ಆಸ್ತಿಯ ಹಕ್ಕು ಸಂವಿಧಾನದ 300 ಎ ವಿಧಿ ಮೂಲಕ ಒದಗಿಸಲಾದ ಮೂಲಭೂತ ಹಕ್ಕಿಗೆ ಸಮನಾದ ಮೂಲ ಮಾನವ ಹಕ್ಕು ಎಂದು ಜಮ್ಮು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ. [ಶಬೀರ್ ಅಹ್ಮದ್ ಯಾಟೂ ಮತ್ತು ಜಮ್ಮು ಕಾಶ್ಮೀರ ಕೇಂದ್ರಾಡಳಿತ ಇನ್ನಿತರರ ನಡುವಣ ಪ್ರಕರಣ].
ಕಾನೂನು ನಿಗದಿಪಡಿಸಿದ ಕಾರ್ಯವಿಧಾನ ಪಾಲಿಸದೇ ಯಾರೊಬ್ಬರ ಆಸ್ತಿಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಪಂಕಜ್ ಮಿಥಾಲ್ ಮತ್ತು ನ್ಯಾಯಮೂರ್ತಿ ಜಾವೇದ್ ಇಕ್ಬಾಲ್ ವನಿ ಅವರಿದ್ದ ಪೀಠ ಹೇಳಿದೆ.
"ಆಸ್ತಿಯ ಹಕ್ಕು ಮೂಲ ಮಾನವ ಹಕ್ಕು, ಇದು ಭಾರತದ ಸಂವಿಧಾನದ 300 ಎ ಪರಿಚ್ಛೇದದ ಮೂಲಕ ಖಾತರಿಪಡಿಸಿದ ಮೂಲಭೂತ ಹಕ್ಕಿಗೆ ಸಮಾನವಾಗಿದೆ . ಕಾನೂನಿನ ಕಾರ್ಯವಿಧಾನ ಹೊರತುಪಡಿಸಿ ಯಾರೂ ತಮ್ಮ ಆಸ್ತಿಯಿಂದ ವಂಚಿತರಾಗಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಬಂಡಿಪೊರದ ಝಾಲ್ಪೊರ ಸುಲ್ತಾನ್‌ಪೊರ ಸುಂಬಲ್‌ನಲ್ಲಿ ಭಾರೀ ಉಕ್ಕಿನ ಸೇತುವೆ ನಿರ್ಮಾಣಕ್ಕಾಗಿ ಸರ್ಕಾರಿ ರಸ್ತೆ ಮತ್ತು ಕಟ್ಟಡ ಇಲಾಖೆ (ಆರ್ & ಬಿ ಇಲಾಖೆ) ತನ್ನ ಖಾಸಗಿ ಭೂಮಿಯನ್ನು ಒಪ್ಪಿಗೆಯಿಲ್ಲದೆ ಹಾಗೂ ಕಾನೂನು ಪಾಲಿಸದೆ ಸ್ವಾಧೀನಪಡಿಸಿಕೊಂಡಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಸಂವಿಧಾನ ಖಾತರಿಪಡಿಸುವ ಅರ್ಜಿದಾರರ ಆಸ್ತಿಯ ಹಕ್ಕನ್ನು ಉಲ್ಲಂಘಿಸಿದ ಕಾರಣಕ್ಕೆ ಸರ್ಕಾರ ಮತ್ತಿತರ ಪ್ರತಿವಾದಿಗಳು ಮೂರು ತಿಂಗಳ ಒಳಗೆ ಅರ್ಜಿದಾರರಿಗೆ ವಿಶೇಷ ದಂಡದ ರೂಪದಲ್ಲಿ ₹ 10 ಲಕ್ಷ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಮುದ್ರಾಂಕ ದರದಲ್ಲಿ ಅರ್ಜಿದಾರರಿಗೆ ಪಾವತಿಸಬೇಕಾದ ಜಮೀನು ಪರಿಹಾರ ಮೊತ್ತವನ್ನು 6 ವಾರಗಳ ಅವಧಿಯಲ್ಲಿ ನಿರ್ಣಯಿಸಿ 3 ತಿಂಗಳ ಒಳಗೆ ಪಾವತಿಸಬೇಕು. ಪ್ರತಿ ವರ್ಷಕ್ಕೆ ₹ 1 ಲಕ್ಷದಂತೆ 5 ವರ್ಷಗಳವರೆಗೆ ಭೂಮಿಯ ಬಳಕೆ ಮತ್ತು ಉದ್ಯೋಗಕ್ಕಾಗಿ ಟೋಕನ್ ಬಾಡಿಗೆ ಪರಿಹಾರವನ್ನು 3 ತಿಂಗಳೊಳಗೆ ಪಾವತಿಸಬೇಕು ಎಂದು ಕೂಡ ನ್ಯಾಯಾಲಯ ಸೂಚಿಸಿತು.