ಸಿಬಿಐ ತನಿಖೆ ನಡೆಸುತ್ತಿರುವ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾಮೀನು ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ನೇತೃತ್ವದ ಪೀಠದ ಮುಂದೆ ವಕೀಲ ರಜತ್ ಭಾರದ್ವಾಜ್ ಅರ್ಜಿ ಪ್ರಸ್ತಾಪಿಸಿದರು.
ಕೇಜ್ರಿವಾಲ್ ಅವರು ಅಕ್ರಮ ಬಂಧನದಲ್ಲಿದ್ದು ನಾಳೆ (ಗುರುವಾರ) ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ಭಾರದ್ವಾಜ್ ಹೇಳಿದರು. ಆದರೆ, ಪ್ರಕರಣವನ್ನು ಶುಕ್ರವಾರ ಕೈಗೆತ್ತಿಕೊಳ್ಳಲಾಗುವುದು ಎಂದು ಪೀಠ ನುಡಿಯಿತು.
ಜಾರಿ ನಿರ್ದೇಶನಾಲಯ (ಇ ಡಿ) ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಕೇಜ್ರಿವಾಲ್ ಅವರನ್ನು ಜೂನ್ 26 ರಂದು ಸಿಬಿಐ ಬಂಧಿಸಿತ್ತು.
ಇ ಡಿ ಪ್ರಕರಣದಲ್ಲಿ ಜೂನ್ 20 ರಂದು ವಿಚಾರಣಾ ನ್ಯಾಯಾಲಯ ನೀಡಿದ್ದ ಜಾಮೀನನ್ನು ಬಳಿಕ ದೆಹಲಿ ಹೈಕೋರ್ಟ್ ತಡೆ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಜೂನ್ 26ರಂದು ಸಿಬಿಐ ಅವರನ್ನು ಬಂಧಿಸಿ, ಜೂನ್ 29 ರವರೆಗೆ ತನ್ನ ವಶಕ್ಕೆ ಪಡೆದುಕೊಂಡಿತ್ತು.
ಜೂನ್ 29 ರಂದು ಸಿಬಿಐ ಕಸ್ಟಡಿ ಅವಧಿ ವಿಸ್ತರಿಸದಂತೆ ಕೋರದ ಹಿನ್ನೆಲೆಯಲ್ಲಿ ಜುಲೈ 12ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು.
ಕುತೂಹಲಕಾರಿ ಅಂಶವೆಂದರೆ, ಕೇಜ್ರಿವಾಲ್ ನೇರವಾಗಿ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 439 ರ ಅಡಿಯಲ್ಲಿ ಜಾಮೀನಿಗಾಗಿ ನೇರವಾಗಿ ಹೈಕೋರ್ಟ್‌ಗೆ ಮನವಿ ಸಲ್ಲಿಸಲು ಯಾವುದೇ ಅಡ್ಡಿ ಇಲ್ಲ ಎಂದು ವಕೀಲರು ಹೇಳಿದ್ದಾರೆ.
ಸಿಬಿಐ ತನ್ನನ್ನು ಬಂಧಿಸಿರುವುದನ್ನು ಬಳಿಕ ವಿಚಾರಣಾ ನ್ಯಾಯಾಲಯ ಸಿಬಿಐ ವಶಕ್ಕೆ ತನ್ನನ್ನು ನೀಡಿದ್ದನ್ನು ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ಬಾಕಿ ಇದೆ.