ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾದರೆ, ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶಪಡಿಸುವ, ಸಾಕ್ಷಿಗಳನ್ನು ಬೆದರಿಸುವ ಹಾಗೂ ಅವರ ವಿರುದ್ಧ ನಡೆಯುತ್ತಿರುವ ತನಿಖೆಗೆ ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಕೇಂದ್ರೀಯ ತನಿಖಾ ಸಂಸ್ಥೆ ತನ್ನ ಬಂಧಿಸಿರುವುದನ್ನು ರದ್ದುಗೊಳಿಸುವಂತೆ ಮತ್ತು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಕೋರಿ ಕೇಜ್ರಿವಾಲ್ ಅವರು ಸಲ್ಲಿಸಿರುವ ಮನವಿಗೆ ಪ್ರತಿಕ್ರಿಯೆಯಾಗಿ ಸಿಬಿಐ ಅಫಿಡವಿಟ್‌ನಲ್ಲಿ ಇದೇ ರೀತಿ ಹೇಳಿದೆ.
ಅರ್ಜಿದಾರರು ಪ್ರಮುಖ ರಾಜಕಾರಣಿ ಮತ್ತು ದೆಹಲಿಯ ಮುಖ್ಯಮಂತ್ರಿಯಾಗಿರುವುದರಿಂದ ಬಹಳ ಪ್ರಭಾವಶಾಲಿಯಾಗಿದ್ದಾರೆ. ಅವರ ಕಸ್ಟಡಿ ವಿಚಾರಣೆಯ ಸಮಯದಲ್ಲಿ ಈಗಾಗಲೇ ಅವರಿಗೆ ಬಹಿರಂಗಪಡಿಸಲಾದ ಅವರ ವಿರುದ್ಧದ ಸಾಕ್ಷಿಗಳು ಮತ್ತು ಸಂಭಾವ್ಯ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಅಲ್ಲದೆ ಸಾಕ್ಷ್ಯವನ್ನು ಮತ್ತಷ್ಟು ಹಾಳುಮಾಡುವ ಸಾಧ್ಯತೆಯಿದೆ. ಆ ಮೂಲಕ ತನಿಖೆಗೆ ಅಡ್ಡಿಯಾಗಬಹುದು ಎಂದು ಸಿಬಿಐ ಕೇಜ್ರಿವಾಲ್ ಅವರ ಜಾಮೀನು ವಿರೋದಿಸಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದೆ.
ಮುಂದುವರೆದು, ಅರ್ಜಿದಾರರು ಈ ಗೌರವಾನ್ವಿತ ನ್ಯಾಯಾಲಯದ ಮುಂದೆ ಇರುವ ಪ್ರಕರಣವನ್ನು ರಾಜಕೀಯವಾಗಿ ಪ್ರಚೋದನಕಾರಿಯಾಗಿಸಲು ಪ್ರಯತ್ನಿಸುತ್ತಿದ್ದಾರೆ. ಮೇಲುನೋಟಕ್ಕೆ ಅಪರಾಧ ಘಟಿಸಿರುವ ಬಗ್ಗೆ ವಿವಿಧ ನ್ಯಾಯಾಲಯಗಳು ನೀಡಿರುವ ಪುನರಾವರ್ತಿತ ಆದೇಶಗಳ ಹೊರತಾಗಿಯೂ ಅರ್ಜಿದಾರರು ಈ ಪ್ರಯತ್ನ ಮುಂದುವರೆಸಿದ್ದಾರೆ. ಈ ಅಪರಾಧಗಳ ಕುರಿತು ಇದಾಗಲೇ ಸಂಜ್ಞೇಯ ತೆಗೆದುಕೊಳ್ಳಲಾಗಿದೆ. ಇಂತಹ ಅನಪೇಕ್ಷಿತ ಹೇಳಿಕೆಗಳನ್ನು ತಿರಸ್ಕರಿಸಬೇಕು ಎಂದು ಸಿಬಿಐ ತನ್ನ ಅಫಿಡವಿಟ್‌ನಲ್ಲಿ ಹೇಳಿದೆ.
ಸಿಬಿಐ ಅಫಿಡವಿಟ್‌ಗೆ ಪ್ರತಿ ಅಫಿಡವಿಟ್ ಸಲ್ಲಿಸಲು ಕಾಲಾವಕಾಶ ಕಲ್ಪಿಸಿದ ನ್ಯಾ. ಸೂರ್ಯ ಕಾಂತ್ ಹಾಗೂ ನ್ಯಾ. ಉಜ್ಜಲ್ ಭುಯಾನ್ ಅವರಿದ್ದ ಪೀಠ ಪ್ರಕರಣದ ವಿಚಾರಣೆಯನ್ನು ಸೆ.5 ಕ್ಕೆ ಮುಂದೂಡಿತು.
ಸಿಬಿಐ ಬಂಧಿಸಿರುವುದನ್ನು ರದ್ದಪಡಿಸಿ ಜಾಮೀನು ನೀಡಲು ಕೋರಿದ್ದ ಕೇಜ್ರಿವಾಲ್ ಅವರ ಅರ್ಜಿಯನ್ನು ದೆಹಲಿ ಹೈಕೋರ್ಟ್. ಆ.5ರಂದು ರದ್ದಪಡಿಸಿತ್ತು. ಅಲ್ಲದೆ, ಈ ಸಂಬಂಧ ವಿಚಾರಣಾ ನ್ಯಾಯಾಲಯದ ಮೆಟ್ಟಿಲೇರುವಂತೆ ಸೂಚಿಸಿತ್ತು. ಹೈಕೋರ್ಟ್‌ನ ಈ ಆದೇಶದ ವಿರುದ್ಧ ಕೇಜ್ರಿವಾಲ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ಸಂಬಂಧ ಸುಪ್ರೀಂ ಕೋರ್ಟ್ ಆ. 14ರಂದು ಸಿಬಿಐ ಪ್ರತಿಕ್ರಿಯೆ ಕೇಳಿತ್ತು. ಆದರೆ, ಈ ಹಂತದಲ್ಲಿ ಮಧ್ಯಂತರ ಜಾಮೀನು ನೀಡಲಾಗದು ಎಂದಿತ್ತು.