ಗುವಾಹಟಿ ಹೈಕೋರ್ಟ್ ತೀರ್ಪಿನಲ್ಲಿ ತಮ್ಮ ವಿರುದ್ಧ ನೀಡಲಾಗಿದ್ದ ಅವಹೇಳನಕಾರಿ ಹೇಳಿಕೆ ತೆಗೆದುಹಾಕುವಂತೆ ಕೋರಿ ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯಿದೆ (ಎನ್‌ಐಎ ಕಾಯಿದೆ) ಅಡಿಯಲ್ಲಿ ರೂಪುಗೊಂಡಿರುವ ಅಸ್ಸಾಂನ ವಿಶೇಷ ನ್ಯಾಯಾಲಯವೊಂದರ ನ್ಯಾಯಾಂಗ ಅಧಿಕಾರಿಯೊಬ್ಬರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ.
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿಯ (ಯುಎಪಿಎ) ಪ್ರಕರಣದಲ್ಲಿ ತಾನು ನೀಡಿದ್ದ ಶಿಕ್ಷೆ ರದ್ದುಗೊಳಿಸಿದ್ದ ಹೈಕೋರ್ಟ್ ತನ್ನ ವಿರುದ್ಧ ಮಾಡಿದ್ದ ಅವಲೋಕನಗಳ ವಿರುದ್ಧ ದೂರು ನೀಡಿದ್ದರು ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಪಿ ಎಸ್ ನರಸಿಂಹ ಅವರಿದ್ದ ಪೀಠ ಎನ್‌ಐಎ ಪ್ರತಿಕ್ರಿಯೆ ಕೇಳಿದೆ.
ಆರೋಪಿಗಳು ಕ್ರಿಮಿನಲ್ ಪಿತೂರಿಯಲ್ಲಿ ತೊಡಗಿದ್ದಾರೆ ಎಂಬುದನ್ನು ಸಾಬೀತುಪಡಿಸುವಲ್ಲಿ ಎನ್‌ಐಎ ವಿಫಲವಾಗಿದೆ. ಆರೋಪಿಗಳು ಸದಸ್ಯರೆಂದು ಹೇಳಲಾದ ಸಂಘಟನೆಯಾದ ದಿಮಾ ಹಲಂ ದಾವೊಗಾ (ಜ್ಯುವೆಲ್ ಗಾರ್ಲೋಸಾ) ಭಯೋತ್ಪಾದಕ ಸಂಘಟನೆ ಎಂದು ನಿರ್ಣಾಯಕವಾಗಿ ಸಾಬೀತಾಗಿಲ್ಲ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿತ್ತು.
ಆ ಸಂದರ್ಭದಲ್ಲಿ ಹೈಕೋರ್ಟ್, ʼಎನ್‌ಐಎ ನ್ಯಾಯಾಧೀಶರ ಕಡೆಯಿಂದ ಪ್ರಾಸಿಕ್ಯೂಷನ್ ಪರವಾಗಿ ಆಳವಾದ ಪಕ್ಷಪಾತ ನಡೆದಿದೆ. ಆರೋಪಿ/ಅಪೀಲುದಾರರಾದ ಅಹಶ್ರಿಂಗ್‌ಡಾವ್ ವಾರಿಸಾ ಅವರನ್ನು ಅಪರಾಧಿ ಎಂದು ನಿರ್ಣಯಿಸಬೇಕೆಂದು ಸಂಪೂರ್ಣವಾಗಿ ಪಕ್ಷಪಾತದ ಮನೋಭಾವದಿಂದ ನ್ಯಾಯಾಧೀಶರು ವರ್ತಿಸಿದ್ದಾರೆ. ಇದೊಂದು ಪೂರ್ವ ನಿರ್ಧರಿತ ತೀರ್ಪು, ನ್ಯಾಯಾಂಗವನ್ನು ಅನುಚಿತತೆಗೀಡು ಮಾಡಲಾಗಿದೆ, ನಿರ್ಲಕ್ಷ್ಯದಿಂದ ವರ್ತಿಸಲಾಗಿದೆ. ಮತ್ತೊಮ್ಮೆ ಚಿಂತಿಸದೆ ಮೂಕಪ್ರೇಕ್ಷಕರಂತೆ ವರ್ತಿಸಲಾಗಿದೆ, ದಾಖಲೆಯಲ್ಲಿ ಲಭ್ಯವಿರುವ ನೈಜ ಪುರಾವೆಗಳಿಗೆ ವಿವೇಚನೆ ಬಳಸಿಲ್ಲ ಎಂದು ತೀರ್ಪಿನಲ್ಲಿ ಹೇಳಿರುವ ಅಂಶಗಳನ್ನು. ತೆಗೆದುಹಾಕುವಂತೆ ಎನ್‌ಐಎ ನ್ಯಾಯಾಧೀಶರು ಕೋರಿದ್ದಾರೆ. ಮೇಲ್ಮನವಿಯನ್ನುನಿರ್ಧರಿಸುವಾಗ ಈ ಹೇಳಿಕೆಗಳನ್ನು ಹೈಕೋರ್ಟ್ ನೀಡುವ ಅಗತ್ಯವಿರಲಿಲ್ಲ ಎಂದು ಅರ್ಜಿದಾರರು ತಿಳಿಸಿದ್ದಾರೆ.
“ ಈ ಟೀಕೆಗಳು ಸಹೋದ್ಯೋಗಿಗಳು, ವಕೀಲರು ಹಾಗೂ ದಾವೆದಾರೆರೆದುರು ತನ್ನ ಪ್ರತಿಷ್ಠೆಗೆ ಆಳವಾದ ಧಕ್ಕೆ ತಂದಿವೆ. ಶಾಂತಿ ಮತ್ತು ಆತ್ಮವಿಶ್ವಾಸದಿಂದ ನ್ಯಾಯಾಂಗದ ಕರ್ತವ್ಯ ನಿರ್ವಹಿಸುವಲ್ಲಿ ಆಳವಾದ ಪರಿಣಾಮ ಬೀರುವುದರ ಜೊತೆಗೆ ತನ್ನ ಮನಸ್ಸಿನ ಶಾಂತಿಯನ್ನುಕದಡಿವೆ. ಈ ಹೇಳಿಕೆಗಳು ತನ್ನ ವೃತ್ತಿಜೀವನದ ಮೇಲೆ ಪರಿಣಾಮ ಬೀರಬಹುದು” ಎಂದು ಅರ್ಜಿದಾರ ನ್ಯಾಯಾಧೀಶರು ತಿಳಿಸಿದ್ದಾರೆ.
ಈ ಸಂಬಂಧ ಹೈಕೋರ್ಟ್ ಇಂತಹ ಗಂಭೀರ ಲೋಪ ಮರುಕಳಿಸದಂತಾಗಲು ಈ ತೀರ್ಪಿನ ಪ್ರತಿಯನ್ನು ಅಸ್ಸಾಂ ರಾಜ್ಯ ನ್ಯಾಯಾಂಗ ಅಕಾಡೆಮಿಯ ಮುಂದೆ ಇಡುವಂತೆ ನಿರ್ದೇಶಿಸಿತ್ತು.