ಬಿಡಿಎ ಅಧ್ಯಕ್ಷ ಹುದ್ದೆಗೆ ಶಾಸಕ ವಿಶ್ವನಾಥ್‌ ನೇಮಕ: ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್‌

ಕಾನೂನಿನ ಪ್ರಕಾರ ಬಿಡಿಎ ಅಧ್ಯಕ್ಷರು ಪೂರ್ಣಾವಧಿಗೆ ನೇಮಕವಾಗಬೇಕು. ಶಾಸಕರಾದವರು ಬಿಡಿಎ ಅಧ್ಯಕ್ಷರಾಗಿ ಪೂರ್ಣಾವಧಿಗೆ ಹೇಗೆ ಕಾರ್ಯ ನಿರ್ವಹಿಸಲು ಸಾಧ್ಯ? ಎಂಬ ಕುರಿತು ವಿವರ ನೀಡುವಂತೆ ಸರ್ಕಾರದ ವಕೀಲರಿಗೆ ಸೂಚಿಸಿದ ಪೀಠ.
MLA S R Vishwanath and Karnataka HC

MLA S R Vishwanath and Karnataka HC

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷ ಹುದ್ದೆಗೆ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಅವರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ಎರಡು ವಾರ ಕಾಲಾವಕಾಶ ಕಲ್ಪಿಸಿದೆ.

ವಕೀಲ ಎ ಎಸ್ ಹರೀಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಅರ್ಜಿಗೆ ಎರಡು ವಾರದಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಯುಕ್ತರಿಗೆ ಸೂಚಿಸಿತು. ಜತೆಗೆ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಒಂದು ವಾರ ಕಾಲಾವಕಾಶ ನೀಡಬೇಕೆಂದು ಶಾಸಕ ಎಸ್ ಆರ್ ವಿಶ್ವನಾಥ್ ಅವರ ಪರ ವಕೀಲರು ಮಾಡಿದ ಮನವಿಯನ್ನು ಪೀಠವು ಪುರಸ್ಕರಿಸಿತು.

ಇದಕ್ಕೂ ಮುನ್ನ ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲ ಪ್ರಿನ್ಸ್ ಐಸಾಕ್‌ ಅವರು “ಬಿಡಿಎ ಕಾಯಿದೆಯ ಸೆಕ್ಷನ್ 3(5)ರ ಪ್ರಕಾರ ಪ್ರಾಧಿಕಾರದ ಅಧ್ಯಕ್ಷರಾದವರು ಪೂರ್ಣಾವಧಿ ಕಾರ್ಯ ನಿರ್ವಹಿಸಬೇಕು. ಶಾಸಕರಾದವರು ಪೂರ್ಣವಧಿಗೆ ಹೇಗೆ ಅಧ್ಯಕ್ಷರಾಗಲು ಸಾಧ್ಯ? ಹೇಗೆ ಸೇವೆ ಸಲ್ಲಿಸಲು ಸಾಧ್ಯ? ಹಾಗಾಗಿ, ಎಸ್ ಆರ್ ವಿಶ್ವನಾಥ್ ಅವರನ್ನು ಬಿಡಿಎ ಅಧ್ಯಕ್ಷ ಹುದ್ದೆಗೆ ನೇಮಕ ಮಾಡಿರುವ ಕ್ರಮ ಸರಿಯಲ್ಲ. ಸಂವಿಧಾನದ 191 (1) (ಎ) ವಿಧಿ ಪ್ರಕಾರ ಲಾಭದಾಯಕ ಹುದ್ದೆ ಪಡೆದರೆ ಶಾಸಕ ಹುದ್ದೆ ಕಳೆದುಕೊಳ್ಳುತ್ತಾರೆ ಎಂದು ವಿವರಿಸಿದರು.

ಸದನಕ್ಕೆ ಗೈರಾದರೂ ಶಾಸಕನಾಗಿರಬಹುದೇ?

ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹುದ್ದೆಗೆ ಶಾಸಕರನ್ನು ನೇಮಕ ಮಾಡಲು ಅವಕಾಶವಿರುವ ಕಾನೂನುಗಳ ಬಗ್ಗೆ ತಿಳಿಯಲು ಪೀಠ ಬಯಸಿತು. ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಶಾಸಕರನ್ನು ನೇಮಕ ಮಾಡುವುದರಿಂದ ಅನರ್ಹಗೊಳಿಸಲು ಆಗುವುದಿಲ್ಲ. ಆದರೆ, ಪ್ರಕರಣದಲ್ಲಿ ಬಿಡಿಎ ಅಧ್ಯಕ್ಷರಾಗಿ ಪೂರ್ಣಾವಧಿ ಇರುವುದು ಕಡ್ಡಾಯ. ಅಧ್ಯಕ್ಷರನ್ನಾಗಿ ಶಾಸಕರನ್ನು ನೇಮಕ ಮಾಡಿದ ಬಳಿಕ ಅವರು ಸದನ ಹಾಗೂ ಶಾಸಕರಿಗೆ ವಹಿಸಿದ ಕೆಲಸಕ್ಕೆ ಗೈರಾದರೆ, ಅವರು ಪ್ರಾಧಿಕಾರದ ಅಧ್ಯಕ್ಷನಾಗಿ ಉಳಿಯಬಹುದು. ಒಂದೊಮ್ಮೆ ಸದನಕ್ಕೆ ಹಾಜರಾಗದೇ ಇದ್ದರೆ ಶಾಸಕರಾಗಿ ಉಳಿಯಬಹುದೇ? ಎಂಬುದು ನಮ್ಮ ಪ್ರಶ್ನೆಯಾಗಿದೆ ಎಂದು ಪೀಠ ಹೇಳಿತು.

ಬಿಡಿಎ ಅಧ್ಯಕ್ಷರಾಗಿ ನೇಮಕಗೊಂಡ ಮೇಲೂ ಶಾಸಕರು ಸಂಬಳ ಪಡೆಯುತ್ತಿದ್ದಾರೆ ಎಂಬ ವಿಷಯವು ಲಾಭದಾಯಕ ಹುದ್ದೆ ಹೊಂದಿರುವ ವಿಚಾರಕ್ಕೆ ಸಂಬಂಧಿಸಿದೆ. ಪ್ರಾಧಿಕಾರಕ್ಕೆ ಗೌರವಾನ್ವಿತ ಅಧ್ಯಕ್ಷರಾಗಿಯೂ ಇರಬಹುದು. ಆಗ ಲಾಭದಾಯಕ ಹುದ್ದೆ ಹೊಂದಿದ್ದಾರೆ ಎಂದು ಹೇಳಲಾಗದು. ನಿಜವಾಗಿಯೂ ಬಿಡಿಎ ಅಧ್ಯಕ್ಷರಾಗಿ ಶಾಸಕ ವಿಶ್ವನಾಥ್ ಅವರು ಸಂಬಳ ಪಡೆಯುತ್ತಿದ್ದಾರಾ? ಎಂದು ಪ್ರಶ್ನಿಸಿದ ಪೀಠವು ನಿಯಮದಲ್ಲಿ ಅವಕಾಶವಿದೆ ಎಂದ ಮಾತ್ರಕ್ಕೆ ಬಿಡಿಎ ಅಧ್ಯಕ್ಷರಾಗಿಯೂ ವಿಶ್ವನಾಥ್ ಸಂಬಳ ಪಡೆಯುತ್ತಿದ್ದಾರೆ ಎಂದು ಹೇಳಲಾಗದು. ಸಂಬಳ ಪಡೆಯದೇ ಇರಬಹುದು. ಈ ವಿಚಾರವನ್ನು ಮುಂದೆ ಪರಿಗಣಿಸೋಣ ಎಂದು ನುಡಿಯಿತು.

Also Read
ಪೊಲೀಸ್‌, ಸಬ್‌ರಿಜಿಸ್ಟ್ರಾರ್‌ ಕಚೇರಿ, ಬಿಡಿಎ, ಪಾಲಿಕೆಗಳು ಭ್ರಷ್ಟಾಚಾರದ ಫಲವತ್ತಾದ ಭೂಮಿ: ನ್ಯಾ. ಶ್ರೀಶಾನಂದ

ನಂತರ ಕಾನೂನಿನ ಪ್ರಕಾರ ಬಿಡಿಎ ಅಧ್ಯಕ್ಷರು ಪೂರ್ಣಾವಧಿಗೆ ನೇಮಕವಾಗಬೇಕು. ಶಾಸಕರಾದವರು ಬಿಡಿಎ ಅಧ್ಯಕ್ಷರಾಗಿ ಪೂರ್ಣಾವಧಿಗೆ ಹೇಗೆ ಕಾರ್ಯ ನಿರ್ವಹಿಸಲು ಸಾಧ್ಯ? ಎಂಬ ಕುರಿತಂತೆ ವಿವರಣೆ ನೀಡುವಂತೆ ಸರ್ಕಾರದ ಪರ ವಕೀಲರಿಗೆ ಮೌಖಿಕವಾಗಿ ಸೂಚಿಸಿತು.

ಅಲ್ಲದೆ, ಅಭಿವೃದ್ಧಿ ಪ್ರಾಧಿಕಾರಗಳಿಗೆ ಅಧ್ಯಕ್ಷರಾಗಿ ಶಾಸಕರನ್ನು ನೇಮಕ ಮಾಡುವುದಕ್ಕೆ ಸಂಬಂಧಿಸಿದಂತೆ ಇತರೆ ರಾಜ್ಯದಲ್ಲಿರುವ ಕಾನೂನಿನ ಅಂಶಗಳೇನು? ಅಲ್ಲಿ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥರಾಗಿ ಶಾಸಕರನ್ನು ನೇಮಕ ಮಾಡಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲಾಗಿದೆಯೇ ಎಂಬ ಬಗ್ಗೆ ತಿಳಿದು ನ್ಯಾಯಾಲಯಕ್ಕೆ ಮಾಹಿತಿ ನೀಡುವಂತೆ ಅರ್ಜಿದಾರ ಪರ ವಕೀಲ ಪ್ರಿನ್ಸ್ ಐಸಾಕ್‌ಗೆ ಇದೇ ವೇಳೆ ಪೀಠವು ನಿರ್ದೇಶಿಸಿತು.

Related Stories

No stories found.
Kannada Bar & Bench
kannada.barandbench.com