ಅಭಿಯೋಗ (ಪ್ರಾಸಿಕ್ಯೂಷನ್) ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖಾ ನಿರ್ದೇಶನಾಲಯದ ಹಂಗಾಮಿ ನಿರ್ದೇಶಕರಾಗಿದ್ದ ಎಚ್ ಕೆ ಜಗದೀಶ್ ನೇಮಕಾತಿಯನ್ನು ಕರ್ನಾಟಕ ಹೈಕೋರ್ಟ್ ತಕ್ಷಣ ಜಾರಿಗೆ ಬರುವಂತೆ ರದ್ದುಪಡಿಸಿದ್ದು, ತಡ ಮಾಡದೇ ನಿಯಮದ ಪ್ರಕಾರ ಅರ್ಹರನ್ನು ನೇಮಕ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೋಮವಾರ ನಿರ್ದೇಶಿಸಿದೆ.
ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಮತ್ತು ಶ್ರೇಣಿ ಮತ್ತು ನೇಮಕಾತಿ ನಿಯಮಗಳಿಗೆ ವಿರುದ್ಧವಾಗಿ 2019ರ ಆಗಸ್ಟ್ 5ರಂದು ಜಗದೀಶ್ ಅವರನ್ನು ಪ್ರಾಸಿಕ್ಯೂಷನ್ ಮತ್ತು ಸರ್ಕಾರಿ ದಾವೆ ವಿಭಾಗದ ಹಂಗಾಮಿ ನಿರ್ದೇಶಕರನ್ನಾಗಿ ನೇಮಕ ಮಾಡಿರುವುದನ್ನು ವಜಾ ಮಾಡುವಂತೆ ಕೋರಿ ವಕೀಲ ಸುಧಾ ಕಟ್ವಾ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ಪುರಸ್ಕರಿಸಿದೆ.
“ಸರ್ಕಾರದ ಆದೇಶದ ಪ್ರಕಾರ ಹಂಗಾಮಿ ನಿರ್ದೇಶಕರು ಒಂದು ವರ್ಷದ ನಂತರ ಯಾವುದೇ ಸಂದರ್ಭವಿದ್ದರೂ ಮುಂದುವರಿಯುವಂತಿಲ್ಲ. ಪದೋನ್ನತಿ ಪಡೆಯಲು ಅರ್ಹತೆ ಇಲ್ಲದ ವ್ಯಕ್ತಿಯನ್ನು ಹಂಗಾಮಿ ಹುದ್ದೆಗೆ ನೇಮಕ ಮಾಡುವಂತಿಲ್ಲ. ಕೊನೆಯದಾಗಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರ ಸಹಮತಿ ಇಲ್ಲದೇ ಆಕ್ಷೇಪಾರ್ಹವಾದ ಹುದ್ದೆಗೆ ಯಾರನ್ನೂ ನೇಮಿಸುವಂತಿಲ್ಲ. ಹಾಲಿ ನೇಮಕಾತಿಯು 2019ರಿಂದ ಮುಂದುವರಿಯುತ್ತಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ. ಹೀಗಾಗಿ, ತಕ್ಷಣದಿಂದ ಜಾರಿಗೆ ಬರುವಂತೆ ಹಂಗಾಮಿ ನಿರ್ದೇಶಕರನ್ನು ವಜಾ ಮಾಡಲಾಗಿದೆ. ಸರ್ಕಾರವು ಸಿಆರ್‌ಪಿಸಿ ಸೆಕ್ಷನ್ 25ಎ ಅಡಿ ನಿಯಮ ಪಾಲಿಸುವ ಮೂಲಕ ಹೊಸ ನೇಮಕಾತಿಯನ್ನು ತಡ ಮಾಡದೇ ಆರಂಭಿಸಬೇಕು” ಎಂದು ಆದೇಶದಲ್ಲಿ ಹೇಳಲಾಗಿದೆ.
ಅರ್ಜಿದಾರರ ಪರ ವಕೀಲ ಎಸ್ ಉಮಾಪತಿ ಅವರು “ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರ ಸಹಮತ ಪಡೆಯದೇ ಹಾಗೂ ಸಿಆರ್‌ಪಿಸಿ ಸೆಕ್ಷನ್ 25ಎ ವಿಧಿಗೆ ವಿರುದ್ಧವಾಗಿ ನೇಮಕಾತಿ ಮಾಡಲಾಗಿದೆ. ಪ್ರಾಸಿಕ್ಯೂಷನ್ ವಿಭಾಗದಲ್ಲಿ ಎರಡು ವರ್ಷ ಸೇವಾನುಭವ ಹೊಂದಿರುವವರನ್ನು ಹುದ್ದೆಗೆ ಪರಿಗಣಿಸಬೇಕು ಎಂದು ಹೇಳಲಾಗಿದೆ. ಇದೊಂದು ಸ್ವತಂತ್ರ ಸಂಸ್ಥೆಯಾಗಿದ್ದು, ಆಡಳಿತಕ್ಕೆ ಸಮಸ್ಯೆಯಾಗಲಿದೆ. 1995ರ ನ್ಯಾಯಾಂಗ ಅಧಿಕಾರಿಯು ಪ್ರಾಸಿಕ್ಯೂಷನ್ ವಿಭಾಗ ಮುನ್ನಡೆಸುತ್ತಿದ್ದಾರೆ” ಎಂದರು.
ಮುಂದುವರಿದು, “ಒಂದೊಮ್ಮೆ ಎರಡು ವರ್ಷ ಉಪ ನಿರ್ದೇಶಕರಾಗಿ ಅನುಭವ ಇಲ್ಲದವರು ಸಿಗದಿದ್ದಾಗ ಕನಿಷ್ಠ ಒಂದು ವರ್ಷ ಸೇವಾನುಭವ ಹೊಂದಿರುವವರನ್ನು ಪದೋನ್ನತಿಗೆ ಪರಿಗಣಿಸಬಹುದು ಎಂದು ಶ್ರೇಣಿ ಮತ್ತು ನೇಮಕಾತಿ ನಿಯಮಗಳಲ್ಲಿ ಹೇಳಲಾಗಿದೆ. ಸಿಆರ್‌ಪಿಸಿ ಸೆಕ್ಷನ್ 25ಎ ನಿರ್ದೇಶಕರು ಅಥವಾ ಉಪನಿರ್ದೇಶಕರನ್ನಾಗಿ ನೇಮಕ ಮಾಡುವ ವ್ಯಕ್ತಿಯು ಕನಿಷ್ಠ ಹತ್ತು ವರ್ಷ ವಕೀಲರಾಗಿ ಸೇವೆ ಸಲ್ಲಿಸಿರುವವನ್ನು ಪರಿಗಣಿಸಬಹುದು ಎಂದು ಹೇಳಲಾಗಿದೆ. 2019ರ ಆಗಸ್ಟ್‌ನಿಂದ ಹಂಗಾಮಿ ನಿರ್ದೇಶಕರು ಅವಧಿ ವಿಸ್ತರಣೆಯ ಮೂಲಕ ಹುದ್ದೆಯಲ್ಲಿದ್ದಾರೆ” ಎಂದು ಆಕ್ಷೇಪಿಸಿದರು.
ಈ ಸಂದರ್ಭದಲ್ಲಿ ಸರ್ಕಾರ ಪ್ರತಿನಿಧಿಸಿದ್ದ ವಕೀಲೆ ನಿಲೋಫರ್ ಅಕ್ಬರ್ ಅವರು ಮುಂದಿನ ವಾರ ವಿಚಾರಣೆ ನಡೆಸುವಂತೆ ಕೋರಿದರು. ಆಗ ಪೀಠವು ಒಂದು ನಿಮಿಷದ ಪ್ರಕರಣವನ್ನು ಮುಂದಿನ ವಾರಕ್ಕೆ ಏಕೆ ಮುಂದೂಡಬೇಕು? ಎಂದು ಪ್ರಶ್ನಿಸಿತು.
ಆಗ ನಿಲೋಫರ್ ಅಕ್ಬರ್ ಅವರು “ಉಪ ನಿರ್ದೇಶಕರ ಹಿರಿತನದ ಪಟ್ಟಿ ಸಿದ್ಧಪಡಿಸಲಾಗುತ್ತಿದ್ದು, ಅದು ಅಂತಿಮಗೊಂಡ ಬಳಿಕ ನಿರ್ದೇಶಕರನ್ನು ನೇಮಕ ಮಾಡಲಾಗುವುದು” ಎಂದರು.
ಆಗ ಪೀಠವು “ಮುಖ್ಯ ನ್ಯಾಯಮೂರ್ತಿ ಅನುಮತಿ ಇಲ್ಲದೇ ಹಂಗಾಮಿ ನಿರ್ದೇಶಕರನ್ನು ಏಕೆ ನೇಮಕ ಮಾಡಲಾಗಿದೆ. ಸಿರ್‌ಪಿಸಿ ಸೆಕ್ಷನ್ 25ಎ ಉದ್ದೇಶವೇನು?" ಎಂದು ಪ್ರಶ್ನಿಸಿದರು.
ಇದಕ್ಕೆ ನಿಲೋಫರ್ ಅವರು “ನಿರ್ದೇಶಕರ ಸ್ಥಾನಕ್ಕೆ ಯಾವುದೇ ಅಭ್ಯರ್ಥಿಗಳು ಇರಲಿಲ್ಲ” ಎಂದು ಸಮಜಾಯಿಷಿ ನೀಡಲು ಮುಂದಾದರು.
ಈ ವೇಳೆ ಪೀಠವು “ಪ್ರಾಸಿಕ್ಯೂಷನ್ ನಿರ್ದೇಶನಾಲಯವು ಸ್ವತಂತ್ರ ಸಂಸ್ಥೆಯಾಗಿದ್ದು, ಕಾನೂನು ಆಯೋಗವು ಇದಕ್ಕೆ ನಿರ್ದೇಶಕರನ್ನು ನೇಮಿಸುವಾಗ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಒಪ್ಪಿಗೆ ಪಡೆಯಬೇಕು ಎಂದಿದೆ. ಸಿಜೆ ಅನುಮತಿ ಇಲ್ಲದೇ ನೇಮಕಾತಿ ಹೇಗೆ ಮಾಡಿದಿರಿ?” ಎಂದು ಖಾರವಾಗಿ ಪ್ರಶ್ನಿಸಿತು. ಅಂತಿಮವಾಗಿ ನೇಮಕಾತಿ ರದ್ದುಪಡಿಸಿತು.