ಕೃತಕ ಬುದ್ಧಿಮತ್ತೆಯ ಸಾಧನಗಳು ಮತ್ತು ರೋಬೊಗಳು ಮನುಷ್ಯ ಬುದ್ಧಿಮತ್ತೆಗೆ ಸರಿಸಾಟಿಯಾಗಲಾರವು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಶನಿವಾರ ಹೇಳಿದರು.
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ನ ವ್ಯಾಪಕ ಬಳಕೆಯು ನಿರ್ಧಾರ ಮಾಡುವ ಶಕ್ತಿಯಲ್ಲಿನ ಅಲ್ಗಾರಿದಮ್ ಆಧರಿತ ಪಕ್ಷಪಾತದ ಕಲಿಕೆಗೆ ಎಣೆಮಾಡಿಕೊಡಬಹುದು ಮತ್ತು ಇದರಿಂದ ಮಾಹಿತಿ ಗೌಪ್ಯತೆಗೆ ಧಕ್ಕೆ ಒದಗಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಆದಾಗ್ಯೂ, ಭಾರತೀಯ ನ್ಯಾಯಂಗವನ್ನು ಬಾಧಿಸುತ್ತಿರುವ ದೀರ್ಘ ಕಾಲದಿಂದ ಬಾಕಿ ಉಳಿದ ಪ್ರಕರಣಗಳ ವಿಚಾರಣೆಗಾಗಿ ಡೀಪ್ ನ್ಯೂರಲ್ ನೆಟ್‌ವರ್ಕ್‌ಗಳು ಮತ್ತು ಯಂತ್ರ ಕಲಿಕೆಯಂತಹ ಸಾಧನಗಳನ್ನು ಬಳಸಬಹುದು ಎಂದು ಅವರು ಸಲಹೆ ನೀಡಿದರು.
ಪ್ರಕರಣಗಳ ಮುಂದೂಡುವಿಕೆ ಕಡಿಮೆ ಮಾಡಲು, ಪ್ರಕರಣದ ದಾಖಲೆಗಳನ್ನು ತ್ವರಿತವಾಗಿ ಭಾಷಾಂತರಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸಬಹುದು ಎಂದು ಅವರು ಹೇಳಿದರು. ಅಲ್ಲದೆ ಸುದೀರ್ಘ ಅರ್ಜಿ ಆಲಿಸುವಿಕೆ ಕಡಿಮೆಗೊಳಿಸಲು ಕೂಡ ಇದು ಸಹಾಯಕ ಎಂದು ಅವರು ವಿವರಿಸಿದರು.
ಭಾರತೀಯ ವಕೀಲರ ಪರಿಷತ್ ವತಿಯಿಂದ ನವದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ವಕೀಲರ ಸಮ್ಮೇಳನದಲ್ಲಿ ಕಾನೂನು ಭೂಮಿಕೆಯನ್ನು ಬದಲಿಸುವಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ ಎಂಬ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೃತಕ ಬುದ್ಧಿಮತ್ತೆಯಿಂದ ನಡೆಯುವ ಕಾನೂನುಬಾಹಿರ ಚಟುವಟಿಕೆ ಅಥವಾ ಲೋಪಗಳಿಗೆ ಹೊಣೆಗಾರಿಕೆ ನಿಗದಿಪಡಿಸುವುದನ್ನು ಶಾಸನ ರೂಪಿಸುವವರು ಪರಿಗಣಿಸಬೇಕಾಗುತ್ತದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ನ್ಯಾ. ಪಿ ಎಸ್ ನರಸಿಂಹ, ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ರಾಜೀವ್ ಶಕ್ದೆರ್, ಹೆಚ್ಚುವರಿ ಸಾಲಿಸಿಟರ್ ಜನರಲ್‌ಗಳಾದ ಎಸ್ ವಿ ರಾಜು, ಐಶ್ವರ್ಯ ಭಾಟಿ ಅವರು ಕಾರ್ಯಕ್ರಮದಲ್ಲಿ ವಿಚಾರ ಮಂಡಿಸಿದರು.