![[ಆರ್ಯನ್ ಮಾದಕವಸ್ತು ಪ್ರಕರಣ] ಏಳು ಸಹ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ ಮುಂಬೈ ಎನ್‌ಡಿಪಿಎಸ್ ನ್ಯಾಯಾಲಯ](https://gumlet.assettype.com/barandbench-kannada%2F2021-10%2F0cefd2ed-aaa3-4911-8045-8a9c0124b72f%2F7_get_bail.jpg?rect=0%2C0%2C1152%2C648&auto=format%2Ccompress&fit=max)
ವಿಲಾಸಿ ಹಡಗಿನ ಮಾದಕ ವಸ್ತು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿದ್ದ ಆರ್ಯನ್ ಖಾನ್ ಸೇರಿ ಮೂವರಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದ ಬೆನ್ನಲ್ಲೇ ಶನಿವಾರ ಮುಂಬೈ ನ್ಯಾಯಾಲಯವು ಏಳು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.
ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯಿದೆಯ ಅಡಿ ಸ್ಥಾಪಿಸಲಾದ ವಿಶೇಷ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿ ವಿ ಪಾಟೀಲ್ ಅವರು ಜಾಮೀನು ಆದೇಶ ಮಾಡಿದ್ದಾರೆ.
ಅಚಿತ್ ಕುಮಾರ್, ನುಪೂರ್ ಸತಿಜಾ, ಗೋಮಿತ್ ಛೋಪ್ರಾ, ಗೋಪಾಲ್ ಆನಂದ್, ಸಮೀರ್ ಸೈಗಲ್, ಮಾನವ್ ಸಿಂಘಾಲ್ ಮತ್ತು ಭಾಸ್ಕರ್ ಅರೋರಾ ಅವರಿಗೆ ಜಾಮೀನು ನೀಡಲಾಗಿದೆ. ಆರ್ಯನ್ ಖಾನ್ ಮತ್ತು ಸಹ ಆರೋಪಿ ಅರ್ಬಾಜ್ ಮರ್ಚೆಂಟ್‌ಗೆ ಮಾದಕ ವಸ್ತು ಪೂರೈಸಿದ ಆರೋಪ ಅಚಿತ್ ಕುಮಾರ್ ಅವರ ಮೇಲಿದೆ.
ಬಾಂಬೆ ಹೈಕೋರ್ಟ್ ಆದೇಶ ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಆಗಲಿ ಎಂದು ನ್ಯಾಯಮೂರ್ತಿ ಪಾಟೀಲ್ ಅವರು ಶನಿವಾರ ಬೆಳಗ್ಗೆಯವರೆಗೆ ಕಾಯ್ದಿದ್ದರು. ಆದರೆ, ಅದು ಆಗದ ಕಾರಣ ಅರ್ಜಿದಾರರ ಪರ ವಕೀಲ ಮನವಿಯ ಮೇರೆಗೆ ಆದೇಶದ ಪರಿಣಾಮಕಾರಿ ಭಾಗವನ್ನು ಪೀಠವು ಹೊರಡಿಸಿದೆ. ಮುಂದಿನ ದಿನಾಂಕದಂದು ವಿಸ್ತೃತ ಆದೇಶ ಮಾಡುವುದಾಗಿ ನ್ಯಾಯಾಲಯ ಹೇಳಿದೆ.