ಇ ಡಿ ಪ್ರಕರಣ: ಜಾಮೀನಿಗೆ ನೀಡಿದ್ದ ಅಂತಿಮ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಿರುವ ಕೇಜ್ರಿವಾಲ್

ನಿನ್ನೆಯಷ್ಟೇ ಹೈಕೋರ್ಟ್ ಅಂತಿಮ ತಡೆಯಾಜ್ಞೆ ನೀಡಿದ್ದು ತಾವು ಅದನ್ನು ಪ್ರಶ್ನಿಸಲು ಬಯಸುವುದಾಗಿ ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಹೇಳಿದರು.
ಇ ಡಿ ಪ್ರಕರಣ: ಜಾಮೀನಿಗೆ ನೀಡಿದ್ದ ಅಂತಿಮ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಿರುವ ಕೇಜ್ರಿವಾಲ್

ದೆಹಲಿಯ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ನೀಡಿದ್ದ ಜಾಮೀನಿಗೆ ದೆಹಲಿ ಹೈಕೋರ್ಟ್ ವಿಧಿಸಿದ್ದ ಮಧ್ಯಂತರ ತಡೆಯಾಜ್ಞೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ತಾನು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ಹಿಂಪಡೆದಿದ್ದಾರೆ. 

ನಿನ್ನೆಯಷ್ಟೇ ಹೈಕೋರ್ಟ್ ಅಂತಿಮ ತಡೆಯಾಜ್ಞೆ ನೀಡಿದ್ದು ತಾವು ಅದನ್ನು ಪ್ರಶ್ನಿಸಲು ಬಯಸುವುದಾಗಿ  ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಹೇಳಿದರು. 

Also Read
ಅಬಕಾರಿ ನೀತಿ ಪ್ರಕರಣ: ಅರವಿಂದ್ ಕೇಜ್ರಿವಾಲ್ ಜಾಮೀನಿಗೆ ದೆಹಲಿ ಹೈಕೋರ್ಟ್ ತಡೆ

ಮನವಿ ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಎಸ್‌ವಿಎನ್ ಭಟ್ಟಿ ಅವರಿದ್ದ ಪೀಠ ಹೊಸ ಅರ್ಜಿ ಸಲ್ಲಿಸಲು ಅನುಮತಿ ನೀಡಿತು.

ಈಗ ಸುಪ್ರೀಂ ಕೋರ್ಟ್‌ನಿಂದ ಹಿಂಪಡೆಯಲಾಗಿರುವ ಅರ್ಜಿ ಜೂನ್ 21ರಂದು ಹೈಕೋರ್ಟ್ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನಷ್ಟೇ ಪ್ರಶ್ನಿಸಿತ್ತು. ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ದೆಹಲಿ ಹೈಕೋರ್ಟ್ ನಿನ್ನೆ (ಮಂಗಳವಾರ) ಅಂತಿಮ ತಡೆಯಾಜ್ಞೆ ನೀಡಿತ್ತು. ಇ ಡಿ ನೀಡಿದ ಸಾಕ್ಷ್ಯಗಳ ಕುರಿತಂತೆ ವಿಚಾರಣಾ ನ್ಯಾಯಾಲಯ ತನ್ನ ವಿವೇಚನೆ ಬಳಸಿಲ್ಲ.  ಪ್ರಕರಣ ವಾದಿಸಲು ಇ ಡಿಗೆ ಸೂಕ್ತ ಅವಕಾಶ ನೀಡಿಲ್ಲ ಎಂದು ನ್ಯಾ. ಸುಧೀರ್ ಕುಮಾರ್ ಜೈನ್ ಹೇಳಿದ್ದರು. 

ಕೇಜ್ರಿವಾಲ್‌ಗೆ ಜಾಮೀನು ಮಂಜೂರು ಮಾಡಿ ಜೂನ್ 20ರಂದು ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವಂತೆ ಇ ಡಿ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಈ ಆದೇಶ ನೀಡಿತ್ತು.

ಕೇಜ್ರಿವಾಲ್‌ ಮತ್ತೆ ಬಂಧನ:

ಮತ್ತೊಂದೆಡೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಇಂದು (ಬುಧವಾರ) ಸಿಬಿಐ ಬಂಧಿಸಿದೆ. ಪ್ರಕರಣದ ಈ ಹಂತದಲ್ಲಿ ಸಿಬಿಐ ತನಿಖೆಯಲ್ಲಿ ಮಧ್ಯಪ್ರವೇಶಿಸಲು ದೆಹಲಿಯ ರೌಸ್ ಅವೆನ್ಯೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಮಿತಾಭ್ ರಾವತ್ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಯಿತು. ವಿವರವಾದ ವರದಿಗಾಗಿ ನಿರೀಕ್ಷಿಸಿ.

Kannada Bar & Bench
kannada.barandbench.com