ಆರೋಗ್ಯ ಕವಚ ಸೇವೆ: ಜಿಲ್ಲಾವಾರು ನೇಮಕಾತಿ ಪ್ರಕ್ರಿಯೆ ಮಾಹಿತಿ ಒದಗಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಹೊಸ ನೇಮಕಾತಿಗೆ ಅನುಭವ ಹಾಗೂ ತರಬೇತಿ ಮಾನದಂಡಗಳನ್ನು ನಿಗದಿಪಡಿಸಲಾಗಿದ್ದು, ಹಳೆಯ ನೌಕರರಲ್ಲಿ ಅವುಗಳಡಿ ಬರುವವರಿಗೆ ಆದ್ಯತೆ ನೀಡಲಾಗುವುದು. ಇದು ಸರ್ಕಾರದ ನೀತಿಯ ವಿಚಾರವಾಗಿದೆ ಎಂದ ಸರ್ಕಾರದ ವಕೀಲರು.
Ambulance
AmbulanceImage for representative purposes
Published on

ಆರೋಗ್ಯ ಕವಚ-108 ಸೇವೆ ಯೋಜನೆಯಡಿ ಹೊಸದಾಗಿ ಚಾಲಕರು (ಪೈಲಟ್) ಹಾಗೂ ತುರ್ತು ಚಿಕಿತ್ಸಾ ತಂತ್ರಜ್ಞರನ್ನು (ಇಎಂಟಿ) ನೇಮಕ ಮಾಡಿಕೊಳ್ಳುವ ತನಕ ಈವರೆಗೆ ಸೇವೆ ಸಲ್ಲಿಸಿದ ಸಿಬ್ಬಂದಿಯನ್ನೇ ಮುಂದುವರಿಸಬಹುದಲ್ಲವೇ ಎಂದು ಪ್ರಶ್ನಿಸಿರುವ ಕರ್ನಾಟಕ ಹೈಕೋರ್ಟ್, ಯಾವ ಜಿಲ್ಲೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಆಗಿದೆ ಎಂಬ ಬಗ್ಗೆ ಎರಡು ದಿನಗಳಲ್ಲಿ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಅಖಿಲ ಕರ್ನಾಟಕ 108 ಆ್ಯಂಬುಲೆನ್ಸ್ ನೌಕರರ ಹಿತರಕ್ಷಣಾ ಸಂಘ ಹಾಗೂ ಇತರರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ಏಕಸದಸ್ಯ ಪೀಠದ ಮುಂದೆ ಸೋಮವಾರ ವಿಚಾರಣೆಗೆ ನಡೆಸಿತು.

ಈ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು “ಆರೋಗ್ಯ ಇಲಾಖೆ ಮತ್ತು ಜಿವಿಕೆ-ಇಎಂಆರ್‌ಐ ಸಂಸ್ಥೆಯ ನಡುವಿನ ಒಪ್ಪಂದದಂತೆ 2008ರಿಂದ 3,500ಕ್ಕೂ ಹೆಚ್ಚು ಸಿಬ್ಬಂದಿ ತುರ್ತು ಆರೋಗ್ಯ ಸೇವೆ ನೀಡುತ್ತಿದ್ದಾರೆ. ಅವರ ವೇತನ ಬಾಕಿ, ಸ್ಥಳ ನಿಯೋಜನೆ ಇತ್ಯಾದಿ ವಿಷಯಗಳು ನ್ಯಾಯಾಲಯದ ಮುಂದೆ ಇನ್ನೂ ಬಾಕಿ ಇವೆ. ಈ ನಡುವೆ ಹಿಂದಿನ ಒಪ್ಪಂದ ರದ್ದುಪಡಿಸಿ ಹೊಸ ನೇಮಕಾತಿಗೆ ಸರ್ಕಾರ ಮುಂದಾಗಿದೆ. ಸೇವಾ ಭದ್ರತೆ ಮತ್ತು ಮಾನವೀಯ ದೃಷ್ಟಿಯಿಂದ ಈ ಪ್ರಕರಣ ಪರಿಗಣಿಸಿ, ಸೇವೆಯಲ್ಲಿ ಮುಂದುವರಿಸಬೇಕು. ವಿಷಯ ಇತ್ಯರ್ಥವಾಗುವ ತನಕ ನೇಮಕಾತಿ ಅಧಿಸೂಚನೆಗೆ ತಡೆ ನೀಡಬೇಕು” ಎಂದು ಕೋರಿದರು.

ಇದಕ್ಕೆ ಆಕ್ಷೇಪಿಸಿದ ಸರ್ಕಾರದ ಪರ ವಕೀಲರು “ಹೊಸ ನೇಮಕಾತಿಗೆ ಅನುಭವ ಹಾಗೂ ತರಬೇತಿ ಮಾನದಂಡಗಳನ್ನು ನಿಗದಿಪಡಿಸಲಾಗಿದ್ದು, ಹಳೆಯ ನೌಕರರಲ್ಲಿ ಅವುಗಳಡಿ ಬರುವವರಿಗೆ ಆದ್ಯತೆ ನೀಡಲಾಗುವುದು. ಇದು ಸರ್ಕಾರದ ನೀತಿಯ ವಿಚಾರವಾಗಿದೆ. ಜಿಲ್ಲಾವಾರು ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಅವರನೇ ಮುಂದುವರಿಸುವುದಾಗಿ ಸಾರಸಗಟು ಭರವಸೆ ನೀಡಲು ಬರುವುದಿಲ್ಲ. ಏಕೆಂದರೆ, ಈಗ ಸೇವೆಯಲ್ಲಿದ್ದವರೆಲ್ಲ, ಜಿವಿಕೆ-ಇಎಂಆರ್‌ಐ ಸಂಸ್ಥೆಯ ಸಿಬ್ಬಂದಿ” ಎಂದರು.

ವಾದ-ಪ್ರತಿವಾದ ಆಲಿಸಿದ ಪೀಠವು ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವ ತನಕ ಈವರೆಗೆ ಸೇವೆಯಲ್ಲಿದ್ದ ಸಿಬ್ಬಂದಿಯನ್ನೇ ಮುಂದುವರಿಸಬಹುದಲ್ಲವೇ ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು. ಅಲ್ಲದೆ, ಈವರೆಗೆ ಯಾವ ಜಿಲ್ಲೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಆಗಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ನಿರ್ದೇಶನ ನೀಡಿ ವಿಚಾರಣೆಯವನ್ನು ಅಕ್ಟೋಬರ್‌ 16ಕ್ಕೆ ಮುಂದೂಡಿತು.

Kannada Bar & Bench
kannada.barandbench.com