ಮಾನಹಾನಿ ಪ್ರಕರಣ: ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ಡಿಸಿಎಂ ಮನೀಷ್‌ ಸಿಸೋಡಿಯಾ, ಯೋಗೇಂದ್ರ ಯಾದವ್‌ ಖುಲಾಸೆ

2013ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಎಎಪಿ ತಮ್ಮನ್ನು ಸಂಪರ್ಕಿಸಿತ್ತು ಎಂದು ಆರೋಪಿಸಿ ವಕೀಲರೊಬ್ಬರು ಆರೋಪಿಸಿದ್ದರು. ಆದರೆ, ಪಕ್ಷವು ಆನಂತರ ತಮ್ಮ ಉಮೇದುವಾರಿಕೆ ರದ್ದುಪಡಿಸಿತ್ತು ಎಂದು ವಾದಿಸಿದ್ದರು.
Arvind Kejriwal, Manish Sisodia and Yogender Yadav
Arvind Kejriwal, Manish Sisodia and Yogender YadavFacebook

ವಕೀಲ ಸುರೇಂದರ್‌ ಕುಮಾರ್‌ ಶರ್ಮಾ ಅವರು 2013ರಲ್ಲಿ ದಾಖಲಿಸಿದ್ದ ಕ್ರಿಮಿನಲ್‌ ಮಾನಹಾನಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಹಾಗೂ ಎಎಪಿ ಮಾಜಿ ನಾಯಕ ಯೋಗೇಂದ್ರ ಯಾದವ್‌ ಅವರನ್ನು ಶನಿವಾರ ದೆಹಲಿ ನ್ಯಾಯಾಲಯವು ಖುಲಾಸೆಗೊಳಿಸಿದೆ.

ಶರ್ಮಾ ಅವರು ಉಲ್ಲೇಖಿಸಿರುವ ಮಾಧ್ಯಮದಲ್ಲಿನ ಲೇಖನಗಳು ಮಾನಹಾನಿ ಪ್ರಕರಣ ಸಾಬೀತುಪಡಿಸುವುದಿಲ್ಲ ಎಂದು ರೋಸ್‌ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಧೀಶರಾದ ವಿಧಿ ಗುಪ್ತಾ ಅವರು ಆದೇಶ ಮಾಡಿದ್ದಾರೆ.

2013ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕೋರಿ ಎಎಪಿ ಕಾರ್ಯಕರ್ತರು ತಮ್ಮನ್ನು ಸಂಪರ್ಕಿಸಿದ್ದು, ಇದಕ್ಕೆ ಎಎಪಿ ಹಿರಿಯ ನಾಯಕರು ಒಪ್ಪಿದ್ದಾರೆ ಎಂದು ತಿಳಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ 2013ರ ವಿಧಾನಸಭಾ ಚುನಾವಣೆಯಲ್ಲಿ ಶರ್ಮಾ ಅವರ ಉಮೇದುವಾರಿಕೆಯನ್ನು ರದ್ದುಪಡಿಸಲಾಗಿತ್ತು. ಕೇಜ್ರಿವಾಲ್‌, ಸಿಸೋಡಿಯಾ ಹಾಗೂ ಯಾದವ್‌ ಅವರು ತಮ್ಮ ವಿರುದ್ಧ ಮಾಧ್ಯಮಗಳ ಮುಂದೆ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದರಿಂತ ತಮ್ಮ ಘನತೆಗೆ ಧಕ್ಕೆಯುಂಟಾಯಿತು ಎಂದು ಆರೋಪಿಸಿ ಶರ್ಮಾ ಅವರು ಈ ನಾಯಕರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದರು.

ಎಎಪಿಯ ಮೂವರು ನಾಯಕರು ತಮ್ಮ ವಿರುದ್ಧ ಮಾನಹಾನಿಕಾರಕ, ಕಾನೂನುಬಾಹಿರ ಮತ್ತು ನಿಂದನಾತ್ಮಕ ಹೇಳಿಕೆ ನೀಡಿದ್ದು, ಅವುಗಳು ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಇದು ವಕೀಲರ ಸಮುದಾಯ ಮತ್ತು ಸಮಾಜದಲ್ಲಿ ತಮ್ಮ ಘನತೆಗೆ ಚ್ಯುತಿ ತಂದಿದೆ ಎಂದು ಅವರು ವಾದಿಸಿದ್ದರು. ಪ್ರಕರಣದ ನ್ಯಾಯಾಲಯದಲ್ಲಿ ಬಾಕಿ ಇರುವಾಗಲೇ ಶರ್ಮಾ ಅವರು ಗತಿಸಿದ್ದರು. ಅವರ ನಿಧನದ ಹಿನ್ನೆಲೆಯಲ್ಲಿ ಅವರ ಸೋದರ ಸಂಬಂಧಿಯೊಬ್ಬರು ಕಾನೂನು ಹೋರಾಟ ಮುಂದುವರಿಸಿದ್ದರು.

Related Stories

No stories found.
Kannada Bar & Bench
kannada.barandbench.com