ಕ್ಷೇತ್ರ ಮರುವಿಂಗಡಣೆ ವಿಧಾನ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಅಸ್ಸಾಂನ ವಿರೋಧ ಪಕ್ಷಗಳ ನಾಯಕರು

ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯಲ್ಲಿ ಜನಸಾಂದ್ರತೆ ಅಥವಾ ಜನದಟ್ಟಣೆ ಯಾವುದೇ ಪಾತ್ರ ವಹಿಸಿಲ್ಲ ಎಂದ ಅರ್ಜಿದಾರರು.
Supreme Court
Supreme Court
Published on

ಅಸ್ಸಾಂನಲ್ಲಿ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಕೈಗೊಳ್ಳಲು ಭಾರತೀಯ ಚುನಾವಣಾ ಆಯೋಗ (ಇಸಿಐ) ಅಳವಡಿಸಿಕೊಂಡ ವಿಧಾನ ಪ್ರಶ್ನಿಸಿ ಅಸ್ಸಾಂನ ವಿವಿಧ ವಿರೋಧ ಪಕ್ಷಗಳ ನಾಯಕರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯು 1950ರ ಜನ ಪ್ರತಿನಿಧಿ ಕಾಯಿದೆಯ ಸೆಕ್ಷನ್ 8ಎಯನ್ನು ಪ್ರಶ್ನಿಸಿದ್ದು ಈ ಕಾಯಿದೆಯ ಆಧಾರದ ಮೇಲೆ ಇಸಿಐ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ನಡೆಸಲು ಉದ್ದೇಶಿಸಿದೆ ಎಂದು ಹೇಳಲಾಗಿದೆ.

ಪ್ರಕರಣದ ಅರ್ಜಿದಾರರು ಲುರಿಂಜ್ಯೋತಿ ಗೊಗೊಯ್ (ಅಸ್ಸಾಂ ರಾಷ್ಟ್ರೀಯ ಪರಿಷತ್), ದೇಬಬ್ರತ ಸೈಕಿಯಾ (ಐಎನ್‌ಸಿ), ರೋಕಿಬುಲ್ ಹುಸೇನ್ (ಐಎನ್‌ಸಿ), ಅಖಿಲ್ ಗೊಗೊಯ್ (ರೈಜೋರ್ ದಳ), ಮನೋರಂಜನ್ ತಾಲೂಕ್ದಾರ್ (ಸಿಪಿಎಂ), ಘನಕಾಂತ ಚುಟಿಯಾ (ತೃಣಮೂಲ ಕಾಂಗ್ರೆಸ್), ಮುನಿನ್. ಮಹಂತ (ಸಿಪಿಐ), ದಿಗಂತ ಕೊನ್ವರ್ (ಅಂಚಲಿಕ್ ಗಾನ ಮೋರ್ಚಾ), ಮಹೇಂದ್ರ ಭುಯಾನ್ (ರಾಷ್ಟ್ರೀಯ ಕಾಂಗ್ರೆಸ್ ಪಕ್ಷ), ಮತ್ತು ಸ್ವರ್ಣ ಹಜಾರಿಕಾ (ರಾಷ್ಟ್ರೀಯ ಜನತಾ ದಳ).

ಅಸ್ಸಾಂನ 126 ವಿಧಾನಸಭೆ ಮತ್ತು 14 ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಾಡುವುದಾಗಿ ಇಸಿಐ ಜೂನ್ 20 ರಂದು ಹೊರಡಿಸಿದ್ದ ಕರಡು ಆದೇಶದ ಪ್ರಸ್ತಾವನೆಗಳನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.

ಈ ಕಾರ್ಯಕ್ಕಾಗಿ ಇಸಿಐ ವಿವಿಧ ಜಿಲ್ಲೆಗಳಲ್ಲಿ ಬೇರೆ ಬೇರೆ ವಿಧಾನಸಭಾ ಕ್ಷೇತ್ರಗಳ ಗಾತ್ರಗಳನ್ನು ಪರಿಗಣಿಸಿದೆ. ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯಲ್ಲಿ ಜನಸಾಂದ್ರತೆ ಅಥವಾ ಜನದಟ್ಟಣೆ ಯಾವುದೇ ಪಾತ್ರ ವಹಿಸುವುದಿಲ್ಲ ಎನ್ನುವುದು ಅವರ ವಾದವಾಗಿದೆ ಎಂದು ಅರ್ಜಿದಾರರು ದೂರಿದ್ದಾರೆ. ಇದರ ಪರಿಣಾಮವೆನ್ನುವಂತೆ ಕ್ಷೇತ್ರಗಳಲ್ಲಿನ ಜನಸಂಖ್ಯೆಯ ವ್ಯತ್ಯಾಸವು ಗರಿಷ್ಠ ಶೇ.33ರ ವರೆಗೆ ಇದೆ ಎಂದು ಅರ್ಜಿಯಲ್ಲಿ ಗಮನಸೆಳೆಯಲಾಗಿದೆ.

ದೇಶದ ವಿವಿಧೆಡೆ ಕ್ಷೇತ್ರ ಮರುವಿಂಗಡಣೆಯ ಪ್ರಕ್ರಿಯೆಯನ್ನು ನಿವೃತ್ತ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯವರ ನೇತೃತ್ವದ ಉನ್ನತಾಧಿಕಾರ ಸಮಿತಿಯು ಕೈಗೊಳ್ಳುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಸಹ ಇದೇ ಪ್ರಕ್ರಿಯೆ ಅನುಸರಿಸಲಾಗಿತ್ತು. ಆದರೆ, ಜನಪ್ರತಿನಿಧಿ ಕಾಯಿದೆಯ ಸೆಕ್ಷನ್‌ 8ಎ ಅಸ್ಸಾಂ ಹಾಗೂ ಇತರ ಮೂರು ಈಶಾನ್ಯ ರಾಜ್ಯಗಳ ವಿಚಾರದಲ್ಲಿ ತಾರತಮ್ಯ ಎಸಗುತ್ತದೆ. ಇದರನ್ವಯ ಈ ರಾಜ್ಯಗಳಲ್ಲಿ ಕ್ಷೇತ್ರ ಮರುವಿಂಗಡಣೆ ಮಾಡುವ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡಲಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಅಸ್ಸಾಂ ಸೇರಿದಂತೆ 4 ಈಶಾನ್ಯ ರಾಜ್ಯಗಳ ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದಂತೆ ಇನ್ನೂ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (ಪಿಐಎಲ್) ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇವೆ.  ಅಸ್ಸಾಂನಲ್ಲಿ ಇಸಿಐ ಕ್ಷೇತ್ರ ಮರುವಿಂಗಡಣೆ ಕೈಗೆತ್ತಿಕೊಳ್ಳುವ ಮೊದಲೇ ಇವುಗಳನ್ನು ಸಲ್ಲಿಸಲಾಗಿತ್ತು.

Kannada Bar & Bench
kannada.barandbench.com