ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯಿದೆ - 1985ರ (ಎನ್‌ಡಿಪಿಎಸ್ ಕಾಯಿದೆ) ವಿವಿಧ ಸೆಕ್ಷನ್‌ಗಳ ಅಡಿ ಬಂಧಿಸಲಾಗಿದೆ. ಖಾನ್ ಮತ್ತು ಇತರ 7 ಮಂದಿಯನ್ನು ಮಾದಕ ದ್ರವ್ಯ ನಿಯಂತ್ರಣ ದಳ (ಎನ್‌ಸಿಬಿ) ವಶಕ್ಕೆ ಪಡೆದಿದೆ. ನಿನ್ನೆ, ಮುಂಬೈ ನ್ಯಾಯಾಲಯ ಅಕ್ಟೋಬರ್ 4ರವರೆಗೆ (ಸೋಮವಾರ) ಆರೋಪಿಗಳನ್ನು ಎನ್‌ಸಿಬಿ ವಶಕ್ಕೆ ನೀಡಿತು.
ಆರ್ಯನ್ ಖಾನ್ ನನ್ನು ಯಾವ ಅಪರಾಧಗಳಿಗಾಗಿ ಬಂಧಿಸಲಾಗಿದೆ? ಆತ ತಪ್ಪಿತಸ್ಥ ಎಂದು ಸಾಬೀತಾದರೆ ಎನ್‌ಡಿಪಿಎಸ್ ಕಾಯಿದೆಯಡಿ ಶಿಕ್ಷೆ ಏನು ಎಂಬುದನ್ನು ಪರಿಶೀಲಿಸೋಣ.
ವಶಪಡಿಸಿಕೊಂಡ ಮಾದಕ ವಸ್ತುವಿನ ಪ್ರಮಾಣವನ್ನು ಆಧರಿಸಿ ಎನ್‌ಡಿಪಿಎಸ್ ಕಾಯಿದೆಯ ಕಠಿಣತೆ ನಿರ್ಧರಿತವಾಗುತ್ತದೆ. ಬಂಧನ ಮೆಮೊ ಪ್ರಕಾರ 13 ಗ್ರಾಂ ಕೊಕೇನ್, 5 ಗ್ರಾಂ ಎಂಡಿ, 21 ಗ್ರಾಂ ಚರಸ್ ಮತ್ತು 22 ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾಯಿದೆಯ ಸೆಕ್ಷನ್ 35ರ ಜೊತೆಗೆ ಸೆಕ್ಷನ್ 8 (ಸಿ), 20 (ಬಿ), 27ರ ಆರೋಪವನ್ನು ಖಾನ್‌ಗೆ ನೀಡಲಾಗಿರುವ ಮೆಮೊ ಆರೋಪಿಸಿದೆ. ಮೊದಲು, ನಾವು ನಿಬಂಧನೆಗಳನ್ನು ಪರಿಶೀಲಿಸೋಣ.
ಸೆಕ್ಷನ್ 8 (ಸಿ): ಯಾವುದೇ ವ್ಯಕ್ತಿ ಮಾದಕ ವಸ್ತುಗಳ ಉತ್ಪಾದನೆ, ತಯಾರಿಕೆ, ಸ್ವಾಧೀನ, ಮಾರಾಟ, ಖರೀದಿ, ಸಾರಿಗೆ, ಸಂಗ್ರಹ, ಬಳಕೆ, ಸೇವನೆ, ಅಂತರ ರಾಜ್ಯ ಆಮದು, ರಫ್ತು, ಭಾರತಕ್ಕೆ ಆಮದು, ಭಾರತದಿಂದ ರಫ್ತು ಅಥವಾ ಸಾಗಾಟವನ್ನು ನಿರ್ಬಂಧಿಸಿದೆ.
ಸೆಕ್ಷನ್ 20 (ಬಿ): ಗಾಂಜಾಕ್ಕೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಗಾಗಿ ಶಿಕ್ಷೆಯನ್ನು ಕಾಯಿದೆಯ ಈ ಸೆಕ್ಷನ್ ವಿಧಿಸುತ್ತದೆ. ಈ ಕಾಯಿದೆಯಡಿಯ ಯಾವುದೇ ನಿಬಂಧನೆ ಅಥವಾ ಯಾವುದೇ ನಿಯಮ ಅಥವಾ ಆದೇಶದ ವಿರುದ್ಧ ಅಥವಾ ಅದಕ್ಕೆ ನೀಡಿದ ಪರವಾನಗಿಯ ಷರತ್ತಿನ ವಿರುದ್ಧವಾಗಿ, ಗಾಂಜಾದ ಉತ್ಪಾದನೆ, ತಯಾರಿಕೆ, ಸ್ವಾಧೀನ, ಮಾರಾಟ, ಖರೀದಿ, ಸಾಗಾಟ, ಸಂಗ್ರಹ, ಬಳಕೆ, ಸೇವನೆ, ಅಂತರ ರಾಜ್ಯ ಆಮದು, ರಫ್ತು ಶಿಕ್ಷಾರ್ಹ ಅಪರಾಧ. ಈ ಕುರಿತಾದ ಶಿಕ್ಷೆಯ ವಿವರ:
(ಎ) ಸಣ್ಣ ಪ್ರಮಾಣಕ್ಕೆ - ಒಂದು ವರ್ಷದ ಕಠಿಣ ಸೆರೆವಾಸ, ಅಥವಾ ₹ 10,000 ದಂಡದೊಂದಿಗೆ ಶಿಕ್ಷೆ ಇಲ್ಲವೇ ಎರಡನ್ನೂ ವಿಧಿಸಬಹುದಾಗಿದೆ.
(ಬಿ) ವಾಣಿಜ್ಯ ಪ್ರಮಾಣಕ್ಕಿಂತ ಕಡಿಮೆ ಆದರೆ ಸಣ್ಣ ಪ್ರಮಾಣಕ್ಕಿಂತ ಹೆಚ್ಚು - ಹತ್ತು ವರ್ಷಗಳ ಅವಧಿಗೆ ವಿಸ್ತರಿಸಬಹುದಾದ ಕಠಿಣ ಜೈಲುವಾಸ ಮತ್ತು ₹ 1 ಲಕ್ಷದವರೆಗೆ ದಂಡ ವಿಧಿಸಬಹುದು;
(ಸಿ) ವಾಣಿಜ್ಯ ಪ್ರಮಾಣಕ್ಕಾಗಿ - ಹತ್ತು ವರ್ಷಗಳಿಗಿಂತ ಕಡಿಮೆಯಿಲ್ಲದ ಆದರೆ ಇಪ್ಪತ್ತು ವರ್ಷಗಳ ಅವಧಿಯವರೆಗೆ ವಿಸ್ತರಿಸಬಹುದಾದ ಕಠಿಣ ಜೈಲುವಾಸ ಮತ್ತು ₹1 ಲಕ್ಷಕ್ಕಿಂತ ಕಡಿಮೆಯಿಲ್ಲದ ಆದರೆ ₹ 2 ಲಕ್ಷದವರೆಗೆ ವಿಸ್ತರಿಸಬಹುದಾದ ದಂಡಕ್ಕೆ ಒಳಪಡುತ್ತಾರೆ. ಅಲ್ಲದೆ ನ್ಯಾಯಾಲಯ ತೀರ್ಪಿನಲ್ಲಿ ದಾಖಲಿಸಬೇಕಾದ ಕಾರಣಗಳಿಗಾಗಿ, ಎರಡು ಲಕ್ಷ ರೂಪಾಯಿಗಳಿಗಿಂತ ಹೆಚ್ಚುವರಿ ದಂಡ ವಿಧಿಸಬಹುದು.
ಸೆಕ್ಷನ್ 27 ಯಾವುದೇ ಮಾದಕ ದ್ರವ್ಯ ಅಥವಾ ಅಮಲು ಪದಾರ್ಥ ಸೇವನೆಗಾಗಿ ಶಿಕ್ಷೆ ನೀಡುತ್ತದೆ. ದೆಹಲಿಯಲ್ಲಿ ಎನ್‌ಡಿಪಿಎಸ್ ಪ್ರಕರಣಗಳಲ್ಲಿ ವಾದ ಮಂಡಿಸುವ ವಕೀಲ ಎಂ ಎಫ್ ಫಿಲಿಪ್ ಅವರು ಹೇಳುವಂತೆ, ಖಾನ್ ಅವರಿಂದ ವಶಪಡಿಸಿಕೊಂಡ ಮಾದಕವಸ್ತುಗಳನ್ನು 'ಸಣ್ಣ ಪ್ರಮಾಣ'ದ್ದು ಎಂದು ಪರಿಗಣಿಸಲಾಗುತ್ತದೆ. ಆದರೆ ದೊರೆತಿರುವ ಕೊಕೇನ್ ಮಧ್ಯಮ ಪ್ರಮಾಣದ್ದಾಗಿದೆ.
ಇದರರ್ಥ ಸೆಕ್ಷನ್ 20 ಬಿ (ಬಿ) ಹತ್ತು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಮತ್ತು 1 ಲಕ್ಷದವರೆಗೆ ದಂಡವನ್ನು ವಿಧಿಸುತ್ತದೆ. ವ್ಯಕ್ತಿ ತಪ್ಪಿತಸ್ಥನಾಗಿದ್ದರೆ ಅದು ಅನ್ವಯವಾಗುತ್ತದೆ. ಆದರೂ, ಈ ನಿಬಂಧನೆಯು ಮಧ್ಯಂತರ ಪ್ರಮಾಣಕ್ಕೆ ಯಾವುದೇ ಕನಿಷ್ಠ ಶಿಕ್ಷೆ ಸೂಚಿಸುವುದಿಲ್ಲ ಮತ್ತು ಸಾಮಾನ್ಯವಾಗಿ ಕಡಿಮೆ ಅವಧಿಯ ಜೈಲು ಶಿಕ್ಷೆ ನೀಡಲಾಗುತ್ತದೆ.
ಸೆಕ್ಷನ್ 27 ರ ಅಡಿಯಲ್ಲಿ ಮಾದಕ ವಸ್ತು ಸೇವನೆಗಾಗಿ ಶಿಕ್ಷೆ ವಿಧಿಸಿರುವುದು ತುಂಬಾ ಕಡಿಮೆ. ಜಾಮೀನಿಗೆ ಸಂಬಂಧಿಸಿದಂತೆ ಎನ್‌ಡಿಪಿಎಸ್ ಕಾನೂನಿನಲ್ಲಿ ಇನ್ನೊಂದು ಕುತೂಹಲಕಾರಿ ಅಂಶವಿದೆ. ವಾಣಿಜ್ಯ ಪ್ರಮಾಣವನ್ನು ಒಳಗೊಂಡ ಅಪರಾಧಗಳಿಗೆ, ಸರ್ಕಾರಿ ಅಭಿಯೋಜಕರು ಜಾಮೀನನ್ನು ವಿರೋಧಿಸಿದರೆ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗದು.
ಇಂತಹ ಸಂದರ್ಭದಲ್ಲಿ, ಆರೋಪಿಯು ಅಂತಹ ಅಪರಾಧದಲ್ಲಿ ತಪ್ಪಿತಸ್ಥನಲ್ಲ ಮತ್ತು ಜಾಮೀನು ಪಡೆದು ಆತ ಯಾವುದೇ ಅಪರಾಧ ಮಾಡುವ ಸಾಧ್ಯತೆ ಇಲ್ಲ ಎಂದು ನಂಬಲು ಸಮಂಜಸವಾದ ಆಧಾರಗಳಿರುವುದು ನ್ಯಾಯಾಲಯಕ್ಕೆ ತೃಪ್ತಿಯಾದರೆ ಮಾತ್ರ ಜಾಮೀನು ನೀಡಬಹುದು.
“ಪ್ರಸ್ತುತ ಪ್ರಕರಣದಲ್ಲಿ ವಶಪಡಿಸಿಕೊಂಡ ಮಾದಕ ವಸ್ತು ವಾಣಿಜ್ಯ ಪ್ರಮಾಣಕ್ಕೆ ಹೊಂದಿಕೆಯಾಗುವುದಿಲ್ಲವಾದ್ದರಿಂದ, ಜೈಲು ಕಡ್ಡಾಯ ಮತ್ತು ಜಾಮೀನು ಒಂದು ವಿನಾಯಿತಿ ಎನ್ನುವ ಸೆಕ್ಷನ್ 37ರ ಕಠಿಣ ನಿಯಮ ಇಲ್ಲಿ ಅನ್ವಯಿಸುವುದಿಲ್ಲ” ಎನ್ನುತ್ತಾರೆ ಫಿಲಿಪ್.