ಭಾರತವನ್ನು ಮಧ್ಯಸ್ಥಿಕೆ ಕೇಂದ್ರವನ್ನಾಗಿ ಮಾಡುವುದರ ಮಹತ್ವ ಕುರಿತು ಕೇಂದ್ರ ಸಚಿವರಾದ ಡಾ ಎಸ್ ಜೈಶಂಕರ್ ಮಾತನಾಡಿದರು.
ನವದೆಹಲಿಯ ಭಾರತ್ ಮಂಟಪದಲ್ಲಿ ಶನಿವಾರ ಆಯೋಜಿಸಲಾಗಿದ್ದ ಆರ್ಬಿಟ್ರೇಷನ್ ಬಾರ್ ಆಫ್ ಇಂಡಿಯಾ (ಎಬಿಐ) ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
"ಭಾರತದಲ್ಲಿ ಮಧ್ಯಸ್ಥಿಕೆಯು ಮೇಕ್ ಇನ್ ಇಂಡಿಯಾದ ಪ್ರಮುಖ ಅಂಶವಾಗಿದೆ. ವಿಕಸಿತ ಭಾರತಕ್ಕಾಗಿನ ನಮ್ಮ ಯಾನದಲ್ಲಿ ಮಧ್ಯಸ್ಥಿಕೆ ಸಹಾಯ ಮಾಡುತ್ತದೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವರಾದ ಜೈ ಶಂಕರ್ ಹೇಳಿದರು.
ಎಬಿಐ ಎಂಬುದು ಮಧ್ಯಸ್ಥಿಕೆಯಲ್ಲಿ ಪರಿಣತಿ ಹೊಂದಿರುವ ವೈಯಕ್ತಿಕ ವೃತ್ತಿಪರರ ಸಂಸ್ಥೆಯಾಗಿದೆ. ಇದು ಇತರ ಮಧ್ಯಸ್ಥಿಕೆ ಸಂಸ್ಥೆಗಳಿಗೆ ಮಾನವ ಸಂಪನ್ಮೂಲ ಒದಗಿಸುವ ಗುರಿ ಹೊಂದಿದೆ.
ಇದೇ ವೇಳೆ ಮಾತನಾಡಿದ ಭಾರತದ ಅಟಾರ್ನಿ ಜನರಲ್ (ಎ ಜಿ) ಆರ್ ವೆಂಕಟರಮಣಿ ಅವರು ಆರ್ಬಿಟ್ರೇಷನ್ ಬಾರ್ ಆಫ್ ಇಂಡಿಯಾ (ಎಬಿಐ) ಕೇವಲ ಪುರುಷ ಪ್ರಧಾನ ಕೇಂದ್ರವಾಗಕೂಡದು ಮತ್ತು ಆಗಲು ಬಿಡಬಾರದು ಎಂದು ತಿಳಿಸಿದರು.
ಎಬಿಐ ಕುರಿತಾದ ಸಂದೇಹಗಳನ್ನು ಉದ್ದೇಶಿಸಿ ಮಾತನಾಡಿದ, ಎಜಿ ವೆಂಕಟರಮಣಿ ಅವರು ಎಬಿಐನ ಒಳಗೊಳ್ಳುವಿಕೆಯ ಮಹತ್ವವನ್ನು ಒತ್ತಿಹೇಳಿದರು. ಜೊತೆಗೆ ಮಧ್ಯಸ್ಥಿಕೆಯಲ್ಲಿ ಹೆಸರು ಮಾಡಿದ ಅನೇಕರಿಗೆ ಎಬಿಐ ಹೊಣೆ ನೀಡಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಆಶ್ವಾಸನೆ ನೀಡಿದರು.
ಎಬಿಐ ಅಧ್ಯಕ್ಷ ಗೌರಬ್ ಬ್ಯಾನರ್ಜಿ ಮಾತನಾಡಿ ಮಧ್ಯಸ್ಥಿಕೆ ಕ್ಷೇತ್ರದಲ್ಲಿ ಭಾರತ ಮಹತ್ತರ ಪ್ರಗತಿ ಸಾಧಿಸಿದ್ದು ಮಧ್ಯಸ್ಥಿಕೆಯಲ್ಲಿ ನ್ಯಾಯಾಲಯಗಳು ಕಡಿಮೆ ಪಾತ್ರ ವಹಿಸುತ್ತಿವೆ ಎಂದರು.
ಎಬಿಐ ಉದ್ಘಾಟನೆಯಿಂದಾಗಿ ಮಧ್ಯಸ್ಥಿಕೆಗೆಂದೇ ಮೀಸಲಾದ ವಕೀಲ ಸಮುದಾಯವನ್ನು ರೂಪಿಸುವ ಕಲ್ಪನೆ ಫಲಪ್ರದವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಕೂಡ ಉಪಸ್ಥಿತರಿದ್ದರು.