ಎನ್‌ಸಿಬಿ ಅಧಿಕಾರಿ ಪತ್ನಿ ಚಿತ್ರ ನಟಿ; ವೈಯಕ್ತಿಕ ದ್ವೇಷದಿಂದ ಎನ್‌ಸಿಬಿ ದಾಳಿ: ಸುಪ್ರೀಂಗೆ ಶಿವಸೇನಾ ನಾಯಕನ ಪತ್ರ

ಎನ್‌ಸಿಬಿ ಅಧಿಕಾರಿಯೊಬ್ಬರ ಪತ್ನಿ ಮರಾಠಿ ನಟಿಯಾಗಿದ್ದು ಆಕೆ ಬಾಲಿವುಡ್‌ನಲ್ಲಿ ಯಶಸ್ವಿಯಾಗದ ಕಾರಣಕ್ಕೆ ವೈಯಕ್ತಿಕ ದ್ವೇಷದಿಂದ ದಾಳಿ ನಡೆಯುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
Aryan Khan and Supreme Court
Aryan Khan and Supreme Court
Published on

ವಿಲಾಸಿ ಹಡಗು ಮಾದಕ ವಸ್ತು ಪ್ರಕರಣದಲ್ಲಿ ಪ್ರಸ್ತುತ ಜೈಲಿನಲ್ಲಿರುವ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಅವರ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಸುಪ್ರೀಂಕೋರ್ಟ್‌ ಮಧ್ಯಪ್ರವೇಶಿಸಬೇಕು ಎಂದು ಶಿವಸೇನಾ ನಾಯಕ ಕಿಶೋರ್ ತಿವಾರಿ ಅರ್ಜಿ ಸಲ್ಲಿಸಿದ್ದಾರೆ.

ಬಾಲಿವುಡ್ ನಟರು ಮತ್ತು ಸೆಲೆಬ್ರಿಟಿಗಳನ್ನು ದುರುದ್ದೇಶದಿಂದ ಗುರಿಯಾಗಿಸುತ್ತಿರುವ ಮಾದಕವಸ್ತು ನಿಗ್ರಹ ದಳದ ಅಧಿಕಾರಿಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಅರ್ಜಿ ಕೋರಿದೆ.

ಅರ್ಜಿಯ ಮುಖ್ಯಾಂಶಗಳು

  • ಎನ್‌ಡಿಪಿಎಸ್‌ ಕಾಯಿದೆಯಡಿ ರೂಪುಗೊಂಡಿರುವ ಎನ್‌ಸಿಬಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಹೀಗಾಗಿ ನ್ಯಾಯಾಲಯ ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡು ವಿಚಾರಣೆ ನಡೆಸಬೇಕು.

  • ಎನ್‌ಡಿಪಿಎಸ್‌ ಕಾಯಿದೆಯಡಿ ಆರೋಪಿಯಾಗಿರುವ ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲು ಎನ್‌ಸಿಬಿ ಯತ್ನಿಸುತ್ತಿದ್ದು ಕಾನೂನು ನಿಯಮಗಳನ್ನು ತಪ್ಪಾಗಿ ಅರ್ಥೈಸುವ ಮೂಲಕ ಬಡವರು, ಮುಗ್ಧರನ್ನು ಕಂಬಿ ಹಿಂದಕ್ಕೆ ಕಳಿಸುತ್ತಿದೆ.

  • ಸಂಬಂಧಪಟ್ಟ ಎನ್‌ಸಿಬಿ ಅಧಿಕಾರಿಯೊಬ್ಬರ ಪತ್ನಿ ಮರಾಠಿ ನಟಿಯಾಗಿದ್ದು ಆಕೆ ಬಾಲಿವುಡ್‌ನಲ್ಲಿ ಯಶಸ್ವಿಯಾಗಿಲ್ಲ. ಹೀಗಾಗಿ ಸುಶಾಂತ್‌ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಿಂದ ಆರಂಭವಾದ ಎನ್‌ಸಿಬಿ ದಾಳಿ ವೈಯಕ್ತಿಕ ದ್ವೇಷದಿಂದ ಕೂಡಿದೆ.

  • ಕಳೆದ 15-18 ತಿಂಗಳಲ್ಲಿ, ಚಿತ್ರರಂಗದ ಖ್ಯಾತನಾಮರು ಅವರ ಕುಟುಂಬಗಳು, ರಾಷ್ಟ್ರೀಯ-ಅಂತರಾಷ್ಟ್ರೀಯ ರೂಪದರ್ಶಿಗಳು ನಿರ್ಮಾಪಕರು-ನಿರ್ದೇಶಕರನ್ನು ಮಾತ್ರವೇ ಗುರಿಯಾಗಿಸುವ ಉದ್ದೇಶವೇನು?

  • ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಹಾಗೂ ತನಿಖೆಯನ್ನು ಸಂಪೂರ್ಣವಾಗಿ ಸಂಬಂಧವಿಲ್ಲದ ದಿಕ್ಕಿಗೆ ತಿರುಗಿಸಲಾಗಿದೆ.

  • ಅಕ್ಟೋಬರ್ 20 ರವರೆಗೆ 17 ದಿನಗಳ ಕಾಲ ಆರ್ಯನ್‌ ಖಾನ್‌ ಅವರನ್ನು ಬಂಧಿಸಿರುವುದು ಸಂಪೂರ್ಣ ಅಪಮಾನಕರ, ಪ್ರಜಾಸತ್ತೆಗೆ ವಿರುದ್ಧವಾದುದು ಹಾಗೂ ಅಕ್ರಮವಾದುದು.

  • ಚಿತ್ರರಂಗದ ಖ್ಯಾತನಾಮರನ್ನು ಮತ್ತು ರೂಪದರ್ಶಿಗಳನ್ನು ಕಳೆದ ಎರಡು ವರ್ಷಗಳಿಂದ ಗುರಿಯಾಗಿಸುತ್ತಿರುವ ಎನ್‌ಸಿಬಿ ಅಧಿಕಾರಿಯ ದುರುದ್ದೇಶಪೂರ್ವಕ, ನಿರಂಕುಶ ಕ್ರಮ ಹಾಗೂ ಕೆಟ್ಟ ದ್ವೇಷ ದೊಡ್ಡ ಆತಂಕಕಾರಿಯಾದ ವಿಚಾರ. ಏಕೆಂದರೆ ಅಧಿಕಾರಿಯ ಪತ್ನಿ ಕೂಡ ಚಿತ್ರರಂಗದ ಖ್ಯಾತನಾಮರಾಗಿದ್ದು ಆಕೆಗೆ ನೇರಸ್ಪರ್ಧೆ ಒಡ್ಡುವ ಕಾರಣಕ್ಕಾಗಿ ರೂಪದರ್ಶಿಗಳು ಮತ್ತು ಚಿತ್ರರಂಗದ ಸೆಲೆಬ್ರಿಟಿಗಳ ವಿರುದ್ಧ ಎನ್‌ಸಿಬಿ ಅಧಿಕಾರಿ ಎನ್‌ಡಿಪಿಎಸ್‌ ಕಾಯಿದೆಯಡಿ ಕ್ರಮ ಕೈಗೊಳ್ಳುತ್ತಿದ್ದಾರೆ.

  • ಗುಜರಾತ್‌ನ ಮುಂದ್ರಾ ಬಂದರಿನಿಂದ ವಶಪಡಿಸಿಕೊಂಡ 3,000 ಕೆಜಿಯಷ್ಟು ಮಾದಕ ವಸ್ತುವಿನ ಪ್ರಮಾಣದೆದುರು ಆರ್ಯನ್‌ ಪ್ರಕರಣದ ಮಾದಕವಸ್ತು ವಶಪಡಿಸಿಕೊಂಡ ರೀತಿ ಕುಚೋದ್ಯದ್ದು ಎನಿಸುತ್ತದೆ.

  • ಮಾದಕವಸ್ತುವನ್ನೇ ವಶಪಡಿಸಿಕೊಳ್ಳದೆ ಅಥವಾ ಯಾವುದೇ ಬೇರೆ ಪುರಾವೆಗಳಿಲ್ಲದೆ ವ್ಯಕ್ತಿಯೊಬ್ಬರನ್ನು ಹಲವು ದಿನಗಳ ಕಾಲ ಜೈಲಿನಲ್ಲಿಡುವುದು ನಂಬಲಸಾಧ್ಯವಾದ ನೋವಿನ ಸಂಗತಿಯಾಗಿದೆ. ಆರ್ಯನ್‌ ಮಾದಕವಸ್ತು ಸೇವಿಸಿದ್ದಾರೆ ಎಂದಿಟ್ಟುಕೊಂಡರೂ ಅವರಿಗೆ ಗರಿಷ್ಠ ಒಂದು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದ್ದು ಎನ್‌ಡಿಪಿಎಸ್‌ ಕಾಯಿದೆಯಡಿ ಶಿಕ್ಷೆ ವಿಧಿಸುವವರೆಗೆ ಸಂವಿಧಾನದ ಭಾಗ IIIರ ಅಡಿ ಒದಗಿಸಲಾದ ಆತನ ಮೂಲಭೂತ ಹಕ್ಕುಗಳನ್ನು ರಕ್ಷಿಸಬೇಕಿದೆ.

  • ಎನ್‌ಸಿಬಿ ಕುರಿತಂತೆ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಆಘಾತಕಾರಿ ಬಹಿರಂಗಪಡಿಸಿದ್ದು, ಸತ್ಯ ಬಿಚ್ಚಿಡಲು ಎನ್‌ಸಿಬಿ ಕುರಿತಂತೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ತನಿಖೆ ನಡೆಸುವ ಕಾಲ ಎದುರಾಗಿದೆ.

Kannada Bar & Bench
kannada.barandbench.com