ವಿವಾದಿತ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮಗೆ ನೀಡಲಾಗಿದ್ದ ಜಾಮೀನಿಗೆ ಮಧ್ಯಂತರ ತಡೆಯಾಜ್ಞೆ ನೀಡಿರುವ ದೆಹಲಿ ಹೈಕೋರ್ಟ್ ತೀರ್ಪಿನ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ .
ಪ್ರಕರಣದ ತುರ್ತು ವಿಚಾರಣೆ ನಡೆಸುವಂತೆ ಸೋಮವಾರ ಕೋರುವುದಾಗಿ ಕೇಜ್ರಿವಾಲ್ ಪರ ವಕೀಲರು ಬಾರ್ & ಬೆಂಚ್‌ಗೆ ತಿಳಿಸಿದ್ದಾರೆ
ಕೇಜ್ರಿವಾಲ್‌ಗೆ ಜಾಮೀನು ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ಶುಕ್ರವಾರ ಹೈಕೋರ್ಟ್ ನ್ಯಾಯಮೂರ್ತಿ ಸುಧೀರ್‌ಕುಮಾರ್ ಜೈನ್ ಮಧ್ಯಂತರ ತಡೆ ನೀಡಿದ್ದರು.
ಇದಕ್ಕೂ ಮುನ್ನ ವಿಚಾರಣಾ ನ್ಯಾಯಾಲಯ ಗುರುವಾರ ಕೇಜ್ರಿವಾಲ್‌ಗೆ ಜಾಮಿನು ನೀಡಿತ್ತು. ಕೇಜ್ರಿವಾಲ್ ಅವರ ಅಪರಾಧದ ಬಗ್ಗೆ ನೇರ ಸಾಕ್ಷ್ಯ ನೀಡಲು ಇ ಡಿ ವಿಫಲವಾಗಿದ್ದು ಇನ್ನೊಬ್ಬ ಆರೋಪಿ ವಿಜಯ್ ನಾಯರ್ ಕೇಜ್ರಿವಾಲ್ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅದು ಸಾಬೀತುಪಡಿಸಿಲ್ಲ ಎಂಬುದಾಗಿ ವಿಚಾರಣಾ ನ್ಯಾಯಾಲಯವಾದ ರೌಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ನಿಯಾಯ್ ಬಿಂದು ತಿಳಿಸಿದ್ದರು. ಇ ಡಿ ಕೇಜ್ರಿವಾಲ್ ಅವರ ವಿರುದ್ಧ ಪಕ್ಷಪಾತದಿಂದ ವರ್ತಿಸುತ್ತಿದೆ ಎಂದು ಅವರು ಹೇಳಿದ್ದರು.
ಜಾಮೀನು ಪ್ರಶ್ನಿಸಿ ಇ ಡಿ ತಕ್ಷಣವೇ ದೆಹಲಿ ಹೈಕೋರ್ಟ್ ಮೊರೆ ಹೋಗಿತ್ತು. ಪ್ರಕರಣದ ತುರ್ತು ವಿಚಾರಣೆ ನಡೆದು ಜಾಮಿನು ಆದೇಶಕ್ಕೆ ಜಾರಿಗೆ ಎರಡು ದಿನಗಳ ಕಾಲ ಮಧ್ಯಂತರ ತಡೆ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಕೇಜ್ರಿವಾಲ್ ಅವರು ಪ್ರಸ್ತುತ ಮೇಲ್ಮನವಿ ಸಲ್ಲಿಸಿದ್ದಾರೆ.
ಕೆಲ ಮದ್ಯ ಮಾರಾಟಗಾರರಿಗೆ ನೆರವಾಗುವ ಉದ್ದೇಶದಿಂದ ಈಗ ರದ್ದಾಗಿರುವ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಕೇಜ್ರಿವಾಲ್ ಪಿತೂರಿ ನಡೆಸಿದ್ದರು ಎಂಬ ಕಾರಣ ನೀಡಿ ಮಾರ್ಚ್ 21ರಂದು ಜಾರಿ ನಿರ್ದೇಶನಾಲಯಅವರನ್ನು ಬಂಧಿಸಿತ್ತು.