ಕನಸು ನನಸಾದ ಕ್ಷಣ: ಪ್ರಮಾಣವಚನ ಸ್ವೀಕರಿಸಿದ ನ್ಯಾ. ಪೂಣಚ್ಚ ಅನಿಸಿಕೆ

ಹೈಕೋರ್ಟ್‌ನಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರು ಕೊಡಗು ಮೂಲದ ಪೂಣಚ್ಚ ಅವರಿಗೆ ಪ್ರಮಾಣ ವಚನ ಬೋಧಿಸಿದರು.
Justice Cheppudira Monnappa Poonacha
Justice Cheppudira Monnappa Poonacha

ವಿದ್ಯಾರ್ಥಿಯಾಗಿ, ವಕೀಲನಾಗಿ ಮತ್ತೀಗ ನ್ಯಾಯಮೂರ್ತಿಯಾಗಿ ಕೆಂಪು ಬಣ್ಣದ ಈ ನ್ಯಾಯಾಲಯವನ್ನು ಪ್ರವೇಶಿಸಿರುವುದು ಕನಸು ನನಸಾದಂತಾಗಿದೆ ಎಂದು ಸೋಮವಾರ ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪದಗ್ರಹಣ ಸ್ವೀಕರಿಸಿದ ಸಿ ಎಂ ಪೂಣಚ್ಚ ಅವರು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದರು.

ಹೈಕೋರ್ಟ್‌ನಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರು ಕೊಡಗಿನ ಪೂಣಚ್ಚ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಬಳಿಕ ಮಾತನಾಡಿದ ನ್ಯಾ. ಪೂಣಚ್ಚ ಅವರು ತಮ್ಮ ಮುಂದೆ “ಸಾಕಷ್ಟು ಜವಾಬ್ದಾರಿ ಮತ್ತು ಸವಾಲುಗಳು ಇದ್ದು, ಎಲ್ಲರ ನೆರವು ಸಹಕಾರ ಅಗತ್ಯ” ಎಂದು ಹೇಳಿದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷ ಎಂ ಕಾಶೀನಾಥ್‌ ಅವರು ನ್ಯಾ. ಪೂಣಚ್ಚ ಅವರ ವಕೀಲಿಕೆ ದಿನಗಳ ಗುಣಗಾನ ಮಾಡಿ, ಎಲ್ಲಾ ರೀತಿಯ ಸಹಕಾರದ ಭರವಸೆ ನೀಡಿದರು.

ಹಿರಿಯ ನ್ಯಾಯಮೂರ್ತಿಗಳಾದ ಅಲೋಕ್‌ ಅರಾಧೆ, ಜಿ ನರೇಂದರ್, ಬಿ ವೀರಪ್ಪ ಸೇರಿದಂತೆ ಹಲವು ನ್ಯಾಯಮೂರ್ತಿಗಳು ಸಮಾರಂಭಕ್ಕೆ ಸಾಕ್ಷಿಯಾದರು. ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ ಬಿ ನರಗುಂದ್‌, ಸಹಾಯಕ ಸಾಲಿಸಿಟರ್‌ ಜನರಲ್‌ ಎಚ್‌ ಶಾಂತಿಭೂಷಣ್‌, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಸೇರಿದಂತೆ ಸರ್ಕಾರಿ ವಕೀಲರು, ಸರ್ಕಾರಿ ಅಭಿಯೋಜಕರು, ಹಲವು ವಕೀಲರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಳೆದ ಬುಧವಾರ ವಕೀಲ ಸಿ ಎಂ ಪೂಣಚ್ಚ ಅವರನ್ನು ಎರಡು ವರ್ಷಗಳ ಅವಧಿಗೆ ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿ ಅಧಿಸೂಚನೆ ಹೊರಡಿಸಿತ್ತು.

Related Stories

No stories found.
Kannada Bar & Bench
kannada.barandbench.com