ಜಾರಿ ನಿರ್ದೇಶನಾಲಯದ ಬಂಧನ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಮನವಿ ಹಿಂಪಡೆದ ಕೇಜ್ರಿವಾಲ್

ಕೇಜ್ರಿವಾಲ್ ಅವರನ್ನು ದೆಹಲಿಯ ರೌಸ್‌ ಅವೆನ್ಯೂ ನ್ಯಾಯಾಲಯಕ್ಕೆ ಇಡಿ ಹಾಜರುಪಡಿಸಿದಾಗ ಅವರ ರಿಮಾಂಡ್‌ಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಮುಂದೆ ಪ್ರಕರಣ ವಾದಿಸುವುದಾಗಿ ಕೇಜ್ರಿವಾಲ್ ಪರ ವಕೀಲ ಸಿಂಘ್ವಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.
ಅರವಿಂದ್ ಕೇಜ್ರಿವಾಲ್, ಸುಪ್ರೀಂ ಕೋರ್ಟ್ ಮತ್ತು ಇಡಿ
ಅರವಿಂದ್ ಕೇಜ್ರಿವಾಲ್, ಸುಪ್ರೀಂ ಕೋರ್ಟ್ ಮತ್ತು ಇಡಿ
Published on

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ (ಅರವಿಂದ್ ಕೇಜ್ರಿವಾಲ್ ವರ್ಸಸ್ ಜಾರಿ ನಿರ್ದೇಶನಾಲಯ) ಜಾರಿ ನಿರ್ದೇಶನಾಲಯ (ಇಡಿ) ತನ್ನ ಬಂಧನದ ವಿರುದ್ಧ ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲು ದೆಹಲಿ ಮುಖ್ಯಮಂತ್ರಿ (ಸಿಎಂ) ಅರವಿಂದ್ ಕೇಜ್ರಿವಾಲ್ ನಿರ್ಧರಿಸಿದ್ದಾರೆ.

ಕೇಜ್ರಿವಾಲ್ ಅವರನ್ನು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯಕ್ಕೆ ಇಡಿ ಹಾಜರುಪಡಿಸಿದಾಗ ಅವರ ರಿಮಾಂಡ್‌ಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಮುಂದೆ ಪ್ರಕರಣವನ್ನು ವಾದಿಸುವುದಾಗಿ ಕೇಜ್ರಿವಾಲ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

"ರಿಮಾಂಡ್‌ ಪ್ರಕ್ರಿಯೆಯೊಂದಿಗೆ ಸಂಘರ್ಷವಾಗುತ್ತಿರುವುದರಿಂದ ನಾವು ಇಲ್ಲಿ ಅರ್ಜಿಯನ್ನು ಹಿಂತೆಗೆದುಕೊಳ್ಳುತ್ತಿದ್ದೇವೆ. ನಾವು ರಿಮಾಂಡ್ ವಿಚಾರವಾಗಿ ನಾವು (ವಿಚಾರಣಾ ನ್ಯಾಯಾಲಯದಲ್ಲಿ) ವಾದಿಸುತ್ತೇವೆ. ಆನಂತರ ಇಲ್ಲಿಗೆ ಬರುತ್ತೇವೆ. ಮನವಿ ಹಿಂಪಡೆಯುವ ಬಗ್ಗೆ ನಾನು ರಿಜಿಸ್ಟ್ರಿಗೆ (ಸುಪ್ರೀಂ ಕೋರ್ಟ್‌) ಪತ್ರವನ್ನು ನೀಡುತ್ತೇನೆ" ಎಂದು ಸಿಂಘ್ವಿ ಹೇಳಿದರು.

ನ್ಯಾಯಾಲಯವು ಕೇಜ್ರಿವಾಲ್‌ ಮನವಿಗೆ ಅನುಮತಿಸಿತು. ಗುರುವಾರ ರಾತ್ರಿ ಜಾರಿ ನಿರ್ದೇಶನಾಲಯ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಕೇಜ್ರಿವಾಲ್ ರಿಟ್ ಅರ್ಜಿಯ ಮೂಲಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಕೇಜ್ರಿವಾಲ್ ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಲು ದೆಹಲಿ ಹೈಕೋರ್ಟ್ ಈ ಹಿಂದೆ ನಿರಾಕರಿಸಿತ್ತು. 

ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಮನೋಜ್ ಜೈನ್ ಅವರ ವಿಭಾಗೀಯ ಪೀಠವು ಈ ಹಂತದಲ್ಲಿ ಅಂತಹ ಯಾವುದೇ ರಕ್ಷಣೆ ನೀಡಲು ಒಲವು ಹೊಂದಿಲ್ಲ ಎಂದು ಹೇಳಿತ್ತು .

ತರುವಾಯ, ಅವರ ನಿವಾಸದಲ್ಲಿ ತಡರಾತ್ರಿ ಶೋಧ ನಡೆಸಿದ ನಂತರ ಅವರನ್ನು ಇಡಿ ಗುರುವಾರ ಬಂಧಿಸಿತ್ತು. ನಂತರ ಕೇಜ್ರಿವಾಲ್‌ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ಪ್ರಕರಣದ ಕುರಿತು ಶುಕ್ರವಾರ ಬೆಳಿಗ್ಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಮುಂದೆ ಉಲ್ಲೇಖಿಸಲಾಯಿತು. ಈ ವೇಳೆ ಸಿಜೆಐ, ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ವಿಶೇಷ ಪೀಠವು ನ್ಯಾಯಾಲಯದ ಕೊಠಡಿ 2 ರಲ್ಲಿ ಪ್ರಕರಣದ ವಿಚಾರಣೆ ನಡೆಸಲಿದೆ ಎಂದು ಹೇಳಿದ್ದರು.

ನಂತರ ಸಿಂಘ್ವಿ ಅವರು ನ್ಯಾಯಾಲಯದ ಕೊಠಡಿ 2 ರ ಮುಂದೆ ಮನವಿಯನ್ನು ಉಲ್ಲೇಖಿಸಿದ್ದರು. ಈ ವೇಳೆ ತಮ್ಮನ್ನು ಒಳಗೊಂಡಂತೆ ನ್ಯಾಯಮೂರ್ತಿಗಳಾದ ಎಂಎಂ ಸುಂದರೇಶ್ ಮತ್ತು ಬೇಲಾ ತ್ರಿವೇದಿ ಅವರನ್ನೂ ಒಳಗೊಂಡ ವಿಶೇಷ ನ್ಯಾಯಪೀಠವು ನಿಗದಿತ ನ್ಯಾಯಪೀಠದ ವಿಚಾರಣೆಯ ನಂತರ ಈ ವಿಷಯವನ್ನು ಆಲಿಸಲಿದೆ ಎಂದು ನ್ಯಾಯಮೂರ್ತಿ ಖನ್ನಾ ಹೇಳಿದ್ದರು.

ತದನಂತರ, ಕೇಜ್ರಿವಾಲ್ ಅವರು ಮನವಿಯನ್ನು ಹಿಂತೆಗೆದುಕೊಳ್ಳುತ್ತಿರುವುದಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಕುತೂಹಲಕಾರಿ ಸಂಗತಿಯೆಂದರೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ರಾಷ್ಟ್ರ ಸಮಿತಿ ನಾಯಕಿ ಮತ್ತು ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಅವರಿಗೆ ಇದೇ ವಿಶೇಷ ನ್ಯಾಯಪೀಠ ಶುಕ್ರವಾರ ಬೆಳಗ್ಗೆ ಜಾಮೀನು ನಿರಾಕರಿಸಿತ್ತು.

Kannada Bar & Bench
kannada.barandbench.com