ನ್ಯಾಯಾಲಯಗಳ ಮಧ್ಯಸ್ಥಿಕೆ ಪ್ರಕರಣಗಳನ್ನು ವಿಶೇಷ ವಿಭಾಗೀಯ ಪೀಠಗಳು ವಿಚಾರಣೆ ನಡೆಸಬೇಕು: ನ್ಯಾ. ರೋಹಿಂಟನ್ ನಾರಿಮನ್

ಭಾರತ, ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವಾಗಬೇಕಾದರೆ ಮಧ್ಯಸ್ಥಿಕೆ ಪ್ರಕರಣಗಳನ್ನು ಏಕ ಸದಸ್ಯ ಪೀಠವೇ ಮೊದಲು ಆಲಿಸುವ ಪ್ರಸ್ತುತ ವ್ಯವಸ್ಥೆಯನ್ನು ತೆಗೆದುಹಾಕಬೇಕು ಎಂದು ನ್ಯಾ. ನಾರಿಮನ್ ಹೇಳಿದರು.
ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್
ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್

ಮಧ್ಯಸ್ಥಿಕೆ ಕಾನೂನಿನಲ್ಲಿ ಪರಿಣತರಾದ ನ್ಯಾಯಾಧೀಶರನ್ನು ಒಳಗೊಂಡ ವಿಭಾಗೀಯ ಪೀಠವೇ ಮಧ್ಯಸ್ಥಿಕೆ ಪ್ರಕರಣಗಳನ್ನು ನೇರವಾಗಿ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಶನಿವಾರ ಅಭಿಪ್ರಾಯಪಟ್ಟರು.

ಸುಪ್ರೀಂ ಕೋರ್ಟ್‌, ದೆಹಲಿ ಹೈಕೋರ್ಟ್‌ ಹಾಗೂ ದೆಹಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದ ಸಹಯೋಗದಲ್ಲಿ ನಡೆಯುತ್ತಿರುವ ದೆಹಲಿ ಮಧ್ಯಸ್ಥಿಕೆ ಸಪ್ತಾಹ (ಡಿಎಡಬ್ಲ್ಯು) 2024ರ ಅಂಗವಾಗಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಪ್ತಾಹ ನಾಳೆ ಸಮಾರೋಪಗೊಳ್ಳಲಿದೆ.

ಭಾರತ, ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವಾಗಬೇಕಾದರೆ ಮಧ್ಯಸ್ಥಿಕೆ ಪ್ರಕರಣಗಳನ್ನು ಏಕ ಸದಸ್ಯ ಪೀಠ ಮೊದಲು ಆಲಿಸುವ ಪ್ರಸ್ತುತ ವ್ಯವಸ್ಥೆಯನ್ನು ತೆಗೆದುಹಾಕಬೇಕು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ನ್ಯಾ. ರೋಹಿಂಟನ್‌ ಭಾಷಣದ ಪ್ರಮುಖಾಂಶಗಳು

ಮಧ್ಯಸ್ಥಿಕೆ ತೀರ್ಪನ್ನು ಪ್ರಶ್ನಿಸಿ ನೇರ ವಿಭಾಗೀಯ ಪೀಠಕ್ಕೇ ಅರ್ಜಿ ಸಲ್ಲಿಸಬೇಕು. ಆ ಪೀಠ ಮಧ್ಯಸ್ಥಿಕೆ ಪ್ರಕರಣಗಳಲ್ಲಿ ನೈಪುಣ್ಯ ಗಳಿಸಿದ ವಿಶೇಷ ವಿಭಾಗೀಯ ಪೀಠವಾಗಿರಬೇಕು. ನಂತರ ಪ್ರಕರಣ ತ್ವರಿತವಾಗಿ ಇತ್ಯರ್ಥವಾಗುತ್ತದೆ. ಹೀಗೆ ಮಾಡಿದಾಗಲೇ ಭಾರತ ನಿಜವಾಗಿಯೂ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವಾಗುತ್ತದೆ.

ತಾನು ಹಲವು ವರ್ಷಗಳಿಂದ ಈ ಸಲಹೆ ನೀಡುತ್ತಿದ್ದರೂ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮಧ್ಯಸ್ಥಿಕೆ ಪ್ರಕರಣಗಳಲ್ಲಿ ಏಕಸದಸ್ಯ ಪೀಠ ಇರಬಾರದು.

ಭಾರತದ ನ್ಯಾಯಾಲಯಗಳು ಮಧ್ಯಸ್ಥಿಕೆ ಪ್ರಕರಣಗಳನ್ನು ವಿವರವಾಗಿ ನೋಡುತ್ತವೆ. ಆದರೆ ಭಾರತದಲ್ಲಿ ಮಧ್ಯಸ್ಥಿಕೆ ಪ್ರಕರಣಗಳ ತೀರ್ಪು ನೀಡುವಿಕೆಯಲ್ಲಿ ಇರುವ ಏಕೈಕ ಸಮಸ್ಯೆಯೆಂದರೆ ನ್ಯಾಯಾಲಯಗಳು ತೆಗೆದುಕೊಳ್ಳುವ ಸಮಯ.

ಹಾಸ್ಯದ ಹೊನಲು

"ಸುಪ್ರೀಂ ಕೋರ್ಟ್‌ನಿಂದ ನಿವೃತ್ತನಾದ ಕಳೆದ ಎರಡೂವರೆ ವರ್ಷಗಳಿಂದ ಆನಂದದಿಂದ ಇದ್ದೆ. ನಾವು ಒಮ್ಮೆ ಆ ಮಹಾನ್‌ ಸಂಸ್ಥೆಯಿಂದ ಹೊರ ಬಂದ ಬಳಿಕ ಹೀಗೆ ಭಾಷಣ ಮಾಡಬೇಕಾದ ಪರಿಸ್ಥಿತಿ ಹೊರತುಪಡಿಸಿ ಆ ಆನಂದದ ಸ್ಥಿತಿಗೆ ಭಂಗ ಬರುವುದು ಅಪರೂಪ, ಏಕೆಂದರೆ ಕೆಲಸದಲ್ಲಿಯೇ ಮುಳುಗಿ ಹೋಗಿದ್ದ ನಿಮ್ಮನ್ನು ಇಂತಹ ಭಾಷಣ ಹಳೆಯ ಒಳ್ಳೆಯ ಇಲ್ಲವೇ ಕೆಟ್ಟ ದಿನಗಳಿಗೆ ಕರೆದೊಯ್ಯುತ್ತದೆ" ಎಂದು ನ್ಯಾ. ರೋಹಿಂಟನ್‌ ಮಾತಿನಲ್ಲೇ ಕಚಗುಳಿಯಿಟ್ಟರು. ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ ಎನ್ ಶ್ರೀಕೃಷ್ಣ ಉಪಸ್ಥಿತರಿದ್ದರು.

[ಕಾರ್ಯಕ್ರಮದ ದೃಶ್ಯಾವಳಿಗಾಗಿ ಇಲ್ಲಿ ಕ್ಲಿಕ್ಕಿಸಿ]

Related Stories

No stories found.
Kannada Bar & Bench
kannada.barandbench.com