ಅಕ್ಕಿಯಲ್ಲಿ ವಿಷಕಾರಿ ಆರ್ಸೆನಿಕ್? ಕೇಂದ್ರ, ಸಿಪಿಸಿಬಿ ಪ್ರತಿಕ್ರಿಯೆ ಕೇಳಿದ ಎನ್‌ಜಿಟಿ

'ಆಹಾರದಲ್ಲಿ ಆರ್ಸೆನಿಕ್: ಅಕ್ಕಿಯನ್ನು ಬೇಯಿಸುವ ಮೊದಲು ಅದನ್ನು ತೊಳೆಯಬೇಕೇ?' ಎಂಬ ಶೀರ್ಷಿಕೆಯ ಲೇಖನ ಆಧರಿಸಿ ನ್ಯಾಯಮಂಡಳಿ ಸ್ವಯಂ ಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿದೆ.
ಅಕ್ಕಿಯಲ್ಲಿ ವಿಷಕಾರಿ ಆರ್ಸೆನಿಕ್? ಕೇಂದ್ರ, ಸಿಪಿಸಿಬಿ ಪ್ರತಿಕ್ರಿಯೆ ಕೇಳಿದ ಎನ್‌ಜಿಟಿ
Published on

ಆಹಾರದಲ್ಲಿ ಅದರಲ್ಲಿಯೂ ಅಕ್ಕಿಯಲ್ಲಿ ವಿಷಕಾರಿ ಆರ್ಸೆನಿಕ್‌ ಅಂಶ ಇರುವಿಕೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಈಚೆಗೆ ಕೇಂದ್ರ ಕೃಷಿ ಮತ್ತು ಪರಿಸರ ಸಚಿವಾಲಯ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ಪ್ರತಿಕ್ರಿಯೆ ಕೇಳಿದೆ.

'ಆಹಾರದಲ್ಲಿ ಆರ್ಸೆನಿಕ್: ಅಕ್ಕಿಯನ್ನು ಬೇಯಿಸುವ ಮೊದಲು ಅದನ್ನು ತೊಳೆಯಬೇಕೇ?' ಎಂಬ ಶೀರ್ಷಿಕೆಯ ಸುದ್ದಿ ಲೇಖನ ಆಧರಿಸಿ ಮಂಡಳಿಯ ಅಧ್ಯಕ್ಷರಾದ ನ್ಯಾ. ಪ್ರಕಾಶ್ ಶ್ರೀವಾಸ್ತವ, ನ್ಯಾಯಾಂಗ ಸದಸ್ಯ ಜಸ್ಟೀಸ್‌ ಅರುಣ್ ಕುಮಾರ್ ತ್ಯಾಗಿ ಮತ್ತು ಪರಿಣಿತ ಸದಸ್ಯ  ಡಾ. ಎ ಸೆಂಥಿಲ್ ವೇಲ್‌ ಅವರು ಸ್ವಯಂ ಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.

“ಮನುಷ್ಯ ದೇಹಕ್ಕೆ ವಿಷಕಾರಿ ಎಂದು ತಜ್ಞರು ಎಚ್ಚರಿಸಿರುವ ಅಕ್ಕಿಯಲ್ಲಿ ಆರ್ಸೆನಿಕ್‌ ಇರುವಿಕೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಲೇಖನದ ಪ್ರಕಾರ, ಮಣ್ಣು ಮತ್ತು ನೀರಿನಲ್ಲಿ ನೈಸರ್ಗಿಕವಾಗಿ ಕಂಡುಬರುವ ಆರ್ಸೆನಿಕ್ ಅನ್ನು ವಿಷಕಾರಿ ಎಂದು ಪರಿಗಣಿಸಲಾಗಿದ್ದು ಅಕ್ಕಿಯನ್ನು ತೊಳೆಯುವ ಮೂಲಕ ಅದನ್ನು ಸುಲಭವಾಗಿ ಇಲ್ಲವಾಗಿಸಬಹುದು” ಎಂದು ಮೇ 16ರ ಆದೇಶ ದಾಖಲಿಸಿದೆ.

ಲೇಖನದ ಪ್ರಕಾರ, ಆರ್ಸೆನಿಕ್ ವಿವಿಧ ಪ್ರದೇಶಗಳಲ್ಲಿ ವಿವಿಧ ಹಂತಗಳಲ್ಲಿ ಕಂಡುಬರುತ್ತದೆ, ನೈಸರ್ಗಿಕವಾಗಿ ನೀರು, ಮಣ್ಣು, ಕಲ್ಲುಗಳಲ್ಲಿ ಕಂಡುಬರುತ್ತದೆ ಮತ್ತು ಸುಲಭವಾಗಿ ಆಹಾರ ಸರಪಳಿಯೊಳಗೆ ನುಸುಳುತ್ತದೆ.

ಕೀಟನಾಶಕ ಮತ್ತು ಕಳೆನಾಶಕಗಳು, ಮರದ ಸಂರಕ್ಷಕಗಳು, ಫಾಸ್ಫೇಟ್ ರಸಗೊಬ್ಬರಗಳು, ಕೈಗಾರಿಕಾ ತ್ಯಾಜ್ಯ, ಗಣಿಗಾರಿಕೆ ಚಟುವಟಿಕೆಗಳು, ಕಲ್ಲಿದ್ದಲು ಸುಡುವಿಕೆ ಮತ್ತು ಕರಗಿಸುವಿಕೆ ಸೇರಿದಂತೆ ಮಾನವ ಚಟುವಟಿಕೆಗಳ ಪರಿಣಾಮವಾಗಿಯೂ ಆರ್ಸೆನಿಕ್ ಮಾಲಿನ್ಯ ಹೆಚ್ಚುತ್ತಿದೆ ಎಂದು ಅದು ಹೇಳಿದೆ.

ಅಕ್ಕಿ ವಿಶೇಷವಾಗಿ ಆರ್ಸೆನಿಕ್‌ ಮಾಲಿನ್ಯಕ್ಕೆ ತುತ್ತಾಗುತ್ತದೆ ಏಕೆಂದರೆ ಅಕ್ಕಿಯನ್ನು ಗದ್ದೆಗಳಲ್ಲಿ ಬೆಳೆಯಲಾಗುತ್ತದೆ. ಜೊತೆಗೆ ಇತರ ಬೆಳೆಗಳಿಗೆ ಹೋಲಿಸಿದರೆ ಹೆಚ್ಚು ನೀರನ್ನು ಹೀರಿಕೊಳ್ಳುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಆರ್ಸೆನಿಕ್ ವಿಷದ ದೀರ್ಘಾವಧಿಯ ರೋಗಲಕ್ಷಣವೆಂದರೆ ಮೊದಲಿಗೆ ಚರ್ಮದಲ್ಲಿ ಐದು ವರ್ಷಗಳೊಳಗೆ ಸಮಸ್ಯೆಗಳು ಕಂಡುಬರುತ್ತವೆ.  ತೀವ್ರವಾದ ಆರ್ಸೆನಿಕ್‌ ಸೇವನೆ ಮೃತ್ಯುವಿಗೂ ಎಡೆ ಮಾಡಿಕೊಡಬಹದು ಎಂದು ಎನ್‌ಜಿಟಿ ಹೇಳಿದೆ.

ಇದು ಪರಿಸರ ನಿಯಮ ಮತ್ತು ಕಾನೂನುಗಳ ಪಾಲನೆಗೆ ಸಂಬಂಧಿಸಿದಂತೆ ದೊಡ್ಡ ಸಮಸ್ಯೆಯನ್ನು ಹುಟ್ಟುಹಾಕಿದೆ ಎಂದಿರುವ ನ್ಯಾಯಮಂಡಳಿ, ಸಿಪಿಸಿಬಿ ಮತ್ತು ಸಚಿವಾಲಯಗಳಿಂದ ಪ್ರತಿಕ್ರಿಯೆ ಕೇಳಿದ್ದು ಪ್ರಕರಣವನ್ನು ಸೆ. 2ರಂದು ವಿಚಾರಣೆ ನಡೆಸಲಿದೆ.

Kannada Bar & Bench
kannada.barandbench.com