ನಿರ್ದಿಷ್ಟ ಜಾತಿ, ವಂಶದವರನ್ನು ಅರ್ಚಕರ ನೇಮಕಾತಿಗೆ ಆಧರಿಸುವುದು ಅಗತ್ಯ ಧಾರ್ಮಿಕ ಪದ್ಧತಿಯಲ್ಲ: ಕೇರಳ ಹೈಕೋರ್ಟ್‌

ಅರ್ಚಕರ ನೇಮಕಾತಿಗಾಗಿ 'ತಂತ್ರ ವಿದ್ಯಾಲಯಗಳು' ನೀಡುವ ಅನುಭವ ಪ್ರಮಾಣಪತ್ರಗಳನ್ನು ಪರಿಗಣಿಸಲು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮತ್ತು ಕೇರಳ ದೇವಸ್ವಂ ನೇಮಕಾತಿ ಮಂಡಳಿ (ಕೆಡಿಆರ್‌ಬಿ) ತೆಗೆದುಕೊಂಡ ನಿರ್ಧಾರ ಎತ್ತಿಹಿಡಿದ ನ್ಯಾಯಾಲಯ.
Hindu Priests
Hindu Priests
Published on

ನಿರ್ದಿಷ್ಟ ಜಾತಿ ಅಥವಾ ವಂಶಾವಳಿಯವರನ್ನು ಮಾತ್ರವೇ ದೇವಾಲಯದ ಅರ್ಚಕರ ನೇಮಕಾತಿಗೆ ಪರಿಗಣಿಸಬೇಕು ಎಂದು ಯಾರೂ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್‌ ಹೇಳಿದೆ. ಮುಂದುವರೆದು, ಅಂತಹ ಜಾತಿ ಅಥವಾ ವಂಶಾವಳಿ ಆಧರಿತ ನೇಮಕಾತಿಯು ಅಗತ್ಯ ಧಾರ್ಮಿಕ ಪದ್ಧತಿಯಾಗುವುದಿಲ್ಲ, ಹಾಗಾಗಿ ಅದಕ್ಕೆ ಭಾರತದ ಸಂವಿಧಾನದಡಿ ಯಾವುದೇ ರಕ್ಷಣೆ ಇಲ್ಲ ಎಂದು ಅದು ತೀರ್ಪು ನೀಡಿದೆ [ಅಖಿಲ ಕೇರಳ ತಂತ್ರಿ ಸಮಾಜ ಮತ್ತು ಕೇರಳ ರಾಜ್ಯ ಮತ್ತು ಇತರರು].

ನ್ಯಾಯಮೂರ್ತಿ ರಾಜಾ ವಿಜಯರಾಘವನ್ ವಿ ಮತ್ತು ನ್ಯಾಯಮೂರ್ತಿ ಕೆ ವಿ ಜಯಕುಮಾರ್ ಅವರ ವಿಭಾಗೀಯ ಪೀಠವು, ಅರೆಕಾಲಿಕ ದೇವಾಲಯ ಅರ್ಚಕರ ನೇಮಕಾತಿಗಾಗಿ 'ತಂತ್ರ ವಿದ್ಯಾಲಯಗಳು' ನೀಡುವ ಅನುಭವ ಪ್ರಮಾಣಪತ್ರಗಳನ್ನು ಪರಿಗಣಿಸಲು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮತ್ತು ಕೇರಳ ದೇವಸ್ವಂ ನೇಮಕಾತಿ ಮಂಡಳಿ (ಕೆಡಿಆರ್‌ಬಿ) ತೆಗೆದುಕೊಂಡ ನಿರ್ಧಾರವನ್ನು ಎತ್ತಿಹಿಡಿದು ಈ ತೀರ್ಪು ನೀಡಿದೆ.

ಕೇರಳದ ಸುಮಾರು 300 ಸಾಂಪ್ರದಾಯಿಕ ತಂತ್ರಿ ಕುಟುಂಬಗಳನ್ನು ಒಳಗೊಂಡ ಅಖಿಲ ಕೇರಳ ತಂತ್ರಿ ಸಮಾಜ ಎಂಬ ಹೆಸರಿನ ಸಂಘಟನೆಯು ದೇವಾಲಯದ ಧಾರ್ಮಿಕ ವಿಧಿವಿಧಾನಗಳ ಬಗ್ಗೆ ಯುವ ಪೀಳಿಗೆಗೆ ತರಬೇತಿ ನೀಡುತ್ತಿದ್ದು, ತಂತ್ರ ವಿದ್ಯಾಲಯಗಳ ಪ್ರಮಾಣಪತ್ರಗಳನ್ನು ಆಧರಿಸಿ ನಡೆಸುವ ಅರ್ಚಕರ ನೇಮಕಾತಿಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿತ್ತು. ಈ ವಿಷಯದ ಬಗ್ಗೆ ಸಂಘದ ಅಧ್ಯಕ್ಷ ಈಶಾನನ್ ನಂಬೂದಿರಿಪಾಡ್ ಕೂಡ ಸಂಘದ ಜೊತೆಯಲ್ಲಿ ಅರ್ಜಿ ದಾಖಲಿಸಿದ್ದರು.

ತಿರುವಾಂಕೂರು ದೇವಸ್ವಂ ಮಂಡಳಿಯ ಅಧಿಕಾರಿಗಳು ಮತ್ತು ಸೇವಕರ ಸೇವಾ ನಿಯಮಗಳು, 2022ರ ನಿಯಮ 6(1)(b) ಅಡಿಯಲ್ಲಿ ಅರ್ಚಕರ ಅರ್ಹತೆಯ ಕುರಿತಾದ 2(ii) ನಿಬಂಧನೆಯು ಪ್ರಕರಣದ ಕೇಂದ್ರ ಬಿಂದುವಾಗಿದೆ. ಈ ನಿಯಮ ಮತ್ತು ಸಂಬಂಧಿತ ಅಧಿಸೂಚನೆಗಳನ್ನು ತಿರುವಾಂಕೂರು-ಕೊಚ್ಚಿನ್ ಹಿಂದೂ ಧಾರ್ಮಿಕ ಸಂಸ್ಥೆಗಳ ಕಾಯ್ದೆ, 1950 ಮತ್ತು ಕೇರಳ ದೇವಸ್ವಂ ನೇಮಕಾತಿ ಮಂಡಳಿ ಕಾಯ್ದೆ, 2015 ರ ಅಡಿಯಲ್ಲಿ ರೂಪಿಸಲಾಗಿದೆ.

ಈ ನಿಯಮದಡಿಯಲ್ಲಿ, ಅರೆಕಾಲಿಕ ದೇವಾಲಯ ಅರ್ಚಕರಾಗಿ ನೇಮಕಗೊಳ್ಳಲು ಅರ್ಹತೆ ಪಡೆಯಲು ಇರುವ ಮಾನದಂಡವೆಂದರೆ ಟಿಡಿಕೆ ಅಥವಾ ಕೆಡಿಆರ್‌ಬಿ ಅನುಮೋದಿಸಿದ "ಯಾವುದೇ ತಂತಿ ವಿದ್ಯಾ ಪೀಠಗಳಿಂದ ಸಾಂತಿ ಕೋರ್ಸ್‌ನಲ್ಲಿ (ಅರ್ಚಕರಾಗಲು ಇರುವ ವೃತ್ತಿಪರ ಕೋರ್ಸ್‌) ಪ್ರಮಾಣಪತ್ರ ಪಡೆದಿರಬೇಕು ಎಂದು ಹೇಳಲಾಗಿದೆ.

ಇದಕ್ಕೆ ಅಕ್ಷೇಪಣೆ ಸೂಚಿಸಿರುವ ಅರ್ಜಿದಾರರು, ಅಂತಹ ಅರ್ಹತೆಗಳನ್ನು ಸೂಚಿಸಲು ಟಿಡಿಬಿ ಅಥವಾ ಕೆಡಿಆರ್‌ಬಿ ಯಾವುದೇ ಅಧಿಕಾರ ಹೊಂದಿಲ್ಲ ಎಂಬುದು ಅರ್ಜಿದಾರರ ವಾದವಾಗಿತ್ತು.

ಕೆಡಿಆರ್‌ಬಿ ಮತ್ತು ಟಿಡಿಬಿ ಕೆಲವು 'ತಂತ್ರ ವಿದ್ಯಾಲಯಗಳನ್ನು' ಅವುಗಳಲ್ಲಿ ಶಿಕ್ಷಣದ ಕೊರತೆಯ ನಡುವೆಯೂ ತಂತ್ರಿ ಅನುಭವ ಪ್ರಮಾಣಪತ್ರಗಳನ್ನು ನೀಡಲು ಅರ್ಹವೆಂದು ಗುರುತಿಸಿದೆ. ಆದರೆ, ಹಾಗೆ ಗುರುತಿಸಲು ಅದಕ್ಕೆ ಯಾವುದೇ ಅಧಿಕಾರವಿಲ್ಲದಿದ್ದರೂ ಸ್ವೇಚ್ಛೆಯಿಂದ ಅಂತಹ ಕ್ರಮಕ್ಕೆ ಮುಂದಾಗಿದ್ದು ಇಂತಹ ನಡೆ ಸಾಂಪ್ರದಾಯಿಕ ತಾಂತ್ರಿಕ ಶಿಕ್ಷಣವನ್ನು ದುರ್ಬಲಗೊಳಿಸುತ್ತದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

ಈ ಬಗೆಯ ನಡೆ, ದೀರ್ಘಕಾಲದಿಂದ ನಡೆದುಕೊಂಡು ಬಂದಿರುವ ದೇವಾಲಯಗಳಲ್ಲಿ ತಂತ್ರಿಗಳು ನೀಡುವ ಪ್ರಮಾಣಪತ್ರದ ಸಂಪ್ರದಾಯವನ್ನು ಉಲ್ಲಂಘಿಸಿದೆ ಎಂದು ಆಕ್ಷೇಪಿಸಲಾಗಿದೆ. ಇದು ತಂತ್ರಿ ಶಿಕ್ಷಣವನ್ನು ದೀರ್ಘಕಾಲದಿಂದ ನೀಡಿಕೊಂಡು ಬಂದಿರುವ ಸಂಪ್ರದಾಯವನ್ನು ಉಲ್ಲಂಘಿಸುತ್ತದೆ ಎಂದು ಅವರು ವಾದಿಸಿದ್ದರು.

ಆಗಮಗಳು ಮತ್ತು ತಂತ್ರಸಮುಚ್ಚಯಂನಂತಹ ಧಾರ್ಮಿಕ ಗ್ರಂಥಗಳು ಮತ್ತು ಪ್ರಾಧಿಕಾರಗಳಿಗೆ ಅನುಗುಣವಾಗಿ ಅರ್ಚಕರನ್ನು ನೇಮಿಸುವುದು ಅಗತ್ಯ ಧಾರ್ಮಿಕ ಪದ್ಧತಿಯಾಗಿದೆ ಎಂದು ಅವರು ಪ್ರತಿಪಾದಿಸಿದ್ದರು.

ಆದರೆ ಈ ವಾದವನ್ನು ಪುರಸ್ಕರಿಸಿದ ನ್ಯಾಯಾಲಯವು, 1972 ರ ಶೇಷಮ್ಮಲ್ ವರ್ಸಸ್ ತಮಿಳುನಾಡು ರಾಜ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನಲ್ಲಿ, ಅರ್ಚಕರ (ದೇವಾಲಯದ ಅರ್ಚಕರು) ನೇಮಕಾತಿ ಮೂಲಭೂತವಾಗಿ, ಟ್ರಸ್ಟಿಯಿಂದ ನಿರ್ವಹಿಸಲ್ಪಡುವ ಜಾತ್ಯತೀತ ಕರ್ತವ್ಯವಾಗಿದೆ ಎಂದು ಇದಾಗಲೇ ತೀರ್ಮಾನಿಸಲಾಗಿದೆ ಎಂದಿತು.

ಮುಂದುವರೆದು, ಅರ್ಚಕ, ಒಮ್ಮೆ ನೇಮಕಗೊಂಡ ನಂತರ ಪವಿತ್ರ ಕಾರ್ಯಗಳನ್ನು ನಿರ್ವಹಿಸುತ್ತಾನೆ, ಆದರೆ ಅವರನ್ನು ನೇಮಿಸುವ ಕಾರ್ಯವನ್ನು ಜಾತ್ಯತೀತ ಪ್ರಾಧಿಕಾರ (ಟ್ರಸ್ಟಿ) ನಿರ್ವಹಿಸುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಇದು ಮತ್ತು ಇಂತದ್ದೇ ಸಂಬಂಧಿತ ಪ್ರಕರಣಗಳಲ್ಲಿ ನೀಡಿರುವ ನ್ಯಾಯಾಲಯಗಳ ತೀರ್ಪುಗಳನ್ನು (ಕೇಸ್‌ ಲಾ) ಅವಲಂಬಿಸಿದ ಹೈಕೋರ್ಟ್‌, "ಅರ್ಚಕರ ನೇಮಕಾತಿಯನ್ನು ಧಾರ್ಮಿಕ ಗ್ರಂಥಗಳು, ಆಗಮಗಳು ಮತ್ತು ತಂತ್ರಸಮುಚ್ಚಯಂಗಳಿಗೆ ಅನುಗುಣವಾಗಿ ಮಾಡಬೇಕು, ಏಕೆಂದರೆ ಅದು ಅಗತ್ಯ ಧಾರ್ಮಿಕ ಆಚರಣೆಯಾಗಿದೆ ಎಂಬ ಅರ್ಜಿದಾರರ ವಾದವನ್ನು ಒಪ್ಪಿಕೊಳ್ಳಲಾಗುವುದಿಲ್ಲ" ಎಂದು ತೀರ್ಪು ನೀಡಿತು.

ವಿಚಾರಣೆಯ ಸಮಯದಲ್ಲಿ ಪ್ರಕರಣದಲ್ಲಿ ಪ್ರತಿವಾದಿಗಳಾದ ಸರ್ಕಾರ ಮತ್ತು ಪ್ರಾಧಿಕಾರದ ಅಧಿಕಾರಿಗಳು, ಅರ್ಜಿದಾರರ ಉದ್ದೇಶ ದೇವಾಲಯದ ಅರ್ಚಕರ ನೇಮಕಾತಿಯನ್ನು ಆನುವಂಶಿಕ ಸವಲತ್ತಾಗಿ ಶಾಶ್ವತಗೊಳಿಸುವುದಾಗಿದೆ ಎಂದು ವಾದಿಸಿದರು. ಅಲ್ಲದೆ, ಸಂಘವು ವಿಶೇಷವಾಗಿ ಬ್ರಾಹ್ಮಣ ಸಮುದಾಯದ ಸದಸ್ಯರನ್ನು ಮಾತ್ರ ಒಳಗೊಂಡಿದೆ ಎಂದು ಗಮನಸೆಳೆದರು. ಕನಿಷ್ಠ ಏಳು ತಲೆಮಾರುಗಳಿಂದ ದೇವಾಲಯಗಳಲ್ಲಿ ಅರ್ಚಕರಾಗಿ ಪೂಜೆಯನ್ನು ನಡೆಸುತ್ತಿರುವ ತಂತ್ರಿ ಕುಟುಂಬಗಳಿಗೆ ಸೇರಿದವರಿಗೆ ಮಾತ್ರ ಸಂಘದ ಸದಸ್ಯತ್ವವನ್ನು ಸೀಮಿತಗೊಳಿಸಲಾಗಿದೆ ಎಂದ ಪ್ರತಿವಾದಿಗಳು ವಾದಿಸಿದರು.

ಪ್ರತಿವಾದಿಗಳ ಕಳವಳವನ್ನು ಪರಿಹರಿಸಿದ ನ್ಯಾಯಾಲಯವು, ಜಾತಿ ಅಥವಾ ವಂಶಾವಳಿ ಆಧಾರಿತವಾಗಿ ಮಾಡಲಾಗುವ ದೇವಾಲಯದ ಅರ್ಚಕರ ನೇಮಕಾತಿಯು ಅಗತ್ಯ ಧಾರ್ಮಿಕ ಪದ್ಧತಿಯಾಗಿಲ್ಲ, ಹಾಗಾಗಿ, ಯಾವುದೇ ಸಾಂವಿಧಾನಿಕ ರಕ್ಷಣೆಯನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿತು.

"ಅರ್ಚಕರ ನೇಮಕಾತಿಗೆ ಅರ್ಹರಾಗಲು ಒಬ್ಬ ವ್ಯಕ್ತಿಯು ನಿರ್ದಿಷ್ಟ ಜಾತಿ ಅಥವಾ ವಂಶಾವಳಿಗೆ ಸೇರಿದವರಾಗಿರಬೇಕು ಎಂದು ಒತ್ತಾಯಿಸುವುದನ್ನು, ನಮ್ಮ ಪರಿಗಣಿತ ಅಭಿಪ್ರಾಯದಲ್ಲಿ, ಅತ್ಯಗತ್ಯ ಧಾರ್ಮಿಕ ಪದ್ಧತಿ, ವಿಧಿ ಅಥವಾ ಪೂಜಾ ವಿಧಾನ ಎಂದು ಅರ್ಥೈಸಲಾಗುವುದಿಲ್ಲ. ಪ್ರಸ್ತುತ ಪ್ರಕರಣದಲ್ಲಿ ಅಂತಹ ಹಕ್ಕನ್ನು ಸಮರ್ಥಿಸಲು ಯಾವುದೇ ವಾಸ್ತವಿಕ ಅಥವಾ ಕಾನೂನಿನ ಆಧಾರವನ್ನು ಸ್ಥಾಪಿಸಲಾಗಿಲ್ಲ. ಅಂತಹ ಹುದ್ದೆಗಳಿಗೆ ಆಧ್ಯಾತ್ಮಿಕ ಕಾರ್ಯಗಳೊಂದಿಗೆ ಸಂಬಂಧವಿಲ್ಲದ ವ್ಯಕ್ತಿಗಳನ್ನು ಪರಿಗಣಿಸಲಾಗುತ್ತಿದೆ. ಇದು ಭಾರತದ ಸಂವಿಧಾನದ 25 ಮತ್ತು 26 ನೇ ವಿಧಿಗಳ ಅಡಿಯಲ್ಲಿ ಖಾತರಿಪಡಿಸಲಾದ ಅರ್ಜಿದಾರರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂಬ ವಾದವು ಸಮರ್ಥನೀಯವಲ್ಲ" ಎಂದು ನ್ಯಾಯಾಲಯವು ಅಕ್ಟೋಬರ್ 22 ರ ತೀರ್ಪಿನಲ್ಲಿ ಹೇಳಿದೆ.

"ದಬ್ಬಾಳಿಕೆಗೆ ಕಾರಣವಾಗುವ, ಹಾನಿಕಾರಕವಾದ, ಸಾರ್ವಜನಿಕ ನೀತಿಗೆ ವಿರುದ್ಧವಾದ ಅಥವಾ ದೇಶದ ಕಾನೂನನ್ನು ಅವಹೇಳನ ಮಾಡುವಂತಹ ಯಾವುದೇ ಪದ್ಧತಿ ಅಥವಾ ಆಚರಣೆಯು ಸಂವಿಧಾನದ ಅಡಿಯಲ್ಲಿ ನ್ಯಾಯವ್ಯಾಪ್ತಿಯನ್ನು ಚಲಾಯಿಸುವ ನ್ಯಾಯಾಲಯಗಳಿಂದ ಮಾನ್ಯತೆ ಅಥವಾ ರಕ್ಷಣೆಯನ್ನು ಪಡೆಯಲು ಸಾಧ್ಯವಿಲ್ಲ" ಎಂದು ಪೀಠವು ಹೇಳಿತು.

ಅಂತಿಮವಾಗಿ ಅರ್ಜಿದಾರರ ವಾದವನ್ನು ತಿರಸ್ಕರಿಸಿ, ಅರೆಕಾಲಿಕ ದೇವಾಲಯ ಅರ್ಚಕರ ನೇಮಕಾತಿಗಾಗಿ 'ತಂತ್ರ ವಿದ್ಯಾಲಯಗಳು' ನೀಡುವ ಅನುಭವ ಪ್ರಮಾಣಪತ್ರಗಳನ್ನು ಗುರುತಿಸಲು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮತ್ತು ಕೇರಳ ದೇವಸ್ವಂ ನೇಮಕಾತಿ ಮಂಡಳಿ (ಕೆಡಿಆರ್‌ಬಿ) ತೆಗೆದುಕೊಂಡ ನಿರ್ಧಾರವನ್ನು ಎತ್ತಿಹಿಡಿಯಿತು.

Kannada Bar & Bench
kannada.barandbench.com