

ವ್ಯಕ್ತಿಯೊಬ್ಬರ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ ಆರೋಪ ಸಂಬಂಧ ಸಂಡೂರು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಮಹೇಶ್ ಗೌಡ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ನಿರ್ದೇಶಿಸಿದೆ.
ತನ್ನ ಮೇಲೆ ಭೀಕರವಾಗಿ ಹಲ್ಲೆ ನಡೆಸಿರುವ ಸಂಡೂರು ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಗೌಡ ವಿರುದ್ಧದ ಎಫ್‌ಐಆರ್ ದಾಖಲಿಸಿ ತನಿಖೆ ಮಾಡಲು ಸರ್ಕಾರ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸಬೇಕು ಎಂದು ಕೋರಿ ಬಳ್ಳಾರಿಯ ಕೊಲ್ಲೂರು ಗ್ರಾಮದ ನಿವಾಸಿ ವಿ ವಿವೇಕಾನಂದ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
ದೂರು ದಾಖಲಿಸಿಲ್ಲ ಎಂಬುದು ಅರ್ಜಿದಾರರ ಅಹವಾಲು. ಪೊಲೀಸ್ ವಿರುದ್ಧ ದೇಶದ ಪ್ರಜೆ ದೂರು ನೀಡಿದ್ದಾರೆ ಎಂಬ ಕಾರಣಕ್ಕೆ ದೂರು ದಾಖಲಿಸಿಲ್ಲ. ಅರ್ಜಿದಾರರ ಮೇಲೆ ಇನ್ಸ್‌ಪೆಕ್ಟರ್ ಬರ್ಬರವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಯನ್ನು ಬಿಂಬಿಸುವ ಫೋಟೊಗಳನ್ನು ಅರ್ಜಿಯೊಂದಿಗೆ ಲಗತ್ತಿಸಲಾಗಿದೆ. ಆದರೂ ದೂರು ದಾಖಲಿಸದೆ ಅರ್ಜಿದಾರರು ಕಂಬ ಸುತ್ತುವಂತೆ ಮಾಡಲಾಗಿದೆ. ಗಂಭೀರ ಸ್ವರೂಪದ ಅಪರಾಧ ಕೃತ್ಯ ಎಸಗಿರುವ ಯಾವುದೇ ವ್ಯಕ್ತಿಯ ವಿರುದ್ಧ ದೂರು ನೀಡಲು ನಾಗರಿಕರು ಪೊಲೀಸ್ ಠಾಣೆಗೆ ಹೋದರೆ, ಆರೋಪಿತ ಸ್ಥಾನದಲ್ಲಿರುವ ವ್ಯಕ್ತಿ ಅದೇ ಪೊಲೀಸ್ ಠಾಣೆಯ ಅಧಿಕಾರಿಯಾಗಿದ್ದರು ಸಹ ದೂರು ದಾಖಲಿಸಲು ನಿರಾಕರಿಸುವಂತಿಲ್ಲ. ಆರೋಪಿ ಯಾರು ಎಂಬ ಅಂಶದ ಮೇಲೆ ದೂರು ದಾಖಲಿಸುವುದು ಸಲ್ಲ ಎಂದು ಪೀಠ ಹೇಳಿದೆ.
ಅಲ್ಲದೆ, ಆರೋಪಿ ಯಾರೇ ಆಗಿದ್ದರೂ ಆತ ಅಪರಾಧ ಎಸಗಿದ್ದರೆ ತನಿಖೆ ನಡೆಸಲೇಬೇಕು. ಪ್ರಕರಣದಲ್ಲಿ ದೂರು ದಾಖಲಿಸದೆ ಇರುವುದು ಕಾನೂನುಬಾಹಿರ. ಇದು ಲಲಿತಾ ಕುಮಾರಿ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಆರೋಪಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿರುವುದರಿಂದ ದೂರು ಪರಿಶೀಲಿಸಿ ಎಫ್‌ಐಆರ್ ದಾಖಲಿಸಬೇಕು. ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನ್ಯಾಯಸಮ್ಮತವಾದ ತನಿಖೆಯನ್ನು ಖಾತರಿಪಡಿಸಬೇಕು. ಈ ಪ್ರಕರಣವು ಬಹಳ ವಿಶೇಷವಾಗಿರುವುದರಿಂದ ಅಗತ್ಯವೆನಿಸಿದರೆ ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸಲು ಬೇರೆ ಪೊಲೀಸ್ ಠಾಣೆಗೆ ಆದೇಶಿಸಬಹುದು. ಆ ತನಿಖೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೇಲ್ವಿಚಾರಣೆ ನಡೆಸಬೇಕು ಎಂದು ಪೀಠ ಆದೇಶಿಸಿದೆ.
ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ವಿವೇಕಾನಂದ ಮೇಲೆ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಗೌಡ ಬರ್ಬರವಾಗಿ ಹಲ್ಲೆ ನಡೆಸಿದ್ದಾರೆ. ಅವರೇ ಇನ್ಸ್‌ಪೆಕ್ಟರ್ ಆಗಿರುವುದರಿಂದ ದೂರು ದಾಖಲಿಸಲು ಪೊಲೀಸರು ನಿರಾಕರಿಸಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಸರ್ಕಾರದ ಪರ ವಕೀಲರು, ಮಹೇಶ್ ಗೌಡ ಗಂಭೀರ ಸ್ವರೂಪದ ಅಪರಾಧ ಕೃತ್ಯ ಎಸಗಿರುವುದು ಕಂಡುಬಂದರೆ ದೂರು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇಲ್ಲದಿದ್ದರೆ ದೂರು ದಾಖಲಿಸಲು ಸೂಕ್ತ ಕಾರ್ಯವಿಧಾನ ಅನುಸರಿಸಲಾಗುತ್ತದೆ ಎಂದು ತಿಳಿಸಿದ್ದರು.
ಪ್ರಕರಣದ ಹಿನ್ನೆಲೆ: ತನ್ನ ಮೇಲೆ ಸಂಡೂರು ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಗೌಡ ಹಲ್ಲೆ ನಡೆಸಿದ್ದಾರೆ. ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಕೋರಿ 2025ರ ಆಗಸ್ಟ್ 28ರಂದು ಸಂಡೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆದರೆ, ಮಹೇಶ್ ಗೌಡ ಅದೇ ಠಾಣೆಯ ಇನ್ಸ್‌ಪೆಕ್ಟರ್ ಆಗಿರುವ ಕಾರಣಕ್ಕೆ ದೂರು ಸ್ವೀಕರಿಸಲಿಲ್ಲ. ಇದರಿಂದ ರಾಜ್ಯದ ಗೃಹ ಮಂತ್ರಿಗೆ ಮನವಿ ಪತ್ರ ಸಲ್ಲಿಸಿದೆ. ಆದರೂ ದೂರು ದಾಖಲಾಗದಕ್ಕೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ ಎಂದು ಅರ್ಜಿಯಲ್ಲಿ ವಿವೇಕಾನಂದ ಆರೋಪಿಸಿದ್ದಾರೆ.