ತೋಟಗಾರಿಕೆ ಇಲಾಖೆ ಸೇರಿದ 20 ಎಕರೆ ಎಪಿಎಂಸಿ ಹೂ ಮಾರುಕಟ್ಟೆ ನಿರ್ಮಾಣಕ್ಕೆ ಮಂಜೂರು: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಅಮೂಲ್ಯ ಜಮೀನನ್ನು ಹಸ್ತಾಂತರ ಮಾಡುವ ಹಿಂದೆ ಸ್ಥಳೀಯ ರಾಜಕಾರಣಿಗಳು ಮತ್ತು ಅವರ ಹಿಂಬಾಲಕರ ವಿಶೇಷವಾಗಿ ವರ್ತಕರ ಸ್ವ ಹಿತಾಸಕ್ತಿ ಅಡಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
Karnataka High Court
Karnataka High Court
Published on

ಚಿಕ್ಕಬಳ್ಳಾಪುರ ಹೊರವಲಯದ ನಂದಿ ಕ್ರಾಸ್ ಬಳಿಯ ತೋಟಗಾರಿಕೆ ಇಲಾಖೆಗೆ ಸೇರಿದ 20 ಎಕರೆಗೂ ಹೆಚ್ಚಿನ ಜಮೀನನ್ನು ಎಪಿಎಂಸಿ ಹೂ ಮಾರುಕಟ್ಟೆ  ನಿರ್ಮಾಣಕ್ಕೆ ಮಂಜೂರು ಮಾಡುವ ಪ್ರಕ್ರಿಯೆ ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ನೋಟಿಸ್‌ ಜಾರಿ ಮಾಡಿದೆ.

ಚಿಕ್ಕಬಳ್ಳಾಪುರ ತಾಲ್ಲೂಕಿನ ತಿಪ್ಪೇನಹಳ್ಳಿಯ ಕೃಷಿಕ ಬಿ ತಿಪ್ಪಾರೆಡ್ಡಿ ಸೇರಿದಂತೆ ಒಟ್ಟು ಆರು ಜನ ಸ್ಥಳೀಯ ರೈತರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್ ಸುನೀಲ್ ದತ್ ಯಾದವ್ ಮತ್ತು ಎಸ್‌ ರಾಚಯ್ಯ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲ ಎಂ ಶಿವಪ್ರಕಾಶ್ “ನಂದಿ ಹೋಬಳಿ, ಯಲುವನಹಳ್ಳಿಯ ವಿವಿಧ ಸರ್ವೇ ನಂಬರ್ ಗಳಲ್ಲಿರುವ 20 ಎಕರೆಗೂ ಹೆಚ್ಚಿನ ಜಮೀನನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ (ಎಪಿಎಂಸಿ) ಹಸ್ತಾಂತರಿಸುವ ಭರದ ಚಟುವಟಿಕೆಗಳು ನಡೆದಿವೆ” ಎಂದರು.

“ಸದ್ಯ ತೋಟಗಾರಿಕೆ ಇಲಾಖೆ ವಶದಲ್ಲಿರುವ ಈ ಉದ್ದೇಶಿತ ಜಮೀನಿನಲ್ಲಿ 49 ವರ್ಷಕ್ಕೂ ಹೆಚ್ಚಿನ 791 ಜಾತಿಯ ಬೃಹತ್ ವಿವಿಧ ಮರಗಳಿವೆ. ಈ‌ ಅಮೂಲ್ಯ ಮರಗಳನ್ನು ಕತ್ತರಿಸಲು ಎಪಿಎಂಸಿ ಅಧಿಕಾರಿಗಳು ಅರಣ್ಯ ಇಲಾಖೆಯ ಅನುಮತಿ ಕೋರಿದ್ದಾರೆ” ಎಂದರು.

“ಹೀಗಾಗಿ, ಈ ಜಮೀನು ತೋಟಗಾರಿಕೆ ಇಲಾಖೆಯಲ್ಲೇ ಉಳಿಯುವಂತೆ  ನಿರ್ದೇಶಿಸಬೇಕು” ಎಂದು ಕೋರಿದರು.

ಇದನ್ನು ಪರಿಗಣಿಸಿದ ಪೀಠವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಸೇರಿದಂತೆ ಪ್ರಕರಣದ ಏಳೂ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಜೂನ್ 1ಕ್ಕೆ ಮುಂದೂಡಿತು.

ಉದ್ದೇಶಿತ ತೋಟಗಾರಿಕೆ ಇಲಾಖೆಯ ಜಮೀನಿನಲ್ಲಿ 40 ರಿಂದ 45 ವರ್ಷಕ್ಕೂ ಹೆಚ್ಚಿನ ಸಾವಿರದಷ್ಟು ಮರ-ಗಿಡಗಳಿವೆ. ಇವುಗಳಲ್ಲಿ ಅತ್ಯುತ್ತಮ ತಳಿಯ ಸಪೋಟಾ, ಮಾವು, ಹಲಸು, ನೇರಳೆ ಮರಗಳಿವೆ. ಮಣ್ಣು ಪರೀಕ್ಷಾ ಕೇಂದ್ರ, ರೈತರಿಗೆ ತರಬೇತಿ ನೀಡುವ ಕೇಂದ್ರ ಮತ್ತು ಪಾಲಿ ಹೌಸ್‌ಗಳೂ ಕಾರ್ಯ ನಿರ್ವಹಿಸುತ್ತಿವೆ. ಈ ಅಮೂಲ್ಯ ಜಮೀನನ್ನು ಹಸ್ತಾಂತರ ಮಾಡುವ ಹಿಂದೆ ಸ್ಥಳೀಯ ರಾಜಕಾರಣಿಗಳು ಮತ್ತು ಅವರ ಹಿಂಬಾಲಕರ ವಿಶೇಷವಾಗಿ ವರ್ತಕರ ಸ್ವ ಹಿತಾಸಕ್ತಿ ಅಡಗಿದೆ. ಇದನ್ನು ಸ್ಥಳೀಯ ರೈತರು ವಿರೋಧ ಮಾಡಿದ್ದಾಗ್ಯೂ ಇಲ್ಲಿ ಎಪಿಎಂಸಿ ಹೂ ಮಾರುಕಟ್ಟೆ ಸ್ಥಾಪಿಸುವ ವಾಣಿಜ್ಯೋದ್ಯಮ ಪ್ರಯತ್ನಗಳು ಭರದಿಂದ ಸಾಗಿವೆ. ಉದ್ದೇಶಿತ ಮಾರುಕಟ್ಟೆ ಸ್ಥಾಪನೆಗೆ ತಾಲ್ಲೂಕಿನ ವಿವಿಧೆಡೆ ಸಾಕಷ್ಟು ಬಂಜರು ಭೂಮಿ ಇದೆ‌‌. ಹೀಗಿರುವಾಗ ತೋಟಗಾರಿಕೆ ಇಲಾಖೆಯ ಅಭಿವೃದ್ಧಿ ಹೊಂದಿದ ಜಮೀನನ್ನು ಹೊರತುಪಡಿಸಿ ಬೇರೆ ಯಾವುದಾದರೂ ಜಮೀನು ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Kannada Bar & Bench
kannada.barandbench.com