[ಆರ್ಯನ್‌‌ ಪ್ರಕರಣ] ಕೋರ್ಟ್‌ ಸಲ್ಲಿಕೆಗೂ ಮುನ್ನವೇ ವಾಟ್ಸಪ್‌ ಸಂದೇಶಗಳ ಸೋರಿಕೆ: ಬಾಂಬೆ ಹೈಕೋರ್ಟ್‌ಗೆ ಮಾಹಿತಿ

ಮತ್ತೋರ್ವ ಆರೋಪಿ ಮೂನ್‌ಮೂನ್‌ ಧಮೇಚಾರನ್ನು ಶಂಕೆಯ ಹಿನ್ನೆಲೆಯಲ್ಲಿ ಬಂಧಿಸುವುದಾದರೆ ಹಡಗಿನಲ್ಲಿದ್ದ ಎಲ್ಲ 1300 ಮಂದಿಯನ್ನೂ ಬಂಧಿಸಬೇಕು ಎಂದು ವಾದಿಸಿದ ವಕೀಲ ದೇಶ್‌ಮುಖ್
Bombay HC and Arbaaz Merchant and Aryan Khan
Bombay HC and Arbaaz Merchant and Aryan Khan

ವಿಲಾಸಿ ಹಡಗಿನ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತು ನಿಯಂತ್ರಣ ದಳವು ಉಲ್ಲೇಖಿಸಿರುವ ವಾಟ್ಸಪ್‌ ಸಂದೇಶಗಳು ನ್ಯಾಯಾಲಯಕ್ಕೆ ಸಲ್ಲಿಕೆಯಾಗುವುದಕ್ಕೂ ಮುನ್ನವೇ ಮಾಧ್ಯಮಗಳಲ್ಲಿ ಸೋರಿಕೆಯಾಗಿರುವ ಬಗ್ಗೆ ಪ್ರಕರಣದಲ್ಲಿ ಆರ್ಯನ್‌ ಖಾನ್ ಜೊತೆ ಬಂಧಿತರಾಗಿರುವ ಸಹ ಆರೋಪಿ ಅರ್ಬಾಜ್‌ ಮರ್ಚೆಂಟ್ ಪರ ವಕೀಲರು ಬಾಂಬೆ ಹೈಕೋರ್ಟ್‌ ಗಮನವನ್ನು ಬುಧವಾರ ಸೆಳೆದರು. ‌ ‌

ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್‌ ಖಾನ್‌, ಅರ್ಬಾಜ್‌ ಮರ್ಚೆಂಟ್‌, ಮೂನ್‌ಮೂನ್‌ ಧಮೇಚಾ ಅವರ ಜಾಮೀನು ಕೋರಿಕೆ ಅರ್ಜಿಗಳ ವಿಚಾರಣೆಯು ಬಾಂಬೆ ಹೈಕೋರ್ಟ್‌ನಲ್ಲಿ ಬುಧವಾರವೂ ಮುಂದುವರೆಯಿತು. ವಿಚಾರಣೆಯನ್ನು ನ್ಯಾಯಮೂರ್ತಿ ನಿತಿನ್‌ ಸಾಂಬ್ರೆ ಅವರಿದ್ದ ಏಕಸದಸ್ಯ ಪೀಠವು ನಡೆಸಿತು.

ವಿಚಾರಣೆ ವೇಳೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಅರ್ಬಾಜ್ ಮರ್ಚೆಂಟ್‌ ಪರ ವಕೀಲ ಅಮಿತ್‌ ದೇಸಾಯಿ ಅವರು, ವಾಟ್ಸಪ್‌ ಸಂದೇಶಗಳು ಎನ್‌ಸಿಬಿ ಆರೋಪಿಸಿರುವಂತೆ ಅರ್ಬಾಜ್‌ ಅವರು ಯಾವುದೇ ಸಂಚಿನಲ್ಲಿ ಭಾಗಿಯಾಗಿರುವ ಮಾಹಿತಿಯನ್ನು ನೀಡುವುದಿಲ್ಲ. ಭಾರತೀಯ ಸಾಕ್ಷ್ಯ ಕಾಯಿದೆಯಡಿ ಬೇಕಾದ ಸೆಕ್ಷನ್‌ 65ಬಿ ಪ್ರಮಾಣಪತ್ರವನ್ನು ವಾಟ್ಸಪ್‌ ಸಂದೇಶಗಳು ಹೊಂದಿಲ್ಲದ ಕಾರಣ ಇವು ಸಾಕ್ಷ್ಯವೆಂದು ಪರಿಗಣಿತವಾಗುವುದಿಲ್ಲ ಎಂದು ವಾದಿಸಿದರು.

“ಸಂಚಿನ ಸಿದ್ಧಾಂತವನ್ನು ನಿರೂಪಿಸುವಂತಹ ಯಾವುದೇ ವಾಟ್ಸಪ್‌ ಸಂದೇಶಗಳು ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ನ್ಯಾಯಾಲಯದಲ್ಲಿ ಸಲ್ಲಿಕೆಯಾಗುವುದಕ್ಕೂ ಮೊದಲೇ ವಾಟ್ಸಪ್‌ ಸಂದೇಶಗಳು ಮಾಧ್ಯಮಗಳಲ್ಲಿ ಕಾಣಿಸಿಕೊಂಡಿವೆ. ಇಂತಹ ಪ್ರಪಂಚದಲ್ಲಿ ನಾವು ಬದುಕುತ್ತಿದ್ದೇವೆ,” ಎಂದು ದೇಸಾಯಿ ವಾದ ಮಂಡನೆ ವೇಳೆ ಆಕ್ಷೇಪಿಸಿದರು.

ದೇಸಾಯಿ ವಾದ ಮಂಡನೆಯ ಪ್ರಮುಖ ಅಂಶಗಳು:

  • ವಸ್ತುವಿಷಯಗಳ ಪರಿಶೀಲನೆಯಿಂದ ಲಭ್ಯವಾಗುವ ಮಾಹಿತಿ ಏನೆಂದರೆ ಇವರೆಲ್ಲರೂ (ಅರ್ಬಾಜ್‌, ಅರ್ಯನ್) ಮಾದಕವಸ್ತು ಸೇವನೆಗೆಂದು ಬಂದಿದ್ದರು. ಅರೆಸ್ಟ್ ಮೆಮೋದಲ್ಲಿಯೂ ಸಹ ಇದಕ್ಕೆ ಸಂಬಂಧಿಸಿದ ಸೆಕ್ಷನ್‌ಗಳನ್ನು ಉಲ್ಲೇಖಿಸಲಾಗಿದೆ. ಸೆಕ್ಷನ್‌ 27 ಮತ್ತು 20 ಬಿ. ಸಂಚಿಗೆ ಸಂಬಂಧಿಸಿದ ಸೆಕ್ಷನ್‌ 29ರ ಉಲ್ಲೇಖವನ್ನು ಆನಂತರವಷ್ಟೇ ಮಾಡಲಾಗಿದೆ.‌

  • ಇವರನ್ನು ಬಂಧಿಸಿದ ವ್ಯಕ್ತಿಯು ಇವರನ್ನು ಪ್ರತ್ಯೇಕ ವ್ಯಕ್ತಿಗಳೆಂದೇ ಬಗೆದು ಅವರು ಪ್ರತ್ಯೇಕವಾಗಿಯೇ ಮಾದಕವಸ್ತು ಸೇವನೆಗೆಂದು ಹೋಗುತ್ತಿರುವುದಾಗಿ ದಾಖಲಿಸಿದ್ದಾರೆಯೇ ಹೊರತು ಸಂಚು ನಡೆಸಿದ್ದಾರೆ ಎನ್ನುವುದನ್ನಲ್ಲ ಎನ್ನುವುದನ್ನು ನ್ಯಾಯಾಲಯದ ಗಮನಕ್ಕೆ ತಂದ ದೇಸಾಯಿ.

  • ಮಾದಕವಸ್ತು ನಿಯಂತ್ರಣ ಕಾಯಿದೆಯ ಸೆಕ್ಷನ್‌ 41ಎ ಅನುಸಾರ ಬಂಧನದ ಅವಶ್ಯಕತೆ ಇರುವುದಿಲ್ಲ. ಸಂಬಂಧ ಪಟ್ಟ ಪೊಲೀಸ್ ಅಧಿಕಾರಿಯು ಆರೋಪಿಗೆ ತನಿಖೆಗೆ ಹಾಜರಾಗಲು ನೋಟಿಸ್ ನೀಡಬಹುದು. ಅವಶ್ಯಕತೆ ಬೀಳದ ಹೊರತು ಆರೋಪಿಯನ್ನು ವಶಕ್ಕೆ ಪಡೆಯುವ ಅಗತ್ಯವಿಲ್ಲ.

  • ಇಲ್ಲಿ ಯಾವುದೇ ಸಂಚು ಇಲ್ಲ ಎಂದ ಮೇಲೆ ಶಿಕ್ಷೆಯ ಪ್ರಮಾಣ ಒಂದು ವರ್ಷ ಮಾತ್ರ. ಇವರನ್ನು ಬಂಧಿಸಿದ ವ್ಯಕ್ತಿಗಳೂ ಸಹ ಇವರನ್ನು ಪ್ರತ್ಯೇಕವಾಗಿಯೇ ಪರಿಗಣಿಸಿದ್ದಾರೆ. ಸಂಚಿನ ಉದ್ದೇಶವೇ ಇಲ್ಲ ಎಂದಾದ ಮೇಲೆ ಬಂಧನ ಮಾಡಿರುವುದಾದರೂ ಏಕೆ?

  • ಪೊಲೀಸ್‌ ವಶಕ್ಕೆ ಪಡೆದುಕೊಳ್ಳಲು ಸಲ್ಲಿಸಲಾದ ರಿಮ್ಯಾಂಡ್ ಅರ್ಜಿಯಲ್ಲಿ ಸಂಚಿನ ಉಲ್ಲೇಖವೇ ಇಲ್ಲ. ಆನಂತರ 8 ಮಂದಿ ಸಂಚು ನಡೆಸಿದರು ಎನ್ನಲಾಯಿತು, ತದನಂತರ 20 ಮಂದಿ ಸಂಚು ನಡೆಸಿದರು ಎನ್ನಲಾಯಿತು.

  • ಯಾವುದೇ ಸಂಚಿನ ಸಿದ್ಧಾಂತವನ್ನು ನಿರೂಪಿಸುವ ವಾಟ್ಸಪ್‌ ಚಾಟ್‌ ಲಭ್ಯವಾಗಿಲ್ಲ. ಈ ಪ್ರಕರಣದಲ್ಲಿರುವ ವಾಟ್ಸಪ್‌ ಚಾಟ್‌ಗಳು ಮೂರು ತಿಂಗಳು, ಒಂದು ತಿಂಗಳು ಹಳೆಯವು ಎಂದು ಇದೇ ಪ್ರಕರಣದಲ್ಲಿ ವಾದಿಸಲಾಗಿದೆ.

  • ಮೊಬೈಲ್ ವಶಪಡಿಸಿಕೊಂಡಿರುವುದಕ್ಕೆ ಯಾವುದೇ ಮೆಮೊ ಸಲ್ಲಿಸಲಾಗಿಲ್ಲ. ಅಧಿಕೃತತೆಯ ಮೆಮೊ ಇಂತಹ ಪ್ರಕರಣಗಳಲ್ಲಿ ಅಗತ್ಯ. ನಮ್ಮ ಬಳಿ ಈ ಉಪಕರಣ (ಮೊಬೈಲ್) ಇಲ್ಲ. ಪಂಚನಾಮೆಯೂ ಮಾಡಲಾಗಿಲ್ಲ.

  • ಜಾಮೀನು ನೀಡಿದಾಕ್ಷಣ ತನಿಖೆಯೇನೂ ನಿಲ್ಲವುದಿಲ್ಲ. ಆದರೆ, ಒಂದು ವರ್ಷ ಶಿಕ್ಷೆಯಿರುವ ಅಪರಾಧಕ್ಕೆ ಕಸ್ಟಡಿಯ ಅಗತ್ಯವೇನಿದೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿ, ರೂಪದರ್ಶಿ ಮೂನ್‌ಮೂನ್‌ ದಮೇಚಾ ಪರವಾಗಿ ಅಲಿ ಖಾಸಿಫ್‌ ಖಾನ್ ದೇಶ್‌ಮುಖ್‌ ವಾದ ಮಂಡಿಸಿದರು. ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಬ್ಬ ಆರೋಪಿ ಸೌಮ್ಯ ಸಿಂಗ್‌ಗೂ ಮೂನ್‌ಮೂನ್‌ಗೂ ಯಾವುದೇ ಸಂಬಂಧವಿಲ್ಲ. ಆಕೆ ಮಧ್ಯಪ್ರವೇಶದವಳೂ ಅಲ್ಲ. ಮೂನ್‌ಮೂನ್‌ರನ್ನು ಸಂಚಿನಲ್ಲಿ ಭಾಗಿ ಎಂದರೆ ಹಡಗಿನಲ್ಲಿದ್ದ ಎಲ್ಲ 1300 ಮಂದಿಯನ್ನೂ ಭಾಗಿ ಎನ್ನಬೇಕಾಗುತ್ತದೆ. ಮೂನ್‌ಮೂನ್ ಮೇಲೆ ವೈದ್ಯಕೀಯ ಪರೀಕ್ಷೆ ಕೈಗೊಂಡರೆ ಅವರ ವಿರುದ್ಧ ಆರೋಪವನ್ನು ದೃಢೀಕರಿಸುವ ಯಾವುದೇ ಮಾಹಿತಿಯೂ ದೊರೆಯುವುದಿಲ್ಲ ಎಂದು ಅವರು ವಾದಿಸಿದರು.

ಪ್ರಕರಣದ ವಿಚಾರಣೆಯನ್ನು ನಾಳೆ (ಗುರುವಾರ) ಮಧ್ಯಾಹ್ನ 2:30ಕ್ಕೆ ಮುಂದುವರೆಯಲಿದ್ದು, ಎನ್‌ಸಿಬಿ ವಾದ ಮಂಡಿಸಲಿದೆ.

Related Stories

No stories found.
Kannada Bar & Bench
kannada.barandbench.com