ಇಂಡಿಗೋ ಅವ್ಯವಸ್ಥೆ: ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಹೈಕೋರ್ಟ್ ಕಿಡಿ
ಇಂಡಿಗೋ ವಿಮಾನಯಾನ ಸಂಸ್ಥೆಯ ವಿಮಾನಗಳ ರದ್ದತಿ ಮತ್ತು ವಿಳಂಬದಿಂದ ಉಂಟಾದ ಅವ್ಯವಸ್ಥೆ ತಡೆಯದ ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಬುಧವಾರ ಚಾಟಿ ಬೀಸಿದೆ.
ಪರಿಸ್ಥಿತಿ ಹದಗೆಟ್ಟ ಬಳಿಕವೇ ಕೇಂದ್ರ ಮಧ್ಯಪ್ರವೇಶಿಸಿದೆ ಎಂದು ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ಹೇಳಿತು.
ಕರ್ತವ್ಯಲೋಪ ಎಸಗುವ ವಿಮಾನಯಾನ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಕೇಂದ್ರ ಸರ್ಕಾರ ಅಸಹಾಯಕವಾಗಿದೆಯೇ ಎಂದು ಕೇಳಿದ ನ್ಯಾಯಾಲಯ "ಪರಿಸ್ಥಿತಿ ಇನ್ನಷ್ಟು ಹದಗೆಡಲು ಸರ್ಕಾರ ಅವಕಾಶ ಮಾಡಿಕೊಟ್ಟಿತು. ನಂತರವೇ ಕ್ರಮ ಕೈಗೊಂಡಿತು. ಇದೆಲ್ಲಾ ನಡೆಯಲು ಏಕೆ ಬಿಟ್ಟಿರಿ?" ಎಂದು ತರಾಟೆಗೆ ತೆಗೆದುಕೊಂಡಿತು.
"ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಡಿಜಿಸಿಎ ತೆಗೆದುಕೊಂಡ ಕ್ರಮಗಳನ್ನು ನಾವು ಶ್ಲಾಘಿಸುತ್ತೇವೆ. ಆದರೂ, ವಿಮಾನ ನಿಲ್ದಾಣಗಳಲ್ಲಿ ಲಕ್ಷಾಂತರ ಪ್ರಯಾಣಿಕರ ಕಾಳಜಿ ಮಾಡದೆ ಇಂತಹ ಪರಿಸ್ಥಿತಿ ಉಂಟಾಗಲು ಹೇಗೆ ಅವಕಾಶ ನೀಡಲಾಯಿತು ಎಂಬುದು ಬೇಸರ ತಂದಿದೆ. ಇಂತಹ ಪರಿಸ್ಥಿತಿ ಪ್ರಯಾಣಿಕರಿಗೆ ಅಸೌಕರ್ಯ ಉಂಟುಮಾಡುವುದಷ್ಟೇ ಅಲ್ಲ, ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ, ಏಕೆಂದರೆ ಇಂದಿನ ಪರಿಸ್ಥಿತಿಯಲ್ಲಿ ಪ್ರಯಾಣಿಕರ ವೇಗವಾದ ಸಂಚಾರ ಆರ್ಥಿಕತೆಯನ್ನು ಸಮರ್ಥವಾಗಿ ಕಾರ್ಯನಿರ್ವಹಿಸುವಂತೆ ಮಾಡುವ ಪ್ರಮುಖ ಅಂಶವಾಗಿದೆ." ಎಂದು ನ್ಯಾಯಾಲಯ ಕೇಂದ್ರದ ವಿರುದ್ಧ ಚಾಟಿ ಬೀಸಿತು.
ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡು ನಿರ್ಲಕ್ಷ್ಯಗೊಂಡಿದ್ದ ಪ್ರಯಾಣಿಕರಿಗೆ ಪರಿಹಾರ ನೀಡುವ ವಿಚಾರದಲ್ಲಿ ಡಿಜಿಸಿಎ ಹೊರಡಿಸಿದ ಸುತ್ತೋಲೆ ಸೇರಿದಂತೆ ಸಂಬಂಧಪಟ್ಟ ನಿಯಮಗಳನ್ನು ಇಂಡಿಗೋ ಪಾಲಿಸಬೇಕು ಎಂದು ಅದು ಹೇಳಿತು.
“ನಿಯಮ ಉಲ್ಲಂಘಿಸಿದ ಏರ್‌ಲೈನ್‌ಗಳ ವಿರುದ್ಧ ಯಾವ ಕಾನೂನು ಕ್ರಮಗಳಿವೆ? ಸರ್ಕಾರ ಅಸಹಾಯಕವಾಗಿದೆಯೇ” ಎಂದು ಕಿಡಿಕಾರಿದ ನ್ಯಾಯಾಲಯ ಸೆಕ್ಷನ್ 4 ಅಡಿಯಲ್ಲಿ ಡಿಜಿಸಿಎಗೆ ಇರುವ ಅಧಿಕಾರಗಳ ಬಗ್ಗೆ ವಿವರ ಕೇಳಿತು. ಸರಾಸರಿ ₹5,000ದಷ್ಟಿರುತ್ತಿದ್ದ ವಿಮಾನ ಟಿಕೆಟ್ ದರ ಇದೀಗ ₹30,000–₹40,000ಕ್ಕೆ ಏರಿಕೆಯಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅದು ಉಳಿದ ಏರ್‌ಲೈನ್‌ಗಳು ಸಂಕಷ್ಟದ ಸಮಯವನ್ನು ದುರುಪಯೋಗಪಡಿಸಿಕೊಳ್ಳುತ್ತಿವೆಯೇ ಎಂದು ಕೇಳಿತು.
2024ರಲ್ಲಿ ಜಾರಿಯಾಗಬೇಕಿದ್ದ ಎಫ್‌ಡಿಟಿಎಲ್ ಮಾರ್ಗಸೂಚಿಗಳನ್ನು ಇಂಡಿಗೋ ಸೂಕ್ತ ಸಮಯಕ್ಕೆ ಜಾರಿಗೆ ತಂದಿಲ್ಲ. ಉಳಿದ ಏರ್‌ಲೈನ್‌ಗಳು ನಿಯಮ ಜಾರಿಗೊಳಿಸಿದ್ದರೂ ಇಂಡಿಗೋ ಏಕೆ ಮುಂದಾಗಿಲ್ಲ ಎಂದು ಅದು ಪ್ರಶ್ನಿಸಿತು. ಪೈಲಟ್‌ಗಳ ವಿಶ್ರಾಂತಿ ನಿಯಮ ಉಲ್ಲಂಘಿಸುವುದು ಪ್ರಯಾಣಿಕರ ಜೀವಕ್ಕೆ ಅಪಾಯ ತರಬಹುದು ಎಂದು ಕೂಡ ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು.
ಪ್ರಯಾಣಿಕರಿಗೆ ನೀಡಬೇಕಾದ ಪರಿಹಾರ, ಸಹಾಯ ಮತ್ತು ಸೇವೆಗಳನ್ನು ಇಂಡಿಗೋ ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರಯಾಣಿಕರಿಗೆ ಉಂಟಾದ ಯಾತನೆ, ಮಾನಸಿಕ ಒತ್ತಡ 2010ರಲ್ಲಿ ಸೂಚಿಸಿದ ಪರಿಹಾರಕ್ಕೂ ಮಿಗಿಲಾದ ಪರಿಹಾರವನ್ನು ನೀಡಬೇಕು ಎಂದಿತು.
ತನಿಖೆ ಪೂರ್ಣಗೊಳಿಸಿ ಮುಂದಿನ ವಿಚಾರಣೆ ನಡೆಯಲಿರುವ ಜನವರಿ 22, 2026ರರೊಳಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಬೇಕು. ಪ್ರಯಾಣಿಕರ ಹಿತಾಸಕ್ತಿ ಮತ್ತು ವಿಮಾನಯಾನ ಸುರಕ್ಷತೆ ಪರಿಗಣಿಸಿ ಸರ್ಕಾರ, ಡಿಜಿಸಿಎ ಹಾಗೂ ಇಂಡಿಗೋ ಕ್ರಮ ಕೈಗೊಳ್ಳಬೇಕು ಎಂದು ಅದು ತಾಕೀತು ಮಾಡಿತು.


