ಬೆದರಿಕೆ, ದಬ್ಬಾಳಿಕೆ,ತಾರತಮ್ಯವನ್ನು ಶಾಶ್ವತಗೊಳಿಸುವ ಸಾಧನವಾಗಬಹುದು ಕೃತಕ ಬುದ್ಧಿಮತ್ತೆ: ಸಿಜೆಐ ಕಳವಳ

ಆಲೋಚನೆ ವ್ಯಕ್ತಪಡಿಸುವ ಸಾಮರ್ಥ್ಯದ ಮೇಲೆ ನೇರ ಪರಿಣಾಮ ಬೀರುವುದರಿಂದ ಆನ್‌ಲೈನ್‌ ನಿಂದನೆ ಅಥವಾ ಕಿರುಕುಳದ ಬಗ್ಗೆ ಬಳಕೆದಾರರ ಮನಸ್ಸಿನಲ್ಲಿ ತಂತ್ರಜ್ಞಾನ ಭೀತಿ ಸೃಷ್ಟಿಸಬಾರದು ಎಂದು ಸಿಜೆಐ ಹೇಳಿದರು.
CJI DY Chandrachud
CJI DY Chandrachud
Published on

ಕೃತಕ ಬುದ್ಧಿಮತ್ತೆ (ಎ ಐ) ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗುತ್ತಿದ್ದರೂ ಅದು ಅಡ್ಡಪರಿಣಾಮವನ್ನೂ ಬೀರಬಲ್ಲದ್ದಾಗಿದ್ದು ತಾರತಮ್ಯವನ್ನು  ಶಾಶ್ವತಗೊಳಿಸುವ ಸಾಧನವಾಗಿಬಿಡಬಹುದು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌ ಆತಂಕ ವ್ಯಕ್ತಪಡಿಸಿದರು.  

ಚೆನ್ನೈನಲ್ಲಿರುವ ಮದ್ರಾಸ್‌ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ ಮದ್ರಾಸ್‌) ಶನಿವಾರ ಆಯೋಜಿಸಿದ್ದ 60ನೇ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಿಜೆಐ ಭಾಷಣದ ಪ್ರಮುಖಾಂಶಗಳು

  • ಎಲ್ಲರನ್ನೂ ನ್ಯಾಯಯುತವಾಗಿ ನಡೆಸಿಕೊಳ್ಳುವ ಹಕ್ಕನ್ನು ದುರ್ಬಲಗೊಳಿಸಿ ತಾರತಮ್ಯವನ್ನು ಎ ಐ ಶಾಶ್ವತಗೊಳಿಸಬಹುದು.

  • ಅನೇಕ ಎ ಐ ವ್ಯವಸ್ಥೆಗಳು ಸಾಮಾಜಿಕ ಪೂರ್ವಾಗ್ರಹಗಳಿಂದ ಕೂಡಿದ ಮಾಹಿತಿ ಆಧರಿಸಿ ನಿರ್ಧಾರ ಕೈಗೊಳ್ಳುತ್ತಿವೆ. ಉದಾ: ಕಂಪೆನಿಗಳು ನಿಯೋಜಿಸಿಕೊಳ್ಳುವ ಎ ಐ ಸಾಧನಗಳು ಮಹಿಳೆಯರಿಗಿಂತ ಪುರುಷರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳಲು ಆದ್ಯತೆ ನೀಡಿವೆ.  

  • ನೈಜ ಅನ್ವಯದ  ವೇಳೆ ಎ ಐ ಜನರು ಮತ್ತು ಸಮಾಜಕ್ಕೆ ಹಾನಿ ಉಂಟುಮಾಡಬಹುದು.

  •  ದಿಕ್ಕುತಪ್ಪಿಸಲು, ಬೆದರಿಕೆಯೊಡ್ಡಲು, ದಬ್ಬಾಳಿಕೆ ನಡೆಸಲು ಇದು ಸುಳ್ಳುಗಳನ್ನು ಸೃಷ್ಟಿಸಬಹುದು.

  • ಆಲೋಚನೆ ವ್ಯಕ್ತಪಡಿಸುವ ಸಾಮರ್ಥ್ಯದ ಮೇಲೆ ನೇರ ಪರಿಣಾಮ ಬೀರುವುದರಿಂದ ಆನ್‌ಲೈನ್ ನಿಂದನೆ ಅಥವಾ ಕಿರುಕುಳದ ಬಗ್ಗೆ ಬಳಕೆದಾರರ ಮನಸ್ಸಿನಲ್ಲಿ ತಂತ್ರಜ್ಞಾನ ಭೀತಿ ಸೃಷ್ಟಿಸಬಾರದು.

  • (ಈಚೆಗೆ ತೆರೆಕಂಡ ಪರಮಾಣು ವಿಜ್ಞಾನಿ ರಾಬರ್ಟ್ ಒಪೆನ್‌ಹೈಮರ್ ಅವರ ಜೀವನಾಧಾರಿತ ಚಲನಚಿತ್ರವನ್ನು ಪ್ರಸ್ತಾಪಿಸುತ್ತಾ) ತಾಂತ್ರಿಕ ವಿಕಸನ ಎಂಬುದು ಸಾಮಾಜಿಕ ನಿರ್ವಾತದಲ್ಲಿ ನಡೆಯುವುದಿಲ್ಲ; ಬದಲಿಗೆ ಇದು 'ಸಾಮಾಜಿಕ ವಾಸ್ತವತೆ, ಕಾನೂನು, ಹಣಕಾಸು ಹಾಗೂ ರಾಜಕೀಯ ರಚನೆಗಳ ಸಂಕೀರ್ಣವಾದ ವಸ್ತ್ರ ಹೊದ್ದಿರುತ್ತದೆ.

  • ಎಲೆಕ್ಟ್ರಾನಿಕ್ ಸಂವಹನವು ಸಂವಹನ ಮತ್ತು ಸಹಯೋಗದ ಮೌಲ್ಯಗಳನ್ನು ಹೇಳುವುದರ ಜೊತೆಗೆ ನಮ್ಮ ಅತ್ಯಂತ ವೈಯಕ್ತಿಕ ವಿವರಗಳು ಮತ್ತು ಆಲೋಚನೆಗಳ ಮೇಲೆ ಸಾಮೂಹಿಕ ಕಣ್ಗಾವಲು  ಇಡಲೂಬಹುದು.

  • ಅಣು ಬಾಂಬ್‌ನ ಮುಖ್ಯ ಪ್ರವರ್ತಕರಾಗಿದ್ದವರೊಬ್ಬರು ತದನಂತರ ನ್ಯೂಕ್ಲಿಯರ್‌ ಬಾಂಬ್‌ ಮಾಡುವುದರ ವಿರುದ್ಧ ಹಾಗೂ ದೊಡ್ಡ ಬಾಂಬುಗಳನ್ನು ತಯಾರಿಸುವುದರ ವಿರುದ್ಧ ನಿಷೇಧ ಹೇರುವಂತೆ ಕೋರಿದ್ದರು. ಸಿದ್ಧಾಂತ ಭೌತಶಾಸ್ತ್ರವು ವಾಸ್ತವ ಜಗತ್ತಿನಲ್ಲಿ ಉಂಟು ಮಾಡುವ ಪರಿಣಾಮದ ಹಿನ್ನೆಲೆಯಲ್ಲಿ ಅವರು ಹೀಗೆ ಹೇಳಿದ್ದರು. ಹಾಗಾಗಿ, ಯಾವುದೇ ತಂತ್ರಜ್ಞಾನ ತಟಸ್ಥವಲ್ಲ, ಅದನ್ನು ವಾಸ್ತವದ ಜಗತ್ತಿನಲ್ಲಿ ಅಳವಡಿಸಿದಾಗ ಅದು ಕೆಲವೊಂದು ಮಾನವೀಯ ಮೌಲ್ಯಗಳನ್ನು ತುಂಬುತ್ತದೆ.

Kannada Bar & Bench
kannada.barandbench.com