೆ ಭರ್ತಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ವಕೀಲ ಎಸ್ ಉಮಾಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು. ಈ ವೇಳೆ ಮೇಲಿನಂತೆ ತಿಳಿಸಿತು.
ಲೋಕಾಯುಕ್ತರನ್ನು ನೇಮಕ ಮಾಡುವುದಕ್ಕೆ ಸಂಬಂಧಿಸಿದ ವಿಚಾರವು ಪರಿಗಣನೆಯಲ್ಲಿದೆ. ನೀವು ಇದನ್ನು (ಅರ್ಜಿ) ಮುಂದುವರಿಸುವ ಅಗತ್ಯವಿಲ್ಲ. ಈಚೆಗೆ ಉಪಲೋಕಾಯುಕ್ತ ಹುದ್ದೆಗೆ ನಿವೃತ್ತ ನ್ಯಾಯಮೂರ್ತಿಯನ್ನು ನೇಮಕ ಮಾಡಲಾಗಿದೆ. ಈಗ ಲೋಕಾಯುಕ್ತ ಹುದ್ದೆ ಮಾತ್ರ ಖಾಲಿ ಇದ್ದು, ಅದನ್ನು ತುಂಬುವ ಕೆಲಸ ಸಕ್ರಿಯವಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಅವರು ಮುಖ್ಯ ನ್ಯಾಯಮೂರ್ತಿಗಳ ಜೊತೆ ಸಮಾಲೋಚನೆ ನಡೆಸುವ ಪ್ರಕ್ರಿಯೆ ನಡೆಯುತ್ತಿದೆ. ಒಂದು ವಾರದಲ್ಲಿ ಈ ಬಗ್ಗೆ ನಿಮಗೆ ಮಾಹಿತಿ ತಿಳಿಯಲಿದೆ. ನಿಮ್ಮ ಸಂತೋಷಕ್ಕಾಗಿ ಹತ್ತು ದಿನಗಳ ಬಳಿಕ ಮನವಿಯನ್ನು ವಿಚಾರಣೆಗೆ ನಿಗದಿಪಡಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹೇಳಿದರು.
ವಕೀಲ ಎಸ್ ಉಮಾಪತಿ ಅವರು ನಾಲ್ಕು ತಿಂಗಳಿಂದ ಲೋಕಾಯುಕ್ತರ ನೇಮಕವಾಗಿಲ್ಲ. ಹಿಂದೆ ಲೋಕಾಯುಕ್ತರನ್ನು ನೇಮಕ ಮಾಡಲು ಎರಡು ವರ್ಷಗಳನ್ನು ರಾಜ್ಯ ಸರ್ಕಾರ ತೆಗೆದುಕೊಂಡಿತ್ತು. 2019ರಲ್ಲಿ ನ್ಯಾಯಾಲಯವು ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿದ ಬಳಿಕ ರಾಜ್ಯ ಸರ್ಕಾರವು ಲೋಕಾಯುಕ್ತರನ್ನು ನೇಮಕ ಮಾಡುವ ಪ್ರಕ್ರಿಯೆ ಆರಂಭಿಸಿತ್ತು.