ಜಮ್ಮು ಕಾಶ್ಮೀರ ಸಂವಿಧಾನ ರಚನಾ ಸಭೆ ಅಸ್ತಿತ್ವ ಕಳೆದುಕೊಂಡ ನಂತರ ಅನುಸರಿಸಬೇಕಿದ್ದ ಆಡಳಿತಭಾರದ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಮೌಖಿಕವಾಗಿ ಹೇಳಿದೆ.
ಸಂವಿಧಾನದ 370ನೇ ವಿಧಿ ರದ್ದತಿ ಪ್ರಶ್ನಿಸಿ ಅರ್ಜಿದಾರರ ಪರವಾಗಿ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು ಮಂಡಿಸಿದ ವಾದ ಆಲಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ ಆರ್ ಗವಾಯಿ ಹಾಗೂ ಸೂರ್ಯ ಕಾಂತ್ ಅವರಿದ್ದ ಸಾಂವಿಧಾನಿಕ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ವಿಧಿಯನ್ನು ರದ್ದುಗೊಳಿಸುವ ಪ್ರಕ್ರಿಯೆಯು ಸಂವಿಧಾನ ಉಲ್ಲಂಘನೆಯ ಸರಣಿಯಾಗಿದೆ ಎಂದು ಅರ್ಜಿದಾರ ಸೊಯೀಬ್ ಕುರೇಶಿ ಪರವಾಗಿ ವಾದ ಮಂಡಿಸಿದ ಸುಪ್ರೀಂ ಕೋರ್ಟ್ ಅಡ್ವೊಕೇಟ್ ಆನ್ ರೆಕಾರ್ಡ್ ಶಂಕರನಾರಾಯಣನ್ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಚಂದ್ರಚೂಡ್, "ಸಂವಿಧಾನ ಸಭೆ ಅಸ್ತಿತ್ವ ಕಳೆದುಕೊಂಡ ಬಳಿಕ ಆಡಳಿತ ಹೇಗಿರಬೇಕು ಎಂಬರ ಕುರಿತು 370 ನೇ ವಿಧಿ ಏನನ್ನೂ ಹೇಳುವುದಿಲ್ಲ. ಇದರರ್ಥ 370ನೇ ವಿಧಿಯು 1, 2 ಮತ್ತು 3 ನೇ ವಿಧಿಗಳಿಗೆ ಅನುಗುಣವಾಗಿ ಕೆಲಸ ಮಾಡಿದೆ. ಹಾಗಾದರೆ ಎರಡು ಆಯ್ಕೆಗಳಿವೆ: ಒಂದೋ ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ಪರಮೋಚ್ಚವಾಗುತ್ತದೆ. ಹಾಗಾದರೆ ಸಂಯುಕ್ತ ಘಟಕವೊಂದರ ಸಂವಿಧಾನ ಒಕ್ಕೂಟದ ಸಂವಿಧಾನಕ್ಕಿಂತಲೂ ಶ್ರೇಷ್ಠವಾಗಲು ಸಾಧ್ಯವೇ? ಸಂವಿಧಾನ ರಚನಾ ಸಭೆಯಲ್ಲಿ ಕೆಲಸಗಳು 370ನೇ ವಿಧಿಯ ಅಂತಿಮ ಅಂಶ ಎಂದಾದಲ್ಲಿ ಜಮ್ಮು ಕಾಶ್ಮೀರದ ಸಂವಿಧಾನ ರಚನಾ ಸಭೆಯನ್ನು ಒಕ್ಕೂಟದ ಸಭೆಯಲ್ಲಿ ಅಳವಡಿಸಬೇಕು ಎಂದಾಗುವುದಿಲ್ಲವೇ?” ಎಂದು ಪ್ರಶ್ನಿಸಿದರು.
370ನೇ ವಿಧಿಯು ಸ್ವತಃ ಬಗೆಹರಿಯುತ್ತದೆ ಎಂದಾದರೆ, ಸಂವಿಧಾನ ಸಭೆ ಅಂತ್ಯಗೊಂಡಾಗ ಅದರ ಕಾರ್ಯಾಚರಣೆಯೂ ಕೊನೆಗೊಂಡಿದೆ ಎಂದು ಕೂಡ ಸಿಜೆಐ ಹೇಳಿದರು.
ಅಲ್ಲದೆ ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಾಲಯ ಕೆಲವು ಅಂಶಗಳನ್ನು ಪ್ರಸ್ತಾಪಿಸುತ್ತಾ “370 ನೇ ವಿಧಿ ಎಂದಿಗೂ ಶಾಶ್ವತ ಸ್ವರೂಪದ್ದಾಗಿರಲಿಲ್ಲ ಎಂದು ಅವು ತೋರಿಸುತ್ತವೆ. ಜಮ್ಮು ಕಾಶ್ಮೀರವನ್ನು ಭಾರತದ ಸಂಪೂರ್ಣ ಅವಿಭಾಜ್ಯ ಅಂಗವನ್ನಾಗಿ ಮಾಡುವ ಸಲುವಾಗಿ ರೂಪಿಸಿದ ಅನುಕೂಲಕರ ವಿಧಾನ ಇದಾಗಿತ್ತು" ಎಂದು ನ್ಯಾಯಾಲಯ ಹೇಳಿದೆ.
ವಿಧಿ ರದ್ದತಿ ಪ್ರಶ್ನಿಸಿದ್ದ ಅರ್ಜಿದಾರರು ಒಂಬತ್ತು ದಿನಗಳ ವಿಚಾರಣೆಯ ನಂತರ, ಬುಧವಾರ ತಮ್ಮ ವಾದ ಪೂರ್ಣಗೊಳಿಸಿದರು. ಹತ್ತನೇ ದಿನದ ವಿಚಾರಣೆ ಇಂದು ಮುಂದುವರೆದಿದೆ.