ಇ ಡಿ ಅಕ್ರಮವಾಗಿ ಬಂಧಿಸಿದೆ, ಹೇಬಿಯಸ್ ಕಾರ್ಪಸ್ ಅರ್ಜಿ ನಿರ್ವಹಿಸಬಹುದು: ನ್ಯಾಯಾಲಯದ ಮುಂದೆ ಸಚಿವ ಸೆಂಥಿಲ್ ಪರ ವಾದ

ಸೆಂಥಿಲ್ ಅವರನ್ನು ಬಂಧಿಸುವಾಗ ಸಿಆರ್‌ಪಿಸಿಯ ಸೆಕ್ಷನ್ 41ರ ಅಡಿ ಅನುಸರಿಸಬೇಕಿದ್ದ ಕಡ್ಡಾಯ ಕಾರ್ಯವಿಧಾನಗಳನ್ನು ಇ ಡಿ ಪಾಲಿಸಿಲ್ಲ ಎಂದು ಹಿರಿಯ ವಕೀಲ ಎನ್ ಆರ್ ಇಳಂಗೋ ನ್ಯಾಯಾಲಯಕ್ಕೆ ವಿವರಿಸಿದರು.
Senthil Balaji and Madras High Court
Senthil Balaji and Madras High Court

ಜಾರಿ ನಿರ್ದೇಶನಾಲಯ (ಇ ಡಿ) ತಮ್ಮನ್ನು ಬಂಧಿಸುವಾಗ ಕಾನೂನು ಕಾರ್ಯವಿಧಾನಗಳನ್ನು ಮತ್ತು ಸಾಂವಿಧಾನಿಕ ರಕ್ಷಣೆಯನ್ನು ಉಲ್ಲಂಘಿಸಿದೆ ಎಂದು ಸಚಿವ ವಿ ಸೆಂಥಿಲ್‌ ಬಾಲಾಜಿ ಅವರು ಗುರುವಾರ ಮದ್ರಾಸ್‌ ಹೈಕೋರ್ಟ್‌ನಲ್ಲಿ ಆರೋಪಿಸಿದ್ದಾರೆ.

ಸಚಿವ ಬಾಲಾಜಿ ಅವರನ್ನು ಇ ಡಿ ಅಕ್ರಮವಾಗಿ ಬಂಧಿಸಿದ್ದು ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಬಾಲಾಜಿ  ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಎನ್‌ ಆರ್‌ ಇಳಂಗೋ ಅವರು ನ್ಯಾಯಮೂರ್ತಿಗಳಾದ ನಿಶಾ ಬಾನು ಮತ್ತು ಡಿ ಭರತ ಚಕ್ರವರ್ತಿ ಅವರಿದ್ದ ಪೀಠಕ್ಕೆ ತಿಳಿಸಿದರು.

ಬಂಧನಕ್ಕೂ ಮುನ್ನ ಬಾಲಾಜಿ ಅವರಿಗೆ ಯಾವುದೇ ನೋಟಿಸ್ ನೀಡಿಲ್ಲ ಎಂದು ಇ ಡಿ ಒಪ್ಪಿಕೊಂಡಿದ್ದು ಇದು ಸಿಆರ್‌ಪಿಸಿ ಸೆಕ್ಷನ್ 41ರ ಉಲ್ಲಂಘನೆಯಾಗಿದೆ ಎಂದು ಇಳಂಗೋ ದೂರಿದರು.

ಬಂಧನದ  ನಂತರ ಬಾಲಾಜಿ ಅವರ ಪತ್ನಿ ಎಸ್ ಮೇಘಲಾ ಅವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಗೆ ಸಂಬಂಧಿಸಿದಂತೆ ಇಳಂಗೋ ತಮ್ಮ ವಾದ ಮಂಡಿಸಿದರು.

ಸಚಿವರು ನ್ಯಾಯಾಂಗ ಬಂಧನದಲ್ಲಿಯೇ ಇರಬೇಕೆಂದು ಹೈಕೋರ್ಟ್ ಈಗಾಗಲೇ ಸ್ಪಷ್ಟಪಡಿಸಿದ್ದರೂ ಬಾಲಾಜಿ ಅವರ ಕಸ್ಟಡಿ ವಿಚಾರಣೆಗೆ ಅನುಮತಿ ನೀಡುವಲ್ಲಿಸ ಸೆಷನ್ಸ್‌ ನ್ಯಾಯಾಲಯ ʼಗಂಭೀರ ಅಕ್ರಮʼ ಎಸಗಿದೆ ಎಂದು ಅವರು ದೂರಿದರು.

ಇ ಡಿ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಬಂಧನ ಆದೇಶದ ನಂತರ ಸಲ್ಲಿಸಲಾಗಿರುವುದರಿಂದ ಅದನ್ನು ನ್ಯಾಯಾಲಯ ನಿರ್ವಹಿಸಬಾರದು ಎಂದು ವಾದಿಸಿದರು.

ಆದರೂ ಗೌತಮ್ ನವಲಖಾ ಅವರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದ ಇಳಂಗೋ ಪ್ರಸ್ತುತ ಹಂತದಲ್ಲೂ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಒಪ್ಪಿಕೊಳ್ಳಲು ಹೈಕೋರ್ಟ್ ತನ್ನ ವಿವೇಚನೆ ಬಳಸಬಹುದು ಎಂದು ವಾದಿಸಿದರು.

ತನಿಖಾ ಸಂಸ್ಥೆಗೆ ಸಚಿವರು ಸಂಪೂರ್ಣ ಸಹಕಾರ ನೀಡುತ್ತಿದ್ದರೂ ಸೂಕ್ತ ಪ್ರಕ್ರಿಯೆ ಅನುಸರಿಸದೆ ಅವರನ್ನು ಬಂಧಿಸುವ ಮೂಲಕ ಇ ಡಿ ದುರುದ್ದೇಶದಿಂದ ವರ್ತಿಸಿದೆ ಎಂದು ಇಳಂಗೋ ಹೇಳಿದ್ದಾರೆ.

"ಜೂನ್ 13ರಿಂದ ಜೂನ್ 14ರ ಮುಂಜಾನೆಯವರೆಗೆ ಸಚಿವರುತನ್ನ ವಶದಲ್ಲಿದ್ದಾಗ ಏನು ನಡೆಯಿತು ಎಂಬುದರ ವಿವರಗಳನ್ನುಇ ಡಿ ಇದುವರೆಗೆ ನ್ಯಾಯಾಲಯಕ್ಕೆ ನೀಡಿಲ್ಲ" ಎಂದು ಇಳಂಗೋ ಹೇಳಿದರು. ಜೂನ್ 27ರಂದು ಇ ಡಿ ವಾದವನ್ನುನ್ಯಾಯಾಲಯ ಆಲಿಸಲಿದೆ.

Kannada Bar & Bench
kannada.barandbench.com