ಮದ್ಯ ಸೇವಿಸಿ ವಾಹನ ಚಲಾಯಿಸಿದ ಸಂಬಂಧ ಪ್ರಕರಣ ದಾಖಲಿಸಿದ್ದಕ್ಕೆ ಸಂಚಾರ ಪೊಲೀಸ್ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಈಚೆಗೆ ಖುಲಾಸೆಗೊಳಿಸಿರುವ ಕರ್ನಾಟಕ ಹೈಕೋರ್ಟ್, ಆರೋಪಿಗಳ ವಿರುದ್ಧ ಕಾನೂನು ಪ್ರಕ್ರಿಯೆ ಮುಂದುವರಿಸಲು ಲಭ್ಯವಿರುವ ದಾಖಲೆಗಳು ಸಾಕಾಗುವುದಿಲ್ಲ. ಆರೋಪಗಳನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಿಲ್ಲ ಎಂದಿದೆ.
ಪೊಲೀಸ್ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಗಳನ್ನು ರದ್ದುಪಡಿಸುವಂತೆ ಕೋರಿ ಪ್ರಿಯಾಂಶು ಕುಮಾರ್ ಮತ್ತು ಅವರ ಸ್ನೇಹಿತ ಅಲೋಕ್ ಕುಮಾರ್ ಸಲ್ಲಿಸಿದ್ದ ಕ್ರಿಮಿನಲ್ ಆದೇಶ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.
“ಘಟನೆ ನಡೆದಾಗ ಸಾರ್ವಜನಿಕರು ಹಾಜರಿದ್ದು, ಅರ್ಜಿದಾರ/ಆರೋಪಿಗಳನ್ನು ವಶಕ್ಕೆ ಪಡೆಯಲು ಸಹಾಯ ಮಾಡಿದ್ದಾರೆ ಎಂದು ಪ್ರಾಸಿಕ್ಯೂಷನ್ ಹೇಳಿದೆ. ಆದರೆ, ಅವರ ಹೇಳಿಕೆಯನ್ನು ದಾಖಲಿಸಲಾಗಿಲ್ಲ. ಆರೋಪ ಪಟ್ಟಿಯಲ್ಲಿ ಯಾರೊಬ್ಬರನ್ನೂ ಸಾಕ್ಷಿಯಾಗಿ ಉಲ್ಲೇಖಿಸಿಲ್ಲ” ಎಂದು ಪೀಠವು ಹೇಳಿದೆ.
“2015ರ ಸೆಪ್ಟೆಂಬರ್ 9ರ ಹೆಚ್ಚುರಿ ಪೊಲೀಸ್ ಆಯುಕ್ತರ (ಸಂಚಾರ) ಸುತ್ತೋಲೆಯ ಪ್ರಕಾರ ನಿರ್ದಿಷ್ಟ ಪ್ರಕರಣ ನಡೆದಾಗ ನ್ಯಾಯಾಲಯಕ್ಕೆ ದಂಡ ನಿರ್ಧರಿಸುವ ಅಧಿಕಾರ ನೀಡಲಾಗಿದೆ. ಆರೋಪಿಯ ಪರವಾಗಿ ಪಾವತಿಸುವ ದಂಡವನ್ನು ಸಂಚಾರ ಪೊಲೀಸರು ಸ್ವೀಕರಿಸುವಂತಿಲ್ಲ. ಇದರ ಜೊತೆಗೆ ಪರಿಶೀಲನಾ ಚಟುವಟಿಕೆಯನ್ನು ವಿಡಿಯೊ ಮಾಡಿಲ್ಲ. ಪೊಲೀಸರ ಮೇಲೆ ವ್ಯಕ್ತಿಯು ದೈಹಿಕವಾಗಿ ಹಲ್ಲೆ ನಡೆಸಲು ಮುಂದಾದಾಗ ಅದನ್ನು ತಡೆದು ವ್ಯಾಪ್ತಿ ಹೊಂದಿದ ಪೊಲೀಸರನ್ನು ಕರೆಯಿಸಿಕೊಂಡು ಆರೋಪಿತ ವ್ಯಕ್ತಿಯನ್ನು ಕಸ್ಟಡಿಗೆ ಪಡೆಯಬೇಕು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
“ಹಾಲಿ ಪ್ರಕರಣದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯುವಾಗ ಯಾವುದೇ ನಿಯಮ ಪಾಲಿಸಿಲ್ಲ. ಘಟನೆ ನಡೆದಿರುವುದಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಸಂಗ್ರಹಿಸಿರುವ ದಾಖಲೆಗಳು ಸಾಕಾಗುವುದಿಲ್ಲ” ಎಂದಿರುವ ಪೀಠವು ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಪ್ರಕರಣದ ಹಿನ್ನೆಲೆ: 2017ರ ಏಪ್ರಿಲ್ 9ರಂದು ಬೆಂಗಳೂರಿನ ಏರ್‌ಪೋರ್ಟ್ ಸಂಚಾರಿ ಠಾಣೆಯ ಇನ್‌ಸ್ಪೆಕ್ಟರ್ ಅವರು ಅಲೋಕ್ ಎಂಬಾತ ಬೈಕ್‌ನಲ್ಲಿ ಅನುಮಾನಸ್ಪದ ರೀತಿಯಲ್ಲಿ ತೆರಳುವುದನ್ನು ಗುರುತಿಸಿದ್ದರು. ಆತ ಮದ್ಯ ಸೇವಿಸಿರುವುದನ್ನು ಪತ್ತೆಹಚ್ಚಿದ್ದ ಇನ್‌ಸ್ಪೆಕ್ಟರ್ ಠಾಣೆಗೆ ಬರುವಂತೆ ಆತನಿಗೆ ಸೂಚಿಸಿದ್ದರು. ಆದರೆ, ಆತ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ಸಂದರ್ಭದಲ್ಲಿ ಅಲೋಕ್ ಸ್ನೇಹಿತ ಪ್ರಿಯಾಂಶು ಅವರು ಪೊಲೀಸ್‌ಗೆ ಕಪಾಳ ಮೋಕ್ಷ ಮಾಡಿದ್ದು, ಆರೋಪಿಗಳಿಬ್ಬರೂ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಸಾರ್ವಜನಿಕರ ಸಹಾಯದಿಂದ ಇಬ್ಬರನ್ನೂ ವಶಕ್ಕೆ ಪಡೆಯಲಾಗಿತ್ತು. ಬೈಕ್ ವಶಪಡಿಸಿಕೊಂಡು, ಮದ್ಯ ಸೇವಿಸಿ ವಾಹನ ಚಲಾಯಿಸಲಾಗಿದೆ ಎಂದು ಐಪಿಸಿ ಸೆಕ್ಷನ್ 353ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ಇದನ್ನು ಪ್ರಶ್ನಿಸಿ, ಆರೋಪ ಮುಕ್ತಗೊಳಿಸುವಂತೆ ಕೋರಿದ್ದ ಮನವಿಯನ್ನು ವಿಚಾರಣಾಧೀನ ನ್ಯಾಯಾಲಯವು ಬದಿಗೆ ಸರಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.