ಕೇಜ್ರಿವಾಲ್‌ ಮನವಿಗೆ ಇ ಡಿ ಆಕ್ಷೇಪ: ಅವರೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ, ನಿಮ್ಮ ಕಸ್ಟಡಿಯಲ್ಲಿ ಅಲ್ಲ ಎಂದ ನ್ಯಾಯಾಲಯ

ವೈದ್ಯಕೀಯ ಕಾರಣ ನೀಡಿ ಕೇಜ್ರಿವಾಲ್‌ ಕೋರಿದ್ದ ಮಧ್ಯಂತರ ಜಾಮೀನನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಕೇಜ್ರಿವಾಲ್‌ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದುದು ಅವರಿಗೆ ಯಾವುದೇ ಗಂಭೀರ ಸಮಸ್ಯೆ ಇಲ್ಲದಿರುವುದನ್ನು ತಿಳಿಸುತ್ತದೆ ಎಂದಿತ್ತು.
Arvind Kejriwal
Arvind Kejriwal Facebook

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರು ತಿಹಾರ್ ಜೈಲಿನಲ್ಲಿ ತಮ್ಮ ವೈದ್ಯಕೀಯ ತಪಾಸಣೆಗೆ ಸಂಬಂಧಿಸಿದಂತೆ ಮಾಡಿರುವ ಕೋರಿಕೆಗಳನ್ನು ವಿರೋಧಿಸಲು ಸಾಧ್ಯವಿಲ್ಲ ಎಂದು ದೆಹಲಿ ನ್ಯಾಯಾಲಯವು ಶುಕ್ರವಾರ ಜಾರಿ ನಿರ್ದೇಶನಾಲಯಕ್ಕೆ (ಇ ಡಿ) ತಿಳಿಸಿದೆ.

ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ತಮ್ಮ ಪತ್ನಿ ವೈದ್ಯಕೀಯ ತಪಾಸಣೆಗೆ ಹಾಜರಾಗಲು ಅವಕಾಶ ನೀಡುವಂತೆ ಕೇಜ್ರಿವಾಲ್‌ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ತಿಹಾರ್‌ ಜೈಲಿನ ಜೈಲು ಅಧೀಕ್ಷಕರಿಗೆ ರಜಾಕಾಲದ ನ್ಯಾಯಾಧೀಶ ಮುಕೇಶ್‌ ಕುಮಾರ್‌ ಸೂಚಿಸಿದರು. ತನ್ನ ಆರೋಗ್ಯ ಸ್ಥಿತಿಯ ಕುರಿತು ವೈದ್ಯಕೀಯ ಮಂಡಳಿಗೆ ಮಾಹಿತಿ ನೀಡಲು ಅವಕಾಶ ನೀಡುವಂತೆ ಕೇಜ್ರಿವಾಲ್‌ ಇದೇ ವೇಳೆ ಪ್ರಾರ್ಥಿಸಿದ್ದಾರೆ.

ಇ ಡಿ ವಕೀಲ ಜೊಹೆಬ್ ಹೊಸೈನ್ ಅವರು ಸಿಎಂ ಅರ್ಜಿಗೆ ಪ್ರತಿಕ್ರಿಯಿಸಲು ಸಂಸ್ಥೆಗೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿದಾಗ, ನ್ಯಾಯಾಲಯವು, "ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾರೆ, ಇ ಡಿ (ಕಸ್ಟಡಿ) ಅಲ್ಲ. ಅವರು ಯಾವುದೇ ಪರಿಹಾರವನ್ನು ಬಯಸಿದರೆ, ಇದರಲ್ಲಿ ನಿಮ್ಮ ಪಾತ್ರವೇನೂ ಇಲ್ಲ" ಎಂದಿತು.

ಕೇಜ್ರಿವಾಲ್ ಅವರ ಪತ್ನಿಗೆ ವಿಸಿ ಪ್ರವೇಶವನ್ನು ಒದಗಿಸುವಲ್ಲಿ ಯಾವುದಾದರೂ ಸಮಸ್ಯೆಗಳಿದ್ದರೆ ಈ ಬಗ್ಗೆ ಜೈಲು ಅಧಿಕಾರಿಗಳಿಗೆ ತಿಳಿಸಲು ನ್ಯಾಯಾಲಯವು ಜೈಲಿನಿಂದ ವರದಿಯನ್ನು ಕೇಳಬೇಕು ಎಂದು ಹೊಸೈನ್ ಒತ್ತಾಯಿಸಿದರು. ಇದಕ್ಕೆ ನ್ಯಾಯಾಲಯವು ಕೇಜ್ರಿವಾಲ್‌ ಅವರ ವೈದ್ಯಕೀಯ ತಪಾಸಣೆಗೆ ಸಂಬಂಧಿಸಿದ ವಿನಂತಿಗಳಿಗೆ ಸಂಬಂಧಿಸಿದಂತೆ ಇ ಡಿ ಯಾವುದೇ ಪಾತ್ರವನ್ನು ಹೊಂದಿಲ್ಲ ಎಂದು ಮತ್ತೆ ಪುನರುಚ್ಚರಿಸಿತು. "ನಾವು ಜೈಲಿನಿಂದ ಉತ್ತರವನ್ನು ತರಿಸಿಕೊಳ್ಳುತ್ತೇವೆ, ಆದರೆ ಇದರಲ್ಲಿ ನಿಮ್ಮ ಪಾತ್ರವೇನೂ ಇಲ್ಲ," ಎಂದು ಕೋರ್ಟ್ ಕುಟುಕಿತು.

ಜೈಲಿನಲ್ಲಿ ಕೇಜ್ರಿವಾಲ್ ಸೇವಿಸುತ್ತಿರುವ ಆಹಾರದ ಬಗ್ಗೆ ಈ ಹಿಂದೆ ಕೆಲವು ಆತಂಕಗಳಿದ್ದವು. ವೈದ್ಯಕೀಯ ಮಂಡಳಿಯನ್ನು ರಚಿಸಬೇಕಾಯಿತು ಎಂದು ಇ ಡಿ ವಕೀಲರು ಪ್ರತಿಕ್ರಿಯಿಸಿದರು. "ಇಲ್ಲಿಯವರೆಗೆ ಈ ವಿನಂತಿಯನ್ನು ಅವರು ಮಾಡಿಲ್ಲ. ಆದ್ದರಿಂದ, ಸಣ್ಣ ಉತ್ತರವನ್ನು ಸಲ್ಲಿಸಲು ನಮಗೆ ಅವಕಾಶ ನೀಡಿದರೆ ಸ್ವರ್ಗವು ಕುಸಿಯುವುದಿಲ್ಲ. ಸೆಕ್ಷನ್ 45 PMLA ಯ ನಿಬಂಧನೆಯಿಂದಾಗಿ ನಾವು ಇದರಲ್ಲಿ ಪ್ರಮುಖ ಆಸಕ್ತಿ ಹೊಂದಿರುವ ಪಕ್ಷವಾಗಿದ್ದೇವೆ" ಎಂದು ಹೊಸೈನ್ ಮನವಿ ಮಾಡಿದರು.

ಕೇಜ್ರಿವಾಲ್ ಅವರ ಅರ್ಜಿಯ ಕುರಿತು ನ್ಯಾಯಾಲಯವು ಜೈಲು ಅಧಿಕಾರಿಗಳಿಂದ ವರದಿಯನ್ನು ಕೇಳಲು ಮುಂದಾಯಿತು, ಶನಿವಾರ ಮತ್ತೆ ವಿಚಾರಣೆ ನಡೆಯಲಿದೆ.

ನಿರ್ಧಿಷ್ಟ ಕೆಲ ಮದ್ಯ ಮಾರಾಟಗಾರರಿಗೆ ಅನುಕೂಲವಾಗುವಂತೆ ದೆಹಲಿ ಅಬಕಾರಿ ನೀತಿಯನ್ನು ರೂಪಿಸಿದ್ದ ಸಂಚಿನ ಭಾಗವಾಗಿದ್ದ ಆರೋಪದ ಮೇಲೆ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಇ ಡಿ ಬಂಧಿಸಿತ್ತು. ಮುಂದೆ, ಸುಪ್ರೀಂ ಕೋರ್ಟ್ ಲೋಕಸಭಾ ಚುನಾವಣೆ ವೇಳೆ ಪ್ರಚಾರ ಕೈಗೊಳ್ಳಲು ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ಜೂನ್‌ 2ಕ್ಕೆ ಇದರ ಅವಧಿ ಮುಗಿದಿತ್ತು. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್‌ ಅವರು ವೈದ್ಯಕೀಯ ಕಾರಣ ನೀಡಿ ಏಳು ದಿನಗಳ ಕಾಲ ಮಧ್ಯಂತರ ಜಾಮೀನು ಕೋರಿ ಅರ್ಜಿಯನ್ನೂ ಸಲ್ಲಿಸಿದ್ದರು. ಆದರೆ, ಜೂನ್ 5ರಂದು ವಿಚಾರಣಾ ನ್ಯಾಯಾಲಯ ಇದನ್ನು ತಿರಸ್ಕರಿಸಿತ್ತು.

ವೈದ್ಯಕೀಯ ಕಾರಣ ನೀಡಿ ಕೇಜ್ರಿವಾಲ್‌ ಕೋರಿದ್ದ ಮಧ್ಯಂತರ ಜಾಮೀನನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಕೇಜ್ರಿವಾಲ್‌ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದುದು ಅವರಿಗೆ ಯಾವುದೇ ಗಂಭೀರ ಸಮಸ್ಯೆ ಇಲ್ಲದಿರುವುದನ್ನು ತಿಳಿಸುತ್ತದೆ ಎಂದಿತ್ತು.

ಕೇಜ್ರಿವಾಲ್‌ ಅವರ ಸಾಮಾನ್ಯ ಜಾಮೀನು ಅರ್ಜಿ ಜೂನ್ 19 ರಂದು ವಿಚಾರಣೆಗೆ ಬರಲಿದೆ.

Kannada Bar & Bench
kannada.barandbench.com