ಸಂವಿಧಾನದ 370ನೇ ವಿಧಿ: ಸಿಬಲ್‌, ಸುಬ್ರಮಣಿಯಮ್‌ ವಾದಕ್ಕೆ ತಲಾ 10 ಗಂಟೆ; ಅರ್ಜಿದಾರರಿಗೆ ಒಟ್ಟು 60+ ಗಂಟೆ ನಿಗದಿ

ವಿವಿಧ ಅರ್ಜಿದಾರರು ಮತ್ತು ಮಧ್ಯಪ್ರವೇಶಕಾರರ ಪರವಾಗಿ ಒಟ್ಟಾರೆ 18 ವಕೀಲರು ವಾದ ಮಂಡಿಸಲಿದ್ದಾರೆ.
Jammu and Kashmir map and Supreme Court with Article 370
Jammu and Kashmir map and Supreme Court with Article 370

ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸಂವಿಧಾನದ 370ನೇ ವಿಧಿ ಅಡಿ ಕಲ್ಪಿಸಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಬುಧವಾರ ಆರಂಭಿಸಿದೆ.

ವಿಶೇಷ ಸ್ಥಾನಮಾನದ ರದ್ದಿನ ಬಳಿಕ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ ಅನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಲಾಗಿದ್ದು, ವಿಶೇಷ ಸ್ಥಾನಮಾನ ರದ್ದುಪಡಿಸಿದ ನಾಲ್ಕು ವರ್ಷಗಳ ಬಳಿಕ ಅರ್ಜಿಗಳ ವಿಚಾರಣೆ ನಡೆಸಲಾಗುತ್ತಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌, ಸಂಜೀವ್‌ ಖನ್ನಾ, ಬಿ ಆರ್‌ ಗವಾಯಿ ಮತ್ತು ಸೂರ್ಯಕಾಂತ್‌ ಅವರ ನೇತೃತ್ವದ ಸಾಂವಿಧಾನಿಕ ಪೀಠವು 20ಕ್ಕೂ ಅಧಿಕ ಅರ್ಜಿಗಳ ವಿಚಾರಣೆ ನಡೆಸಲಿದೆ.

ನೋಡೆಲ್‌ ವಕೀಲ, ಅಡ್ವೊಕೇಟ್‌ ಆನ್‌ ರೆಕಾರ್ಡ್‌ ಎಸ್‌ ಪ್ರಸನ್ನ ಅವರಿಂದ ಸ್ವೀಕರಿಸಿರುವ ಲಿಖಿತ ವಾದದ ಪ್ರಕಾರ ಅರ್ಜಿದಾರರಿಗೆ ವಾದ ಪೂರ್ಣಗೊಳಿಸಲು 60 ಗಂಟೆಗಳು ಕನಿಷ್ಠ ಬೇಕಾಗಲಿವೆ ಎಂದು ಹೇಳಲಾಗಿದೆ. ವಿವಿಧ ಅರ್ಜಿದಾರರ ಪರವಾಗಿ ಒಟ್ಟಾರೆ 18 ವಕೀಲರು ವಾದ ಮಂಡಿಸಲಿದ್ದು, ಹಿರಿಯ ವಕೀಲರಾದ ಕಪಿಲ್‌ ಸಿಬಲ್‌ ಮತ್ತು ಗೋಪಾಲ್‌ ಸುಬ್ರಮಣಿಯಮ್‌ ಅವರು ತಲಾ 10 ಗಂಟೆ ವಾದ ಮಂಡಿಸಲಿದ್ದಾರೆ.

ಹಿರಿಯ ವಕೀಲರಾದ ಶೇಖರ್‌ ನಾಫಡೆ ಮತ್ತು ಜಫರ್‌ ಶಾ ಅವರು ತಲಾ 8 ಗಂಟೆ ವಾದ ಮಂಡಿಸಲಿದ್ದಾರೆ. ಹಿರಿಯ ವಕೀಲರಾದ ದುಷ್ಯಂತ್‌ ದವೆ ಮತ್ತು ಚಂದರ್‌ ಉದಯ್‌ ಸಿಂಗ್‌ ಅವರು ತಲಾ ನಾಲ್ಕು ತಾಸು ವಾದ ಮಂಡನೆ ಮಾಡುವ ಸಾಧ್ಯತೆ ಇದೆ. ಉಳಿದಂತೆ ಹಿರಿಯ ವಕೀಲರಾದ ದಿನೇಶ್‌ ದ್ವಿವೇದಿ, ಪ್ರಶಾಂತೊ ಚಂದ್ರ ಸೇನ್‌ ಮತ್ತು ಗೋಪಾಲ ಶಂಕರನಾರಾಯಣನ್‌ ಅವರು ತಲಾ ಸರಿಸುಮಾರು ಮೂರು ತಾಸನ್ನು ವಾದಕ್ಕೆ ಬಳಸುವ ಸಾಧ್ಯತೆ ಇದೆ.

ಹಿರಿಯ ವಕೀಲರಾದ ಸಂಜಯ್‌ ಪಾರೀಖ್‌, ರಾಜೀವ್‌ ಧವನ್‌ ತಲಾ ಒಂದೊಂದು ಗಂಟೆ ವಾದಿಸುವ ಸಾಧ್ಯತೆ ಇದೆ. ಈ ಎಲ್ಲಾ ವಕೀಲರ ವಾದದ ಸಮಯವನ್ನು ಒಟ್ಟುಗೂಡಿಸಿದರೆ ಅದು 57 ತಾಸುಗಳಾಗಲಿದೆ. ಉಳಿದ ಮೂರು ತಾಸನ್ನು ಮಧ್ಯಪ್ರವೇಶ ಅರ್ಜಿ ಸಲ್ಲಿಸಿರುವವರ ಪರ ವಕೀಲರಿಗೆ ನಿಗದಿಪಡಿಸಲಾಗುತ್ತದೆ. ಈ ಪೈಕಿ ಇಬ್ಬರನ್ನು ಹಿರಿಯ ವಕೀಲರಾದ ಮೇನಕಾ ಗುರುಸ್ವಾಮಿ ಮತ್ತು ನಿತ್ಯಾ ರಾಮಕೃಷ್ಣನ್‌ ಪ್ರತಿನಿಧಿಸಲಿದ್ದಾರೆ. ಹಿರಿಯ ವಕೀಲ ಪಿ ವಿ ಸುರೇಂದ್ರನಾಥ್‌ ಮತ್ತು ವಕೀಲರಾದ ಮನೀಷ್‌ ತೇವರಿ, ಇರ್ಫಾನ್‌ ಹಫೀಜ್‌ ಲೋನ್‌ ಮತ್ತು ಜಹೂರ್‌ ಅಹ್ಮದ್‌ ಭಟ್‌ ಅವರು ಇತರೆ ಮಧ್ಯಪ್ರವೇಶಕಾರರ ಪರವಾಗಿ ವಾದಿಸಲಿದ್ದಾರೆ.

Kannada Bar & Bench
kannada.barandbench.com