ಭಾರತದ ಬಾಹ್ಯ ಸಾರ್ವಭೌಮತ್ವವು ಪ್ರತ್ಯೇಕವಾಗಿ ಕೇಂದ್ರ ಸರ್ಕಾರದ ಬಳಿ ಇದ್ದು ಆಂತರಿಕ ಸಾರ್ವಭೌಮತ್ವವನ್ನು ಆಯಾ ರಾಜ್ಯ ಸರ್ಕಾರಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ನಡೆದ 370ನೇ ವಿಧಿ ರದ್ದತಿ ಪ್ರಕರಣದ ವಿಚಾರಣೆ ವೇಳೆ ಮೌಖಿಕವಾಗಿ ತಿಳಿಸಿತು. [ಸಂವಿಧಾನದ 370 ನೇ ವಿಧಿಗೆ ಸಂಬಂಧಿಸಿದ ಪ್ರಕರಣ ].
ವಿಧಿಯನ್ನು ರದ್ದುಗೊಳಿಸುವ ಕ್ರಮ ಬೆಂಬಲಿಸಿದ ಅರ್ಜಿದಾರರೊಬ್ಬರ ಪರವಾಗಿ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಅವರ ವಾದವನ್ನು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ ಆರ್ ಗವಾಯಿ ಹಾಗೂ ಸೂರ್ಯ ಕಾಂತ್ ಅವರಿದ್ದ ಸಾಂವಿಧಾನಿಕ ಪೀಠ ಆಲಿಸಿತು.
ರಾಜಕೀಯ ಸಾರ್ವಭೌಮತ್ವ ಕೇಂದ್ರ ಸರ್ಕಾರದ ಬಳಿ ಇದೆ ಎಂದು ಜೇಠ್ಮಲಾನಿ ಹೇಳಿದರು. ಆಗ ಸಿಜೆಐ ಅವರು ಹಾಗಾದರೆ, ಬಾಹ್ಯ ಮತ್ತು ಆಂತರಿಕ ಸಾರ್ವಭೌಮತ್ವದ ಸ್ಪಷ್ಟ ಪರಿಕಲ್ಪನೆ ಇದೆ ಎನ್ನುವುದನ್ನು ಒಪ್ಪಿಕೊಳ್ಳುತ್ತೀರಾ ಎಂದರು. ಬಾಹ್ಯ ಸಾರ್ವಭೌಮತ್ವ ಎಂಬುದು ಒಕ್ಕೂಟದೊಂದಿಗೆ (ಕೇಂದ್ರ ಸರ್ಕಾರದೊಂದಿಗೆ) ಸ್ಪಷ್ಟವಾಗಿ ಇದ್ದು ಆಂತರಿಕ ಸಾರ್ವಭೌಮತ್ವ ಎಂಬುದು ಒಕ್ಕೂಟ ಮತ್ತು ರಾಜ್ಯಗಳ ನಡುವೆ ಹಂಚಿಕೆಯಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜೇಠ್ಮಲಾನಿ ಅವರು ಅಂತಿಮ ಕಾನೂನಾತ್ಮಕ ಸಾರ್ವಭೌಮತ್ವ ಎಂಬುದು ಕೇಂದ್ರ ಸರ್ಕಾರದ ಬಳಿ ಇರುವುದರಿಂದ ತನ್ನ ನಿಬಂಧನೆ 3ರ ಮೂಲಕ ಅದು 370ನೇ ವಿಧಿಯನ್ನು ರದ್ದುಗೊಳಿಸಬಹುದಿತ್ತು ಎಂದರು.
ಆಗ ಸಿಜೆಐ "ಕಾನೂನನ್ನು ತಿದ್ದುಪಡಿ ಮಾಡಲು ಅಥವಾ ಜಾರಿಗಾಗಿ ಶಾಸಕಾಂಗ ತನ್ನ ಅಧಿಕಾರವನ್ನು ಚಲಾಯಿಸುತ್ತದೆ - (ಅದು) ಸಾಂವಿಧಾನಿಕ ಅಧಿಕಾರದ ಚಲಾವಣೆಯಾಗಿದ್ದು ಸಂವಿಧಾನ ಸಭೆಯಾಗಿ ಮಾರ್ಪಡುವುದಲ್ಲ" ಎಂದು ತಿಳಿಸಿದರು.
ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು 2019ರ ಆಗಸ್ಟ್‌ನಲ್ಲಿ ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಸೋಮವಾರ ನಡೆದಿದ್ದು. ಅಂದಿನದ್ದು 15ನೇ ದಿನದ ವಿಚಾರಣೆಯಾಗಿದೆ.
ಗಮನಾರ್ಹ ಸಂಗತಿ ಎಂದರೆ ಸೋಮವಾರ ಪೀಠ ಸಂವಿಧಾನಕ್ಕೆ ತಮ್ಮ ನಿಷ್ಠೆ ಇದೆ ಮತ್ತು ಕಾಶ್ಮೀರ ಭಾರತ ಒಕ್ಕೂಟದ ಅವಿಭಾಜ್ಯ ಅಂಗವಾಗಿದೆ ಎಂದು ಪ್ರಮಾಣ ಮಾಡಿದ ಅಫಿಡವಿಟ್ ಸಲ್ಲಿಸುವಂತೆ ಪ್ರಕರಣದ ಅರ್ಜಿದಾರರಲ್ಲೊಬ್ಬರಾದ ಲೋಕಸಭಾ ಸದಸ್ಯ ಅಕ್ಬರ್ ಲೋನ್ ಅವರಿಗೆ ಸೂಚಿಸಿತ್ತು.
ನಿನ್ನೆಯ ವಿಚಾರಣೆ ವೇಳೆ ಪೀಠ ರದ್ದತಿ ಬೆಂಬಲಿಸುವವರ ಮತ್ತು ಕೇಂದ್ರ ಸರ್ಕಾರದ ಪರ ಮಂಡಿಸಲಾದ ವಾದವನ್ನು ಆಲಿಸಲಾಯಿತು. ಹಿರಿಯ ವಕೀಲ ವಿ ಗಿರಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್, ಹಿರಿಯ ನ್ಯಾಯವಾದಿ ಎಸ್ ಗುರು ಕೃಷ್ಣಕುಮಾರ್, ವಕೀಲೆ ಕನು ಅಗರ್‌ವಾಲ್, ಜಮ್ಮು ಕಾಶ್ಮೀರದ ಅಡ್ವೊಕೇಟ್ ಜನರಲ್ ಡಿಸಿ ರೈನಾ ಮತ್ತಿತರರು ವಾದ ಮಂಡಿಸಿದರು.