[ಕೇಜ್ರಿವಾಲ್ ಬಂಧನ] ದೆಹಲಿ ನ್ಯಾಯಾಲಯದಲ್ಲಿ ಪ್ರತಿಭಟನೆಗೆ ಮುಂದಾದ ಆಪ್‌; ತೀವ್ರ ಪರಿಣಾಮದ ಎಚ್ಚರಿಕೆ ನೀಡಿದ ನ್ಯಾಯಾಲಯ

ಕೇಜ್ರಿವಾಲ್ ಅವರ ಬಂಧನ ವಿರೋಧಿಸಿ ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಮಧ್ಯಾಹ್ನ 12:30ಕ್ಕೆ ವಕೀಲರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಎಪಿ ಕಾನೂನು ಘಟಕ ತಿಳಿಸಿತ್ತು.
ಎಎಪಿ
ಎಎಪಿ
Published on

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇ ಡಿ) ಬಂಧಿಸಿರುವುದನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ಕಾನೂನು ಘಟಕ ರಾಷ್ಟ್ರ ರಾಜಧಾನಿಯ ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಪ್ರತಿಭಟನೆಗೆ ಮುಂದಾದ ಬೆನ್ನಿಗೇ ದೆಹಲಿ ಹೈಕೋರ್ಟ್ ತೀವ್ರ ಪರಿಣಾಮದ ಎಚ್ಚರಿಕೆಯನ್ನು ರವಾನಿಸಿದೆ.

ಎಎಪಿಯ ಕಾನೂನು ಘಟಕದ ರಾಜ್ಯ ಅಧ್ಯಕ್ಷ ವಕೀಲ ಸಂಜೀವ್ ನಾಸಿಯಾರ್ ಅವರು ಕೇಜ್ರಿವಾಲ್ ಅವರ ಬಂಧನ ವಿರೋಧಿಸಿ ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಮಧ್ಯಾಹ್ನ 12:30ಕ್ಕೆ ವಕೀಲರು ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದ್ದರು. ನಾಸಿಯರ್ ಅವರು ದೆಹಲಿ ವಕೀಲರ ಪರಿಷತ್‌ನ ಉಪಾಧ್ಯಕ್ಷರೂ ಆಗಿದ್ದಾರೆ.

ಇಂದು ಬೆಳಗ್ಗೆ ವಿಚಾರಣೆ ವೇಳೆ ನ್ಯಾ.ಮನಮೋಹನ್‌ ಮತ್ತು ನ್ಯಾ. ಮನ್‌ಮೀತ್‌ ಪ್ರೀತಮ್‌ ಸಿಂಗ್ ಅರೋರಾ ಅವರ ಪೀಠದ ಮುಂದೆ ಪ್ರತಿಭಟನೆಯ ಕುರಿತಾಗಿ ವಕೀಲರೊಬ್ಬರು ಉಲ್ಲೇಖಿಸಿದರು. ಅಲ್ಲದೆ, ಪ್ರತಿಭಟನೆಯ ವಿರುದ್ಧದ ದೂರನ್ನು ತಾನು ರಾತ್ರಿಯೇ ಇಮೇಲ್‌ ಮುಖಾಂತರ ಕಳುಹಿಸಿದ್ದು, ಈ ವಿಚಾರವಾಗಿ ಇಂದು ಪ್ರಕರಣವನ್ನು ಆಲಿಸಬೇಕು ಎಂದು ಕೋರಿದರು.

ಪ್ರಕರಣವನ್ನು ನಾಳೆ ಆಲಿಸುವುದಾಗಿ ಪಟ್ಟಿ ಮಾಡಿದ ಪೀಠ, ಇದೇ ವೇಳೆ ಪ್ರತಿಭಟನೆ ಮುಂದಾಗಿರುವ ಆಪ್‌ನ ಕಾನೂನು ಘಟಕದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿತು. ನ್ಯಾಯಾಲಯದ ಆವರಣದಲ್ಲಿ ಹೇಗೆ ತಾನೆ ಪ್ರತಿಭಟನೆಗಳನ್ನು ನಡೆಸಲು ಸಾಧ್ಯ ಎಂದು ಪ್ರಶ್ನಿಸಿತು.

ಈ ವೇಳೆ ನ್ಯಾ. ಮನಮೋಹನ್‌ ಅವರು, "ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನೆಗಳನ್ನು ಆಯೋಜಿಸುವುದರ ಪರಿಣಾಮವು ಗಂಭೀರವಾಗಿರಲಿದೆ" ಎಂದು ಎಚ್ಚರಿಕೆಯನ್ನು ನೀಡಿದರು. ಮುಂದುವರೆದು, "ಪ್ರತಿಭಟನೆಯನ್ನು ಕೈಗೊಂಡಲ್ಲಿ ಸುಪ್ರೀಂ ಕೋರ್ಟ್‌ ರೂಪಿಸಿರುವ ನಿಯಮವನ್ನು ಅನ್ವಯಿಸಲಾಗುವುದು. ನ್ಯಾಯಾಲಯವನ್ನು ಸ್ಥಗಿತಗೊಳಿಸಲಾಗದು" ಎಂದು ಸ್ಪಷ್ಟಪಡಿಸಿದರು.

ಪ್ರತಿಭಟನೆಗೆ ಕರೆ ನೀಡಿದ್ದ ಎಎಪಿಯ ಕಾನೂನು ಘಟಕದ ರಾಜ್ಯಾಧ್ಯಕ್ಷ ವಕೀಲ ಸಂಜೀವ್ ನಾಸಿಯಾರ್ ಅವರು ತಮ್ಮ ವಿಡಿಯೋ ಸಂದೇಶದಲ್ಲಿ, "ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿರುವ ರೀತಿ ನೋಡಿದರೆ ಅವರ ವಿರುದ್ಧ ಪಿತೂರಿ ಇರುವುದು ತಿಳಿಯುತ್ತದೆ. ಆದ್ದರಿಂದ ನಾಳೆ ಮಧ್ಯಾಹ್ನ 12:30 ಕ್ಕೆ ಬೃಹತ್ ಪ್ರತಿಭಟನೆ ನಡೆಸಲು ವಕೀಲರ ಸಮುದಾಯ ನಿರ್ಧರಿಸಿದೆ. ನಾವು ನಮ್ಮ ನ್ಯಾಯಾಲಯಗಳಲ್ಲಿ ಒಗ್ಗೂಡಿ ಪ್ರತಿಭಟನೆ ನಡೆಸುತ್ತೇವೆ. ನಾವು ಅರವಿಂದ್ ಕೇಜ್ರಿವಾಲ್ ಅವರಿಗೆ ಬೆಂಬಲವಾಗಿ ನಿಲ್ಲುತ್ತೇವೆ" ಎಂದು ಹೇಳಿದ್ದರು.

ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ, ದ್ವಾರಕಾ ನ್ಯಾಯಾಲಯ, ಸಾಕೇತ್ ನ್ಯಾಯಾಲಯ, ಕಡ್‌ಕಡ್‌ಡೂಮ ನ್ಯಾಯಾಲಯ, ತಿಸ್ ಹಜಾರಿ ನ್ಯಾಯಾಲಯ ಹಾಗೂ ರೌಸ್ ಅವೆನ್ಯೂ ನ್ಯಾಯಾಲಯದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಇಡಿ ಬಂಧಿಸಿದ್ದು ಅವರು ಪ್ರಸ್ತುತ ಇ ಡಿ ವಶದಲ್ಲಿದ್ದಾರೆ.

ಮತ್ತೊಂದೆಡೆ ಜಾರಿ ನಿರ್ದೇಶನಾಲಯ (ಇ ಡಿ) ತನ್ನನ್ನು ಬಂಧಿಸಿರುವುದನ್ನು ಮತ್ತು ವಿಚಾರಣಾ ನ್ಯಾಯಾಲಯ ಇ ಡಿ ವಶಕ್ಕೆ ನೀಡಿರುವುದನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿರುವ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಇಂದು ವಿಚಾರಣೆ ನಡೆಸಲಿದೆ.

Kannada Bar & Bench
kannada.barandbench.com