ಪಂಜಾಬ್, ಈಶಾನ್ಯದಲ್ಲೂ ಕಷ್ಟಕಾಲ ಕಂಡಿದ್ದೇವೆ; ಕಾಶ್ಮೀರವನ್ನು ಭಿನ್ನವಾಗಿ ನೋಡಲಾಗದು ಎಂದ ಸುಪ್ರೀಂ

ವಿಧಿ 370ನ್ನು ರದ್ದುಗೊಳಿಸುವ ಸಂಬಂಧ ಜಮ್ಮು ಕಾಶ್ಮೀರ ಸಂವಿಧಾನ ರಚನಾ ಸಭೆಯ ಅಭಿಪ್ರಾಯವನ್ನು ಶಿಫಾರಸು ಎಂಬಂತೆ ಅರ್ಥೈಸಿಕೊಳ್ಳಬೇಕಿತ್ತು ಎಂದು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ವಾದಿಸಿದರು.
Article 370 Day 12
Article 370 Day 12

ಪಂಜಾಬ್ ಮತ್ತು ಈಶಾನ್ಯ ರಾಜ್ಯಗಳು ಸೇರಿದಂತೆ ದೇಶದ ವಿವಿಧ ಭಾಗಗಳು ಉಗ್ರವಾದ ಮತ್ತು ಪ್ರತ್ಯೇಕತಾವಾದದಿಂದ ಪೀಡಿತವಾಗಿದ್ದು ಈ ನಿಟ್ಟಿನಲ್ಲಿ ಜಮ್ಮು ಕಾಶ್ಮೀರವನ್ನು ಏಕಾಂಗಿಯಾಗಿಸಬೇಕಿಲ್ಲ ಎಂದು ಮಂಗಳವಾರ ನಡೆದ 370ನೇ ವಿಧಿ ರದ್ದತಿ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಹೇಳಿತು [ಸಂವಿಧಾನದ 370 ನೇ ವಿಧಿಗೆ ಸಂಬಂಧಿಸಿದ ಪ್ರಕರಣ ].

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ 370 ನೇ ವಿಧಿಯನ್ನು 2019ರಲ್ಲಿ ರದ್ದಗೊಳಿಸಿದ್ದನ್ನು ಸಮರ್ಥಿಸಿ ಕೇಂದ್ರ ಸರ್ಕಾರ ಮಂಡಿಸಿದ ವಾದವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ ಆರ್‌ ಗವಾಯಿ ಹಾಗೂ ಸೂರ್ಯ ಕಾಂತ್ ಅವರಿದ್ದ ಸಾಂವಿಧಾನಿಕ ಪೀಠ ಆಲಿಸಿತು.

ಜಮ್ಮು ಕಾಶ್ಮೀರವನ್ನು 2019 ರಲ್ಲಿ ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿದಂತೆ ಬೇರೆ ರಾಜ್ಯಗಳನ್ನು ವಿಭಜಿಸುವ ಸಾಧ್ಯತೆ ಇದೆಯೇ ಎಂದು ಪೀಠ ಪ್ರಶ್ನಿಸಿದಾಗ ಕೇಂದ್ರದ ಪರ ವಾದ ಮಂಡಿಸಿದ ಭಾರತದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅಂತಹ ಸ್ಥಿತಿ ಮತ್ತೆ ಉದ್ಭವಿಸದು ಎಂದರು. ಆಗ ನ್ಯಾ. ಕೌಲ್‌ “ನಾವು ಪಂಜಾಬ್‌ ಈಶಾನ್ಯದಲ್ಲಿ ಕಷ್ಟದ ಸಮಯ ನೋಡಿದ್ದು ಇಂತಹದ್ದು ಒಂದೇ ಉದಾಹರಣೆಯಲ್ಲ ಎಂದರು. ಈ ಹಂತದಲ್ಲಿ ನ್ಯಾ. ಗವಾಯಿ ಅವರು ಮಣಿಪುರದ ಈಗಿನ ಪರಿಸ್ಥಿತಿಯನ್ನು ಉಲ್ಲೇಖಿಸಿದರು. ಅವರ ಮಾತಿಗೆ ತಲೆದೂಗಿದ ನ್ಯಾ. ಖನ್ನಾ “(ಕಾಶ್ಮೀರ) ಗಡಿ ರಾಜ್ಯವಾದ್ದರಿಂದ ಅದನ್ನು ಭಿನ್ನವಾಗಿ ಪರಿಗಣಿಸಬೇಕು ಎಂದು ನೀವು ಹೇಳಲು ಸಾಧ್ಯವಿಲ್ಲ” ಎಂದರು.

Also Read
ಶಾಶ್ವತ ಕೇಂದ್ರಾಡಳಿತ ಪ್ರದೇಶವಾಗಿ ಜಮ್ಮು ಕಾಶ್ಮೀರ ಉಳಿಯದು: ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಭರವಸೆ

ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಜಿ “ದಶಕಗಳಿಂದ ನಾವು ಎದುರಿಸುತ್ತಿರುವ ನಿರಂತರ, ಪುನರಾವರ್ತಿತ ಪರಿಸ್ಥಿತಿಯನ್ನು ನೋಡಿ. ಇಲ್ಲಿ ಒಂದು ಭಾಗವನ್ನು ಪಾಕಿಸ್ತಾನ, ಪಿಒಕೆ ಆಕ್ರಮಿಸಿಕೊಂಡಿದೆ. ಇದು ದಶಕಗಳಿಂದ ರಾಷ್ಟ್ರ ಎದುರಿಸುತ್ತಿರುವ ಸಮಸ್ಯೆಯಾಗಿದ್ದು ಈ (ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸುವ) ನಿರ್ಧಾರಗಳನ್ನು ಏಕಾಏಕಿ ತೆಗೆದುಕೊಂಡಿಲ್ಲ. ಇವು ನೀತಿ ನಿರ್ಧರಣದ ಸಂಗತಿಗಳು” ಎಂದರು.

ಮಂಗಳವಾರ ಪ್ರಕರಣದ ಹನ್ನೆರಡನೇ ದಿನದ ವಿಚಾರಣೆ ನಡೆಯಿತು. ಈ ಸಂದರ್ಭದಲ್ಲಿ ವಿಧಿ 370ನ್ನು ರದ್ದುಗೊಳಿಸುವ ಸಂಬಂಧ ಜಮ್ಮು ಕಾಶ್ಮೀರ ಸಂವಿಧಾನ ರಚನಾ ಸಭೆಯ ಅಭಿಪ್ರಾಯವನ್ನು ಶಿಫಾರಸು ಎಂಬಂತೆ ಅರ್ಥೈಸಿಕೊಳ್ಳಬೇಕಿತ್ತು ಎಂದು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ವಾದಿಸಿದರು.

ವಿಧಿ 370ರ ರದ್ದತಿಯು ಜಮ್ಮು ಮತ್ತು ಕಾಶ್ಮೀರದಲ್ಲಿ ವಿವಿಧ ಜನರು ಚುನಾವಣೆ ಎದುರಿಸುವ ಅವಕಾಶ ಸೃಷ್ಟಿಸಿದೆ. ರದ್ದತಿಯು ಭಾರತದ ಒಕ್ಕೂಟದೊಂದಿಗೆ ಜಮ್ಮು ಮತ್ತು ಕಾಶ್ಮೀರದ ಏಕೀಕರಣವನ್ನು ಅಂತಿಮಗೊಳಿಸಿದೆ ಎಂದರು.

Related Stories

No stories found.
Kannada Bar & Bench
kannada.barandbench.com