ಅರ್ನಾಬ್‌ ಗೋಸ್ವಾಮಿಗೆ 14 ದಿನಗಳ ನ್ಯಾಯಾಂಗ ಬಂಧನ: ಅಲಿಬಾಗ್‌ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶ

ಒಳಾಂಗಣ ವಿನ್ಯಾಸಗಾರ ಅನ್ವಯ್‌ ನಾಯಕ್ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್‌ ಟಿವಿ ಮುಖ್ಯಸ್ಥ ಅರ್ನಾಬ್‌ ಗೋಸ್ವಾಮಿ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅರ್ನಾಬ್‌ ಗೋಸ್ವಾಮಿಗೆ 14 ದಿನಗಳ ನ್ಯಾಯಾಂಗ ಬಂಧನ: ಅಲಿಬಾಗ್‌ ಮ್ಯಾಜಿಸ್ಟ್ರೇಟ್  ನ್ಯಾಯಾಲಯ ಆದೇಶ
Arnab Goswami

ಒಳಾಂಗಣ ವಿನ್ಯಾಸಗಾರ ಅನ್ವಯ್‌ ನಾಯಕ್‌ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್‌ ಟಿವಿ ಮುಖ್ಯಸ್ಥ ಅರ್ನಾಬ್‌ ಗೋಸ್ವಾಮಿ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬುಧವಾರ ಮಹಾರಾಷ್ಟ್ರದ ಅಲಿಬಾಗ್‌ನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಆದೇಶಿಸಿದೆ.

ತನ್ನ ಪತಿಯ ಆತ್ಮಹತ್ಯೆಗೆ ಅರ್ನಾಬ್‌ ಗೋಸ್ವಾಮಿ ಕಾರಣ ಎಂದು ಅನ್ವಯ್‌ ನಾಯಕ್‌ ಪತ್ನಿ ಅಕ್ಷತಾ ನಾಯಕ್‌ ನೀಡಿದ್ದ ದೂರನ್ನು ಆಧರಿಸಿ ರಾಯಗಢ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ ಆಧಾರದಲ್ಲಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಮೇಲಿನ ಆದೇಶ ಹೊರಡಿಸಿದೆ. ಅನ್ವಯ್‌ ನಾಯಕ್‌ ಮತ್ತು ಅವರ ತಾಯಿ ಕುಮುದಾ ನಾಯಕ್‌ ಅವರು ಕಾನ್‌ಕಾರ್ಡ್‌ ಡಿಸೈನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯ ನಿರ್ದೇಶಕರಾಗಿದ್ದರು.

2018ರಲ್ಲಿ ಈ ಪ್ರಕರಣ ನಡೆದಿದ್ದು, ಅನ್ವಯ್‌ ನಾಯಕ್‌ ಅವರ ಕುಟುಂಬಸ್ಥರ ಮನವಿಯ ಮೇರೆಗೆ ರಾಜ್ಯ ಸರ್ಕಾರವು ಮರು ತನಿಖೆಗೆ ಆದೇಶಿಸಿತ್ತು. ಇದರ ಆಧಾರದಲ್ಲಿ ಬುಧವಾರ ಬೆಳಿಗ್ಗೆ ಅರ್ನಾಬ್‌ ಗೋಸ್ವಾಮಿ ಅವರನ್ನು ರಾಯಗಢ ಪೊಲೀಸರು ವಶಕ್ಕೆ ಪಡೆದಿದ್ದರು.

ಅರ್ನಾಬ್‌ ಗೋಸ್ವಾಮಿ ವಿರುದ್ಧದ ಆರೋಪಗಳು ಗಂಭೀರವಾಗಿದ್ದು, ಅವರು ಪ್ರಭಾವಿ ಹಿನ್ನೆಲೆ ಹೊಂದಿರುವುದರಿಂದ ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸುವ ಅಗತ್ಯವಿದೆ ಎಂದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ರಾಯಗಢ ಪೊಲೀಸರು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವನ್ನು ಕೋರಿದ್ದರು.

ಅರ್ನಾಬ್‌ ಮತ್ತು ಇತರರ ವಿರುದ್ಧ 2020ರ ಮೇನಲ್ಲಿ ತನಿಖೆ ಆರಂಭಿಸಿದ ಬಳಿಕ ಅವರ ವಿರುದ್ಧದ ಆರೋಪಕ್ಕೆ ಪೂರಕವಾಗಿ ತನಿಖಾ ತಂಡಕ್ಕೆ ಪ್ರಮುಖ ಸಾಕ್ಷಿಗಳು ದೊರೆತಿವೆ ಎಂದು ಪೊಲೀಸರು ವಾದ ಮಂಡಿಸಿದರು.

ಇದಕ್ಕೂ ಮುನ್ನ ಅರ್ನಾಬ್‌ ಅವರನ್ನು ವಶಕ್ಕೆ ಪಡೆದ ಪೊಲೀಸರು ಅವರನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ಸಂದರ್ಭದಲ್ಲಿ ಗೋಸ್ವಾಮಿ ಅವರು ಬಂಧಿಸುವಾಗ ಪೊಲೀಸರು ತಮ್ಮ ಮೇಲೆ ಬಲಪ್ರಯೋಗ ಮಾಡಿದ್ದರಿಂದ ಕೈ ಮತ್ತು ಕುತ್ತಿಗೆ ಭಾಗಕ್ಕೆ ಗಾಯಗಳಾಗಿವೆ ಎಂದರು. ಇದನ್ನು ಪರಿಗಣಿಸಿದ ನ್ಯಾಯಾಲಯವು ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಸೂಚಿಸಿತು.

ವೈದ್ಯಕೀಯ ತಪಾಸಣೆಯ ಬಳಿಕ ಅರ್ನಾಬ್‌ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಅವರ ಪರ ಹಿರಿಯ ವಕೀಲ ಆಬಾದ್‌ ಪೊಂಡಾ ವಾದಿಸಿದರು. ವಿಚಾರಣೆಯ ಸಂದರ್ಭದಲ್ಲಿ ಪೊಂಡ ಕೆಳಗಿನ ವಿಚಾರಗಳನ್ನು ಪ್ರಸ್ತಾಪಿಸಿದರು.

  1. ಪ್ರಕರಣಕ್ಕೆ ಸಂಬಂಧಿಸಿದಂತೆ ʼಎʼ ಸಂಕ್ಷಿಪ್ತ ವರದಿಯನ್ನು (ಸಮರಿ ರಿಪೋರ್ಟ್) 2019ರ 24ರಲ್ಲಿ ನ್ಯಾಯಾಲಯ ಒಪ್ಪಿಕೊಂಡಿದ್ದು, ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ. ಆ ಬಳಿಕ ಪ್ರಕರಣದ ಮರು ತನಿಖೆಗೆ ಆದೇಶ ಹೊರಡಿಸಲಾಗಿದ್ದು, ಇದನ್ನು ದಾಖಲೆಯಲ್ಲಿ ಉಲ್ಲೇಖಿಸಲಾಗಿಲ್ಲ.

  2. ʼಎʼ ಸಂಕ್ಷಿಪ್ತ ವರದಿಯನ್ನುಒಪ್ಪಿಕೊಂಡು ಅದು ಅಂತಿಮ ಎಂದು ಪರಿಗಣಿಸಲಾದ ಬಳಿಕ ವರದಿಯನ್ನು ಮತ್ತಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ರಾಯಗಢ ಪೊಲೀಸರ ತನಿಖೆಯು ಅಕ್ರಮವಾಗಿದೆ ಎಂದು ವಾದಿಸಿದರು.

ಅರ್ನಾಬ್‌ ಅವರನ್ನು ವಶಕ್ಕೆ ಪಡೆಯುವ ಸಂಬಂಧ ರಾಯಗಢ ಪೊಲೀಸರು ಸಲ್ಲಿಸಿದ್ದ ಎಲ್ಲಾ ವಾದಗಳನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಪೊಲೀಸ್‌ ವಶಕ್ಕೆ ನೀಡುವ ಮನವಿಯನ್ನು ವಜಾಗೊಳಿಸಿತು.

ಗೋಸ್ವಾಮಿ ಅವರ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿದ್ದು, ಒಂದೆರಡು ದಿನಗಳಲ್ಲಿ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ತನಿಖಾಧಿಕಾರಿ ಮತ್ತು ಸರ್ಕಾರಿ ಅಭಿಯೋಜಕರು ಅರ್ಜಿಗೆ ಪ್ರತಿಕ್ರಿಯೆ ದಾಖಲಿಸಿದ ಬಳಿಕ ಜಾಮೀನು ಮನವಿಯ ವಿಚಾರಣೆಗೆ ನ್ಯಾಯಾಲಯವನ್ನು ಕೋರಲಾಗುವುದು ಎಂದು ಅರ್ನಾಬ್‌ ಪರ ವಕೀಲ ಗೌರವ್‌ ಪಾರ್ಕರ್‌ ತಿಳಿಸಿದ್ದಾರೆ. ಈ ಮಧ್ಯೆ, ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ವಜಾಗೊಳಿಸುವಂತೆ ಬಾಂಬೆ ಹೈಕೋರ್ಟ್‌ನಲ್ಲಿ ಅರ್ನಾಬ್‌ ಮನವಿ ಸಲ್ಲಿಸಿದ್ದು, ಅದು ಗುರುವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ.

ಆತ್ಮಹತ್ಯೆ ಮಾಡಿಕೊಂಡಿದ್ದ ಅನ್ವಯ್‌ ನಾಯಕ್‌ ಅವರು ತಮ್ಮ ಸಾವಿಗೂ ಮುನ್ನ ಬರೆದಿದ್ದ ಪತ್ರದಲ್ಲಿ ತಮ್ಮ ಕಾನ್‌ಕಾರ್ಡ್‌ ಡಿಸೈನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕೆಲವರು ಬಾಕಿ ಹಣ ಪಾವತಿಸಬೇಕಿದೆ ಎಂದು ಉಲ್ಲೇಖಿಸಿದ್ದರು ಎಂದು ಆರೋಪಿಸಲಾಗಿದೆ.

ಮರಣ ಪತ್ರದಲ್ಲಿ ಅನ್ವಯ್‌ ನಾಯಕ್‌ ಅವರು ಬಾಕಿ ಹಣ ಉಳಿಸಿಕೊಂಡಿರುವ ಮೂವರ ಹೆಸರನ್ನು ಪ್ರಸ್ತಾಪಿಸಿದ್ದು, ತಮ್ಮ ಸಾವಿಗೆ ಇವರೇ ಕಾರಣ ಎಂದು ಉಲ್ಲೇಖಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಳಗಿನ ಮೂವರನ್ನು ದೂರಿನಲ್ಲಿ ಹೆಸರಿಸಲಾಗಿದೆ.

  1. ಅರ್ನಾಬ್‌ ಗೋಸ್ವಾಮಿ ಮತ್ತು ಎಆರ್‌ಜಿ ಔಟ್ಲಯರ್‌ (ರಿಪಬ್ಲಿಕ್‌ ಟಿವಿಯ ಮಾತೃಸಂಸ್ಥೆ) ಸಂಸ್ಥೆಯು ಬಾಂಬೆ ಡೈಯಿಂಗ್‌ ಸ್ಟೂಡಿಯೋ ಯೋಜನೆಗಾಗಿ 83 ಲಕ್ಷ ರೂಪಾಯಿ ಪಾವತಿಸಬೇಕಿದೆ.

  2. ಫಿರೋಜ್‌ ಶೇಖ್‌, ಐಕಾಸ್ಟ್‌ಎಕ್ಸ್‌/ಸ್ಕೈಮಿಡಿಯಾ ಅಂಧೇರಿಯಲ್ಲಿನ ಯೋಜನೆಗಾಗಿ 4 ಕೋಟಿ ರೂಪಾಯಿ ಪಾವತಿಸಬೇಕಿದೆ.

  3. ನಿತೇಶ್‌ ಶಾರ್ದಾ ಅವರು ಮಗರ್ಪಟ್ಟಾ ಮತ್ತು ಬನೇರ್‌ನಲ್ಲಿ ಬಾಕಿ ಇರುವ ಯೋಜನೆಗೆ 55 ಲಕ್ಷ ರೂಪಾಯಿ ಪಾತಿಸಬೇಕಿದೆ ಎಂದು ಆರೋಪಿಸಲಾಗಿದೆ.

ಪ್ರಕರಣದ ತನಿಖೆ ನಡೆಸಿದ್ದ ರಾಯಗಢ ಪೊಲೀಸರು ಸಾಕ್ಷ್ಯ ಕೊರತೆಯ ಹಿನ್ನೆಲೆಯಲ್ಲಿ ಎಲ್ಲಾ ಆರೋಪಿತರ ವಿರುದ್ಧದ ಪ್ರಕರಣವನ್ನು ಕೈಬಿಟ್ಟಿದ್ದರು. ಈ ಸಂಬಂಧ 2019ರ ಏಪ್ರಿಲ್‌ನಲ್ಲಿ ಅಲಿಬಾಗ್‌ ನ್ಯಾಯಾಲಯಕ್ಕೆ ಪೊಲೀಸರು ವರದಿ ಸಲ್ಲಿಸಿದ್ದು, ಅದನ್ನು ನ್ಯಾಯಾಲಯ ಒಪ್ಪಿಕೊಂಡಿತ್ತು.

Also Read
ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಬಂಧನ: ಇಲ್ಲಿದೆ ಪ್ರಕರಣದ ಹಿನ್ನೆಲೆ

ಇದೆಲ್ಲದರ ಮಧ್ಯೆ, ಕಳೆದ ಮೇನಲ್ಲಿ ಅನ್ವಯ್‌ ನಾಯಕ್‌ ಅವರ ಪುತ್ರಿ ಅದ್ನ್ಯಾ ನಾಯಕ್‌ ಅವರು ಮಹಾರಾಷ್ಟ್ರದ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಅವರನ್ನು ಭೇಟಿ ಮಾಡಿದ್ದರು. ಇದರ ಬೆನ್ನಿಗೆ ದೇಶ್‌ಮುಖ್‌ ಅವರು ಸಿಐಡಿಯಿಂದ ಪ್ರಕರಣ ಮರು ತನಿಖೆಗೆ ಆದೇಶಿಸಿದ್ದರು.

ಅರ್ನಾಬ್‌ ಗೋಸ್ವಾಮಿ ಬಂಧನವಾಗುತ್ತಿದ್ದಂತೆ ಬಿಜೆಪಿ ನಾಯಕರಾದ ಗೃಹ ಸಚಿವ ಅಮಿತ್‌ ಶಾ, ಜವಳಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ, ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಅವರು ಕಟುವಾದ ಪ್ರತಿಕ್ರಿಯಿ ನೀಡಿದ್ದು, ಮಹಾರಾಷ್ಟ್ರ ಪೊಲೀಸರ ನಡೆಯು ವಾಕ್‌ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಗುಡುಗಿದ್ದಾರೆ.

Related Stories

No stories found.