ಮೂಲಭೂತ ಹಕ್ಕಾಗಿ ಕ್ರೀಡೆ: ಅಮಿಕಸ್ ಸಲಹೆ ಕುರಿತು ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್‌

ಶಾಲಾ ಮಕ್ಕಳು ಮತ್ತು ಯುವಕರಿಗೆ ದೈಹಿಕ ಅರಿವು ಮೂಡಿಸುವುದಕ್ಕೆ ಒತ್ತಾಯಿಸಿ, ಕ್ರೀಡಾ ಚಟುವಟಿಕೆಗಳನ್ನು ಮೂಲಭೂತ ಹಕ್ಕು ಎಂದು ಘೋಷಿಸಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಪೀಠದಲ್ಲಿ ನಡೆಯಿತು.
ಮೂಲಭೂತ ಹಕ್ಕಾಗಿ ಕ್ರೀಡೆ: ಅಮಿಕಸ್ ಸಲಹೆ  ಕುರಿತು ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್‌
Supreme Court

ದೈಹಿಕ ಚಟುವಟಿಕೆ ಮತ್ತು ಅದಕ್ಕೆ ಸಂಬಂಧಿಸಿದ ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ಘೋಷಿಸಲು ಅಮಿಕಸ್‌ ಕ್ಯೂರಿಯೊಬ್ಬರು ನೀಡಿದ ಸಲಹೆಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ [ಕನಿಷ್ಕ ಪಾಂಡೆ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಕ್ರೀಡಾ ಹಕ್ಕನ್ನು ವಿದ್ಯಾರ್ಥಿಗಳ ಮೂಲಭೂತ ಹಕ್ಕು ಎಂದು ಘೋಷಿಸುವಂತೆ ಕೋರಿ ಅಮಿಕಸ್ ಕ್ಯೂರಿ ಗೋಪಾಲ್ ಶಂಕರನಾರಾಯಣನ್ ಅವರು ನೀಡಿದ ಸಲಹೆಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಬಿ ಆರ್ ಗವಾಯಿ ಅವರನ್ನೊಳಗೊಂಡ ಪೀಠ ಕೇಳಿದೆ. ಪ್ರಕರಣವನ್ನು ನ್ಯಾಯಾಲಯಗಳ ಬೇಸಿಗೆ ರಜೆ ಮುಗಿದ ನಂತರ ಪಟ್ಟಿ ಮಾಡುವಂತೆ ಅದು ತಿಳಿಸಿದೆ.

ಮೂರನೇ ವರ್ಷದ ಕಾನೂನು ವಿದ್ಯಾರ್ಥಿಯೊಬ್ಬರು 2017 ರಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು.

ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಅದರ ಭಾಗ III ರಲ್ಲಿ 21 ಎ ವಿಧಿಯೊಳಗೆ ಕ್ರೀಡಾ ಶಿಕ್ಷಣ, ಕ್ರೀಡಾ ಮೌಲ್ಯ ಮತ್ತು ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸಲು ಪ್ರಭುತ್ವವು ಶ್ರಮಿಸಬೇಕು ಎಂಬ ನಿರ್ದೇಶಕ ತತ್ವವನ್ನು ಅಡಕ ಮಾಡುವ ಬಗ್ಗೆ ಉನ್ನತಾಧಿಕಾರ ಸಮಿತಿಯೊಂದನ್ನು ರಚಿಸಬೇಕು ಎಂದು ಪಿಐಎಲ್‌ ಪ್ರಮುಖವಾಗಿ ಕೋರಿತ್ತು. ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಮತ್ತು ವಕೀಲ ವಂಶದೀಪ್ ದಾಲ್ಮಿಯಾ ಅವರನ್ನು ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡುವ ಅಮಿಸಿ ಕ್ಯೂರಿಗಳನ್ನಾಗಿ ಸುಪ್ರೀಂ ಕೋರ್ಟ್‌ ನೇಮಿಸಿತ್ತು. ಸೋಮವಾರ ಪ್ರಕರಣದ ವಿಚಾರಣೆ ನಡೆದಾಗ ಶಂಕರ್‌ ನಾರಾಯಣನ್‌ ಕ್ರೀಡೆಯನ್ನು ಮೂಲಭೂತ ಹಕ್ಕಾಗಿಸುವ ಕುರಿತಂತೆ ಮೂರು ಸಲಹೆಗಳನ್ನು ನೀಡಿದರು.

ಮೌಂಟ್‌ ಎವರೆಸ್ಟ್‌ ನಮ್ಮ ದೇಶದಲ್ಲಿಯೇ ಇದ್ದರೂ ಅದನ್ನು ಹತ್ತುತ್ತಿರುವವರಲ್ಲಿ ಶೇ. 99 ಮಂದಿ ವಿದೇಶಿಗರು. ನಮ್ಮ ಮಕ್ಕಳು ಮತ್ತು ಯುವಕರನ್ನು ಮೌಂಟ್ ಎವರೆಸ್ಟ್ ಹತ್ತಿಸುವಷ್ಟು ಶಕ್ತಿಶಾಲಿಯಾಗಿಸಲು ಬೇಕಾದ ದೈಹಿಕ ಅರಿವು ನಮ್ಮಲ್ಲಿಲ್ಲ.
ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್

ಶಂಕರ್‌ನಾರಾಯಣನ್‌ ಸಲಹೆಯ ಸ್ವಾರಸ್ಯಕರ ಅಂಶಗಳು:

  • ʼಹುಡುಗಿಯರಂತೆ ಚೆಂಡನ್ನು ಎಸೆಯಬೇಡಿ’ ಎಂದು ನಾವು ಮೊದಲು ಕೇಳುತ್ತಿದ್ದಂತಹ ಪದಗುಚ್ಛಗಳ ಬಳಕೆ ತಪ್ಪಿಸಲು ಯುವಕರಲ್ಲಿ ದೈಹಿಕ ಸಾಕ್ಷರತೆ ಮೂಡಿಸುವ ಅಗತ್ಯವಿದೆ.

  • ಮೌಂಟ್ ಎವರೆಸ್ಟ್ ನಮ್ಮ ಪಕ್ಕದಲ್ಲೇ ಇದೆ. ಆದರೆ ಎವರೆಸ್ಟ್ ಏರುತ್ತಿರುವವರಲ್ಲಿ 99% ಮಂದಿ ಪಾಶ್ಚಾತ್ಯ ದೇಶಗಳಿಂದ ಬಂದವರು. ನಮ್ಮ ಮಕ್ಕಳು ಮತ್ತು ಯುವಕರನ್ನು ಮೌಂಟ್ ಎವರೆಸ್ಟ್ ಹತ್ತಿಸುವಷ್ಟು ಶಕ್ತಿಶಾಲಿಯಾಗಿಸಲು ಬೇಕಾದ ದೈಹಿಕ ಅರಿವು ನಮ್ಮಲ್ಲಿಲ್ಲ.

  • ಅಕ್ಕಪಕ್ಕದ ಉದ್ಯಾನವನಗಳಲ್ಲಿ ಆಟದ ಮೈದಾನಗಳಿವೆ. ಆದರೆ ನಾನು ಅಲ್ಲಿ ಹೂವಿನ ಗಿಡ ನೆಟ್ಟಿರುವುದರಿಂದ ನೀವು ಅಲ್ಲಿ ಆಟ ಆಡಬಾರದು ಎಂಬ ಆಂಟಿಗಳು ನಮ್ಮಲ್ಲಿದ್ದಾರೆ.

Related Stories

No stories found.