
ಕೆಲ ವರ್ಷಗಳ ಹಿಂದೆ ಮುಂಬೈನಿಂದ ಗೋವಾಕ್ಕೆ ಹೊರಟಿದ್ದ ಕಾರ್ಡೀಲಿಯಾ ವಿಲಾಸಿ ಹಡಗಿನಲ್ಲಿ ಮಾದಕ ವಸ್ತು ದೊರೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ದ್ರವ್ಯ ನಿಯಂತ್ರಣ ದಳದ ಮಾಜಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧದ ತನಿಖೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ಸಿಬಿಐ ಮಂಗಳವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ [ಸಮೀರ್ ವಾಂಖೆಡೆ ಮತ್ತು ಸಿಬಿಐ ನಡುವಣ ಪ್ರಕರಣ].
ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಆರೋಪಿಯಾಗಿರುವ ಐಷಾರಾಮಿ ಹಡಗು ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರುಖ್ ಖಾನ್ ಅವರಿಂದ ಲಂಚ ಕೇಳಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತನ್ನ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸಲು ಕೋರಿ ವಾಂಖೆಡೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸಿಬಿಐ ಈ ವಿಚಾರ ತಿಳಿಸಿತು.
ತನಿಖೆ ಪೂರ್ಣಗೊಳಿಸುವಲ್ಲಿನ ದೀರ್ಘಕಾಲದ ವಿಳಂಬದ ಬಗ್ಗೆ ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ರಾಜೇಶ್ ಪಾಟೀಲ್ ಅವರಿದ್ದ ಪೀಠ ಸಿಬಿಐಯನ್ನು ಪ್ರಶ್ನಿಸಿತು.
" ನೀವು ಎಷ್ಟು ವರ್ಷಗಳಲ್ಲಿ ತನಿಖೆ ಪೂರ್ಣಗೊಳಿಸುತ್ತೀರಿ ಎಂದು ಹೇಳಿ. 10 ವರ್ಷ, 20 ವರ್ಷ? " ಎಂದು ನ್ಯಾಯಾಲಯ ಕಿಡಿಕಾರಿತು.
ಸಿಬಿಐ ಪರ ವಾದ ಮಂಡಿಸಿದ ವಕೀಲ ಕುಲದೀಪ್ ಪಾಟೀಲ್ ಸಿಬಿಐಯಿಂದ ಈ ಕುರಿತು ಸೂಚನೆ ಪಡೆಯಲು ಸಮಯಾವಕಾಶ ಕೋರಿದರು. ಆಗ ಅದನ್ನು ತಿರಸ್ಕರಿಸಿದ ನ್ಯಾಯಾಲಯ ಎಷ್ಟು ದಿನದಲ್ಲಿ ತನಿಖೆ ಪೂರ್ಣಗೊಳ್ಳಬಹುದು ಎಂದು ದೃಢವಾಗಿ ತಿಳಿಸುವಂತೆ ಕೇಳಿತು.
ಆಗ ಮೂರು ತಿಂಗಳೊಳಗೆ ತನಿಖೆ ಮುಕ್ತಾಯಗೊಳಿಸಲಾಗುವುದು ಎಂದು ಪಾಟೀಲ್ ಹೇಳಿದರು.
ವಾಂಖೆಡೆ ಪರ ಹಾಜರಾದ ಹಿರಿಯ ವಕೀಲ ಆಬಾದ್ ಪೊಂಡಾ , ಪದೇ ಪದೇ ತನಿಖೆ ವಿಳಂಬವಾಗುತ್ತಿರುವುದಕ್ಕೆ ಆಕ್ಷೇಪಿಸಿದರು. ಪ್ರಕರಣ ಸುಮಾರು ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದು, ಪ್ರತಿ ಬಾರಿಯೂ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಲು ಹಾಜರಾಗುತ್ತಾರೆ ಎಂಬುದಾಗಿ ಸಿಬಿಐ ತಿಳಿಸಿದೆ ಎಂದು ಅವರು ದೂರಿದರು.
"ಇದು ನನ್ನ ಕಕ್ಷಿದಾರರ ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಅವರ ಬಡ್ತಿಯನ್ನು ತಡೆಹಿಡಿಯಲಾಗಿದೆ. ನ್ಯಾಯಾಲಯ ಸಮ್ಮತಿಸಿದರೆ ಪರಿಹಾರಕ್ಕಾಗಿ ನಾವು ಕೇಂದ್ರ ಆಡಳಿತ ನ್ಯಾಯಮಂಡಳಿ ಸಂಪರ್ಕಿಸುತ್ತೇವೆ " ಎಂದು ಪೊಂಡಾ ಹೇಳಿದರು.
ಸಿಬಿಐ ಮತ್ತೊಮ್ಮೆ ಅದೇ ಕಾರಣ ನೀಡಿ ವಿಚಾರಣೆ ಮುಂದೂಡಲು ಕೋರಿತು. ಆದರೆ ಇದು ಪುನರಾವರ್ತಿತ ನೆಪವಾಗಿ ಮಾರ್ಪಟ್ಟಿದೆ ಎಂದು ತಿಳಿಸಿದ ನ್ಯಾಯಾಲಯ, ನಿರ್ದಿಷ್ಟ ಗಡುವು ತಿಳಿಸುವಂತೆ ತಾಕೀತು ಮಾಡಿತು.
ಸಿಬಿಐ ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸುವುದಾಗಿ ತಿಳಿಸಿದ ನಂತರ ವಾಂಖೆಡೆ ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಈ ಹಿಂದೆ ನೀಡಿದ್ದ ಮಧ್ಯಂತರ ರಕ್ಷಣೆಯನ್ನು ಮುಂದುವರೆಸಿತು.
ಆದರೆ ಅಷ್ಟರೊಳಗೆ ನ್ಯಾಯಾಲಯದ ಅನುಮತಿಗೆ ಒಳಪಟ್ಟು ಸಿಬಿಐ ಆರೋಪಪಟ್ಟಿ ಸಲ್ಲಿಸಬಹುದು ಎಂತಲೂ ನ್ಯಾಯಾಲಯ ಸ್ಪಷ್ಟಪಡಿಸಿತು.