ಗುಜರಾತ್‌ನಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಲೇರಿದ ಅಸಾರಾಂ ಬಾಪು

ತಮ್ಮ ವಿರುದ್ಧ 2013ರಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ನೀಡಲು ಗುಜರಾತ್‌ ಹೈಕೋರ್ಟ್‌ ನಿರಾಕರಿಸಿರುವುದನ್ನು ಪ್ರಶ್ನಿಸಿ ಅಸಾರಾಂ ಬಾಪು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.
Asaram Bapu, Supreme Court
Asaram Bapu, Supreme Court
Published on

ಗುಜರಾತ್‌ ಮೂಲದ ಇಬ್ಬರು ಸಹೋದರಿಯರನ್ನು ಅಕ್ರಮ ಬಂಧನದಲ್ಲಿರಿಸಿ ಅವರ ಮೇಲೆ ಅತ್ಯಾಚಾರ ನಡೆಸಿರುವ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವ ಸ್ವಘೋಷಿತ ದೇವಮಾನವ ಅಸಾರಾಂ ಬಾಪು ಜಾಮೀನು ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಜಯ್‌ ರಸ್ತೋಗಿ ಮತ್ತು ಸಿ ಟಿ ರವಿಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠವು ಗುಜರಾತ್‌ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ್ದು, ವಿಚಾರಣೆಯನ್ನು ಸೆಪ್ಟೆಂಬರ್‌ 7ಕ್ಕೆ ಮುಂದೂಡಿದೆ.

ತಮಗೆ 80 ವರ್ಷ ವಯಸ್ಸಾಗಿದ್ದು, ಆರೋಗ್ಯ ಸ್ಥಿತಿ ಬಿಗಡಾಯಿಸುತ್ತಿದೆ. ಕಳೆದ ಒಂಭತ್ತು ವರ್ಷಗಳಿಂದ ಜೈಲಿನಲ್ಲಿದ್ದೇನೆ. ಸದ್ಯಕ್ಕೆ ವಿಚಾರಣೆ ಮುಗಿಯುವ ಸಾಧ್ಯತೆ ಇಲ್ಲ ಎಂಬ ಕಾರಣಗಳನ್ನು ಉಲ್ಲೇಖಿಸಿ ಅಸಾರಾಂ ಜಾಮೀನು ಕೋರಿದ್ದಾರೆ. ಗುಜರಾತ್‌ನಲ್ಲಿ ವಿಚಾರಣೆಗೆ ಒಳಗಾಗಿರುವುದರಿಂದ ರಾಜಸ್ಥಾನದಲ್ಲಿ ದಾಖಲಾಗಿರುವ ಮತ್ತೊಂದು ಪ್ರಕರಣದಲ್ಲಿ ತನಗೆ ವಿಧಿಸಲಾಗಿರುವ ಶಿಕ್ಷೆಯನ್ನು ಅಮಾನತು ಪಡಿಸುವಂತೆ ಕೋರಲಾಗುತ್ತಿಲ್ಲ ಎಂದೂ ಅವರು ವಾದಿಸಿದ್ದಾರೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಅಸಾರಾಂ ಅವರಿಗೆ ಜಾಮೀನು ನೀಡಲು ನಿರಾಕರಿಸಿದ್ದ ಗುಜರಾತ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಎ ಜಿ ದೇಸಾಯಿ ಅವರ ನೇತೃತ್ವದ ಏಕಸದಸ್ಯ ಪೀಠವು ನಾಲ್ಕು ತಿಂಗಳಲ್ಲಿ ವಿಚಾರಣೆ ಮುಗಿಸುವಂತೆ ಗಾಂಧಿನಿಗರದ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶಿಸಿತ್ತು.

ಆಶ್ರಮದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಮತ್ತೊಂದು ಪ್ರಕರಣದಲ್ಲಿ ರಾಜಸ್ಥಾನದ ವಿಶೇಷ ನ್ಯಾಯಾಲಯವು ಅಸಾರಾಂ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಗುಜರಾತ್‌ನ ಸೂರತ್‌ ಮೂಲದ ಸಹೋದರಿಯಬ್ಬರು ಅಸಾರಾಂ ಬಾಪು ಮತ್ತು ಅವರ ಪುತ್ರ ನಾರಾಯಣ್‌ ಸಾಯಿ ವಿರುದ್ಧ ಅತ್ಯಾಚಾರ ಮತ್ತು ಅಕ್ರಮ ಬಂಧನ ಆರೋಪ ಮಾಡಿ ಪ್ರತ್ಯೇಕ ಪ್ರಕರಣ ದಾಖಲಿಸಿದ್ದರು. ದೂರುದಾರರ ಪೈಕಿ ಹಿರಿಯ ಸಹೋದರಿಯು ಅಹ್ಮದಾಬಾದ್‌ನ ಮೊಟೇರಾದ ಆಶ್ರಮದಲ್ಲಿದ್ದಾಗ 2001ರಿಂದ 2006 ರ ನಡುವೆ ನಿರಂತರವಾಗಿ ಅಸಾರಾಂ ಬಾಪು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಅಸಾರಾಂ ಬಾಪು ಅವರನ್ನು ಹಿರಿಯ ವಕೀಲ ದೇವದತ್‌ ಕಾಮತ್‌, ವಕೀಲರಾದ ರಾಜೇಶ್‌ ಇನಾಂದಾರ್‌, ರೇವಂತ್‌ ಸೋಲಂಕಿ ಮತ್ತು ಕರಣ್‌ ಖನುಜಾ ಪ್ರತಿನಿಧಿಸಿದ್ದರು.

Kannada Bar & Bench
kannada.barandbench.com