ಆರ್ಯನ್‌ ಖಾನ್‌ಗೆ ಅಂತಾರಾಷ್ಟ್ರೀಯ ಸಂಪರ್ಕ, ತನಿಖೆ ಹಳಿ ತಪ್ಪಬಹುದು: ಬಾಂಬೆ ಹೈಕೋರ್ಟ್‌ಗೆ ಎನ್‌ಸಿಬಿ ವಿವರಣೆ

ಪ್ರಭಾಕರ್‌ ಸೈಲ್‌ ಅವರ ಅಫಿಡವಿಟ್‌ ಅನ್ನು ಗುಪ್ತವಾಗಿ ಹಂಚಿಕೆ ಮಾಡಿ, ವ್ಯಾಪಕವಾಗಿ ಮಾಧ್ಯಮಗಳಲ್ಲಿ ಪ್ರಚಾರ ಮಾಡಲಾಗಿದೆ. ತನಿಖೆಯನ್ನು ದಿಕ್ಕುತಪ್ಪಿಸುವ ದುರುದ್ದೇಶ ಹೊಂದಲಾಗಿದೆ ಎಂದು ಎನ್‌ಸಿಬಿ ಹೇಳಿದೆ.
Aryan Khan, Narcotics Control Bureau
Aryan Khan, Narcotics Control Bureau

ಬಾಲಿವುಡ್‌ ನಟ ಶಾರುಖ್‌ ಖಾನ್‌‌ ಪುತ್ರ ಆರ್ಯನ್‌ ಖಾನ್‌ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದು, ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಸಾಕ್ಷ್ಯವನ್ನು ತಿರುಚಬಹುದು ಎಂದು ಬಾಂಬೆ ಹೈಕೋರ್ಟ್‌ಗೆ ಮಾದಕವಸ್ತು ನಿಯಂತ್ರಣ ಸಂಸ್ಥೆಯು (ಎನ್‌ಸಿಬಿ) ತಿಳಿಸಿದ್ದು, ಆರ್ಯನ್‌ ಜಾಮೀನಿಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

ತನ್ನ ನಿಲುವನ್ನು ಸಮರ್ಥಿಸಲು ಪ್ರಕರಣದಲ್ಲಿ ಸಾಕ್ಷಿಯಾಗಿರುವ ಪ್ರಭಾಕರ್‌ ಸೈಲ್‌ ಅವರ ಅಫಿಡವಿಟ್‌ ಅನ್ನು ಉಲ್ಲೇಖಿಸುವ ಮೂಲಕ ತನಿಖೆಯಲ್ಲಿ ಮಧ್ಯಪ್ರವೇಶಿಸಲಾಗುತ್ತಿದೆ ಎಂದು ಎನ್‌ಸಿಬಿ ಹೇಳಿದೆ. ಎನ್‌ಸಿಬಿ ವಲಯ ನಿರ್ದೇಶಕ ಸಮೀರ್‌ ವಾಂಖೆಡೆ ವಿರುದ್ಧ ತಮ್ಮ ಅಫಿಡವಿಟ್‌ನಲ್ಲಿ ಸೈಲ್‌ ಅವರು ಆರೋಪ ಮಾಡಿದ್ದು, ಇದು ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿದೆ.

“ಪ್ರಕರಣವು ಬಾಂಬೆ ಹೈಕೋರ್ಟ್‌ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿದ್ದು, ಈ ಪತ್ರವನ್ನು ಯಾವುದೇ ನ್ಯಾಯಿಕ ಪ್ರಕ್ರಿಯೆಯ ಮುಂದೆ ಇಡಲಾಗಿಲ್ಲ. ಈ ಪತ್ರವನ್ನು ಗುಪ್ತವಾಗಿ ಹಂಚಿಕೆ ಮಾಡಿ, ವ್ಯಾಪಕವಾಗಿ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ” ಎಂದು ಎನ್‌ಸಿಬಿ ತನ್ನ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.

Also Read
ಆರ್ಯನ್‌ ಖಾನ್ ಪ್ರಕರಣ: ಸೈಲ್ ಅಫಿಡವಿಟ್‌ ವಿರುದ್ಧ ಎನ್‌ಸಿಬಿ ಮತ್ತು ಸಮೀರ್‌ ವಾಂಖೆಡೆ ಸಲ್ಲಿಸಿದ್ದ ಮನವಿ ತಿರಸ್ಕೃತ

ಕೆಳಗಿನ ಕಾರಣಗಳನ್ನು ಉಲ್ಲೇಖಿಸಿ ಆರ್ಯನ್‌ ಖಾನ್‌ ಜಾಮೀನಿಗೆ ಎನ್‌ಸಿಬಿಯು ವಿರೋಧ ವ್ಯಕ್ತಪಡಿಸಿದೆ.

  • ಆರ್ಯನ್‌ ಪ್ರಭಾವಿ ವ್ಯಕ್ತಿಯಾಗಿದ್ದು ಅವರಿಗೆ ಜಾಮೀನು ಮಂಜೂರು ಮಾಡಿದರೆ ಅವರು ಸಾಕ್ಷ್ಯವನ್ನು ತಿರುಚುವ ಸಾಧ್ಯತೆ ಇರುತ್ತದೆ.

  • ಆರ್ಯನ್‌ ಖಾನ್‌ಗೆ ಅಂತಾರಾಷ್ಟ್ರೀಯ ಸಂಪರ್ಕವಿದ್ದು, ಅವರು ಕಾನೂನುಬಾಹಿರ ಮಾದಕ ವಸ್ತುಗಳ ದಂಧೆಯ ಭಾಗವಾಗಿದ್ದಾರೆ ಎಂಬುದಕ್ಕೆ ಸಾಕ್ಷ್ಯಗಳು ದೊರೆತಿವೆ.

  • ಆರ್ಯನ್‌ ಮತ್ತು ಅವರ ಸ್ನೇಹಿತ ಅರ್ಬಾಜ್‌ ಮರ್ಚೆಂಟ್‌ ಅವರು ನಿಕಟ ಸಂಪರ್ಕ ಹೊಂದಿದ್ದು, ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ಕಾಯಿದೆ ಸೆಕ್ಷನ್‌ 29ರ ಅಡಿ ಪಿತೂರಿಗೆ ಸಂಬಂಧಿಸಿದಂತೆ ಅಪರಾಧ ಸಾಬೀತುಪಡಿಸಲು ಇಷ್ಟು ಸಾಕು. ಒಬ್ಬ ಆರೋಪಿಯ ಪಾತ್ರವನ್ನು ಮತ್ತೊಬ್ಬ ಆರೋಪಿಯಿಂದ ವಿಭಜಿಸಲಾಗದು. ಇದೊಂದು ದೊಡ್ಡ ಜಾಲವಾಗಿದ್ದು, ಕಾನೂನುಬಾಹಿರ ಚಟುವಟಿಕೆ ನಡೆಸಲು ಪಿತೂರಿಯ ಭಾಗವಾಗಿರುವುದನ್ನು ಅಲ್ಲಗಳೆಯಲಾಗದು.

  • ಜಾಮೀನು ಪಡೆಯಲು ಕಠಿಣವಾದ ಎನ್‌ಡಿಪಿಎಸ್‌ ಕಾಯಿದೆಯ ಸೆಕ್ಷನ್‌ 37ರ ಅನ್ವಯಿಸುತ್ತದೆ.

  • ಯಾವುದೇ ಮಾದಕ ವಸ್ತು ಅಥವಾ ನಿಷೇಧಿತ ಪದಾರ್ಥವನ್ನು ತಮ್ಮಿಂದ ವಶಪಡಿಸಿಕೊಳ್ಳಲಾಗಿಲ್ಲ ಎಂದು ಆರ್ಯನ್‌ ಹೇಳಿದ್ದಾರೆ. ಯಾವುದೇ ಪದಾರ್ಥವನ್ನು ವಶಪಡಿಸಿಕೊಳ್ಳದಿದ್ದರೂ ಆರೋಪಿಗಳು ಪಿತೂರಿಯಲ್ಲಿ ಭಾಗಿಯಾಗಿದ್ದಾರೆ. ಸಹ ಆರೋಪಿಗಳಿಂದ ವಾಣಿಜ್ಯ ಉದ್ದೇಶಕ್ಕಾಗಿ ತರಲಾಗಿದ್ದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಬ್ಬ ಆರೋಪಿಯಿಂದ ಮೆಫೆಡ್ರೋನ್‌ ವಶಪಡಿಸಿಕೊಳ್ಳಲಾಗಿದೆ. ವಾಟ್ಸಾಪ್ ಚಾಟ್ಸ್‌, ಚಿತ್ರ ಇತ್ಯಾದಿಯ ರೂಪದಲ್ಲಿ ಸಾಕಷ್ಟು ದಾಖಲೆಗಳಿದ್ದು, ಇದರಲ್ಲಿ ಆರ್ಯನ್‌ ಅವರು ಇತರೆ ಆರೋಪಿಗಳ ಜೊತೆ ಕಾನೂನುಬಾಹಿರ ಮಾದಕ ವಸ್ತುಗಳ ಸರಪಳಿಯ ಭಾಗವಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಬಹುದಾಗಿದೆ.

  • ಪ್ರಭಾಕರ್‌ ಸೈಲ್‌ ಅವರು ಎನ್‌ಸಿಬಿ ಅಧಿಕಾರಿ ಸುಲಿಗೆ ಮತ್ತು ಭ್ರಷ್ಟಾಚಾರದ ಭಾಗವಾಗಿದ್ದಾರೆ ಎಂದು ಹೇಳಿರುವ ಅಫಿಡವಿಟ್‌ ಆಧರಿಸಲಾಗಿದ್ದು, ಈ ಮೂಲಕ ತನಿಖೆಯಲ್ಲಿ ಮೂಗು ತೂರಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.

  • ವಾಂಖೆಡೆ ಮತ್ತು ಇತರೆ ಸ್ವತಂತ್ರ ಸಾಕ್ಷಿಗಳು ಹಣ ಸುಲಿಗೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸೈಲ್‌ ತಮ್ಮ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನು ಸಾಬೀತುಪಡಿಸಲು ಯಾವುದೇ ಸಾಕ್ಷಿಗಳಿಲ್ಲ ಎಂದು ಎನ್‌ಸಿಬಿ ಪ್ರತಿಕ್ರಿಯಿಸಿದೆ.

  • ಆರೋಪಿಗಳಿಂದ ಯಾವುದೇ ತೆರನಾದ ಮಾದಕ ಅಥವಾ ನಿಷೇಧಿತ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿಲ್ಲ ಎಂದು ಅವರಿಗೆ ಜಾಮೀನು ಮಂಜೂರು ಮಾಡಬಾರದು. ಆರ್ಯನ್‌ಗೆ ಗರಿಷ್ಠ ಒಂದು ವರ್ಷ ಶಿಕ್ಷೆಯಾಗಬಹುದು ಎಂಬುದು ಊಹೆಗಳನ್ನು ಆಧರಿಸಿದ್ದು, ಇದು ಪಿತೂರಿ ಎಂದು ಸಾಬೀತುಪಡಿಸಲು ಎನ್‌ಸಿಬಿಯ ಬಳಿ ಸಾಕಷ್ಟು ದಾಖಲೆಗಳಿಗೆ ಎಂದು ಹೇಳಲಾಗಿದೆ.

Related Stories

No stories found.
Kannada Bar & Bench
kannada.barandbench.com