'ಸರ್ಕಾರಿ ನೌಕರರಿಗೆ ಮಾಧ್ಯಮಗಳೊಂದಿಗೆ ಮಾತನಾಡಲು ಅವಕಾಶವಿದೆಯೇ?' ರಾಜ್ಯ ಸರ್ಕಾರಕ್ಕೆ ಅಲಾಹಾಬಾದ್ ಹೈಕೋರ್ಟ್ ಪ್ರಶ್ನೆ

ರಾಜ್ಯ ಸರ್ಕಾರ ಅಧಿಕೃತ ವಕ್ತಾರರ ಮೂಲಕ ಅಥವಾ ನಿರ್ದಿಷ್ಟ ಸಂಸ್ಥೆ ಇಲ್ಲವೇ ಇಲಾಖೆ ಗೊತ್ತುಪಡಿಸಿದ ಅಧಿಕಾರಿ ಮೂಲಕ ಮಾತ್ರ ಮಾತನಾಡಬೇಕು ಎಂದು ಬುದ್ಧಿವಾದ ಹೇಳಿದ ನ್ಯಾಯಾಲಯ.
'ಸರ್ಕಾರಿ ನೌಕರರಿಗೆ ಮಾಧ್ಯಮಗಳೊಂದಿಗೆ ಮಾತನಾಡಲು ಅವಕಾಶವಿದೆಯೇ?' ರಾಜ್ಯ ಸರ್ಕಾರಕ್ಕೆ ಅಲಾಹಾಬಾದ್ ಹೈಕೋರ್ಟ್ ಪ್ರಶ್ನೆ

ಕೇಂದ್ರ ಸರ್ಕಾರದಲ್ಲಿರುವವರು ಸೇರಿದಂತೆ ಸರ್ಕಾರಿ ನೌಕರರಲ್ಲಿ ಮಾಧ್ಯಮಗಳೊಂದಿಗೆ ಮುಕ್ತವಾಗಿ ಮತ್ತು ಅನೌಪಚಾರಿಕವಾಗಿ ಮಾತನಾಡುವುದು ಈಗೀಗ ಒಂದು ಪ್ರವೃತ್ತಿಯಾಗಿ ಬಿಟ್ಟಿದೆ ಎಂದು ಅಲಾಹಾಬಾದ್ ಉಚ್ಚ ನ್ಯಾಯಾಲಯ ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದೆ [ಆದರ್ಶ್ ಕುಮಾರ್ ಮತ್ತು ಉ. ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಹೀಗೆ ಮಾತನಾಡದಂತೆ ಸೇವಾ ನಿಯಮಗಳ ಅಡಿಯಲ್ಲಿ ಯಾವುದೇ ನಿಷೇಧವಿದೆಯೇ ಎಂದು ಸರ್ಕಾರವನ್ನುನ್ಯಾಯಮೂರ್ತಿ ಜೆ ಜೆ ಮುನೀರ್ ಅವರು ಪ್ರಶ್ನಿಸಿದರು. ಜೊತೆಗೆ ಯುವ ಪೀಳಿಗೆಯ ಸರ್ಕಾರಿ ನೌಕರರಿಗೆ ತರಬೇತಿ ನೀಡಲು ತೆಗೆದುಕೊಂಡ ಕ್ರಮಗಳನ್ನು ವಿವರಿಸುವಂತೆ ಸಿಬ್ಬಂದಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದರು.

ನಿಯಮಗಳ ಪ್ರಕಾರ ಅಂತಹ ಯಾವುದೇ ನಿಷೇಧ ಅಸ್ತಿತ್ವದಲ್ಲಿದ್ದರೆ, ಮಾಧ್ಯಮಗಳೊಂದಿಗೆ ಪೂರ್ವಸಿದ್ಧತೆಯಿಲ್ಲದೆ ಮಾತನಾಡುವಂತಿಲ್ಲ.

ತನ್ನ ವಿರುದ್ಧದ ಇಲಾಖಾ ಕ್ರಮ ಪ್ರಶ್ನಿಸಿ ಸರ್ಕಾರಿ ನೌಕರನೊಬ್ಬ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿತು.

ಅರ್ಜಿದಾರರು ಮಾಧ್ಯಮಗಳೊಂದಿಗೆ ಮಾತನಾಡಿರುವ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ನ್ಯಾಯಾಲಯ, ಸರ್ಕಾರಿ ಅಧಿಕಾರಿಗಳಲ್ಲಿ ಚಾಲ್ತಿಯಲ್ಲಿರುವ ಪ್ರವೃತ್ತಿಯನ್ನು ಎತ್ತಿ ತೋರಿಸಿತು.

“ರಾಜ್ಯ ಕೇಡರ್‌ಗೆ ಸೇವೆ ಸಲ್ಲಿಸುತ್ತಿರುವ ಕೇಂದ್ರ ಸೇವೆಗಳಲ್ಲಿ ಇರುವವರು ಸೇರಿದಂತೆ ಎಲ್ಲಾ ಶ್ರೇಣಿಯ ಸರ್ಕಾರಿ ನೌಕರರಲ್ಲಿ ಮಾಧ್ಯಮಗಳೊಂದಿಗೆ ಸಾಂದರ್ಭಿಕವಾಗಿ ಮತ್ತು ಮುಕ್ತವಾಗಿ ಮಾತನಾಡುವ ಸಾಮಾನ್ಯ ಪ್ರವೃತ್ತಿ ಇದೆ ಎಂದು ಈ ನ್ಯಾಯಾಲಯ ಹೇಳಿತು.

ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮುಕ್ತವಾಗಿ ಮಾತನಾಡುವುದು ಮತ್ತು ಮಾಧ್ಯಮಗಳೊಂದಿಗೆ ಸಂವಾದ ನಡೆಸುವುದನ್ನು ಕಾಣಬಹುದು. ಅಂತೆಯೇ, ರಾಜ್ಯದ ವ್ಯವಹಾರಗಳಿಗೆ ಸಂಬಂಧಿಸಿದಂತೆ ನೇಮಕಗೊಂಡಿರುವ ಸರ್ಕಾರಿ ನೌಕರರು ಮತ್ತು ಶ್ರೇಣಿಯಲ್ಲಿ ಮತ್ತಷ್ಟು ಕೆಳ ಸೇವೆ ಸಲ್ಲಿಸುತ್ತಿರುವವರೂ ಮಾಧ್ಯಮಗಳೊಂದಿಗೆ ಮಾತನಾಡಿದ ಉದಾಹರಣೆ ಇದೆ" ಎಂದು ಏಕ ಸದಸ್ಯ ಪೀಠ ನುಡಿಯಿತು.

ಈ ಹಿಂದೆ ಇದ್ದ ನೀತಿ ನಿಯಮಗಳಲ್ಲಿ ಬದಲಾವಣೆಯಾಗದೆ ಇದ್ದಲ್ಲಿ ಸರ್ಕಾರಿ ನೌಕರರು ಮಾಧ್ಯಮದ ಮುಂದೆ ತಾವಾಗಿಯೇ ಮಾತನಾಡಲು ಈ ರೀತಿಯ ಸ್ವಾತಂತ್ರ್ಯ ಇರುವುದಿಲ್ಲ ಎಂದು ಅವರು ಹೇಳಿದರು.

ಸರ್ಕಾರಿ ನೌಕರರಿಗೆ ಈ ಹಿಂದೆ ಮಾಧ್ಯಮಗಳೊಂದಿಗೆ ಮುಕ್ತವಾಗಿ ಮಾತನಾಡಲು ಅವಕಾಶ ನೀಡದಿರುವುದಕ್ಕೆ ಒಂದು ಕಾರಣವೆಂದರೆ ಅವರು ಆ ವಿಷಯದ ಬಗ್ಗೆ ವ್ಯತಿರಿಕ್ತ ನಿಲುವು ವ್ಯಕ್ತಪಡಿಸಬಾರದು ಎಂಬುದಾಗಿದೆ ಎಂದು ನ್ಯಾಯಾಲಯ ಹೇಳಿದೆ.

" ಸರ್ಕಾರ ಅಧಿಕೃತ ವಕ್ತಾರರ ಮೂಲಕ ಮಾತನಾಡಬೇಕು, ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಯಾರಾದರೂ ಅಥವಾ ನಿರ್ದಿಷ್ಟ ಸಂಸ್ಥೆ ಇಲ್ಲವೇ ಇಲಾಖೆಯಿಂದ ಗೊತ್ತುಪಡಿಸಿದ ಅಧಿಕಾರಿ ಮಾತನಾಡಬಹುದು" ಎಂದು ನ್ಯಾಯಾಲಯ ಒತ್ತಿಹೇಳಿತು.

ಮೇ 3ರಂದು ಮುಂದಿನ ವಿಚಾರಣೆ ನಡೆಸುವುದಾಗಿ ತಿಳಿಸಿದ ನ್ಯಾಯಾಲಯ ಕೇಳಿದ ಮಾಹಿತಿಯ ಬಗ್ಗೆ ಒಂದು ವಾರದೊಳಗೆ ಅಫಿಡವಿಟ್ ಸಲ್ಲಿಸುವಂತೆ ಸಿಬ್ಬಂದಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿತು.

Related Stories

No stories found.
Kannada Bar & Bench
kannada.barandbench.com