ಸುಪ್ರೀಂ ಕೋರ್ಟ್‌ ಸೂಚಿಸಿರುವ ಮೌಲ್ಯಮಾಪನ ವಿಧಾನ ಅಂಕ ಸುಧಾರಣೆ ವಿದ್ಯಾರ್ಥಿಗಳಿಗೂ ಅನ್ವಯ: ದೆಹಲಿ ಹೈಕೋರ್ಟ್

ನ್ಯಾಯಮೂರ್ತಿ ಪ್ರತಿಭಾ.ಎಮ್.ಸಿಂಗ್ ನೇತೃತ್ವದ ಏಕಸದಸ್ಯ ಪೀಠದಿಂದ ಮಹತ್ವದ ಆದೇಶ.
ಸುಪ್ರೀಂ ಕೋರ್ಟ್‌ ಸೂಚಿಸಿರುವ ಮೌಲ್ಯಮಾಪನ ವಿಧಾನ ಅಂಕ ಸುಧಾರಣೆ ವಿದ್ಯಾರ್ಥಿಗಳಿಗೂ ಅನ್ವಯ: ದೆಹಲಿ ಹೈಕೋರ್ಟ್

ಕೋವಿಡ್‌ ಹಿನ್ನೆಲೆಯಲ್ಲಿ ಕೆಲ ಪರೀಕ್ಷೆಗಳು ರದ್ದಾದ ಕಾರಣ ಸುಪ್ರೀಂ ಕೋರ್ಟ್‌ ಸಿಬಿಎಸ್‌ಇ‌ ವಿದ್ಯಾರ್ಥಿಗಳಿಗಾಗಿ ಒಪ್ಪಿಗೆ ನೀಡಿರುವ ಮೌಲ್ಯಮಾಪನ ವಿಧಾನವು ಅಂಕ ಸುಧಾರಣೆಗಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೂ ಅನ್ವಯವಾಗಲಿದೆ ಎಂದು ದೆಹಲಿ ಹೈಕೋರ್ಟ್ ಆದೇಶಿಸಿದೆ (ಸನ್ಯಂ ಗುಪ್ತಾ v/s ಸಿಬಿಎಸ್‌ಸಿ ಪ್ರಕರಣ).

ಮೇಲಿನ ವಿಧಾನ ಅನುಸರಿಸುವ ಮೂಲಕ ವಿದ್ಯಾರ್ಥಿಗಳಿಗೆ ರದ್ದುಗೊಂಡ ಪರೀಕ್ಷೆಗೆ ಅಂಕ ನೀಡಲಾಗುತ್ತದೆ. ಇದರ ಅನುಸಾರ ಹಿಂದೆ ವಿದ್ಯಾರ್ಥಿಗಳು ಬರೆದ ಪರೀಕ್ಷೆಗಳ ಸರಾಸರಿ ಅಂಕಗಳ ಆಧಾರದಲ್ಲಿ ಅವರನ್ನು ಮುಂದಿನ ತರಗತಿಗೆ ಉತ್ತೀರ್ಣಗೊಳಿಸಲಾಗುವುದು ಎಂದು ಪ್ರತಿಭಾ ಸಿಂಗ್ ನೇತೃತ್ವದ ಹೈಕೋರ್ಟ್‌ ನ ಏಕಸದಸ್ಯ ಪೀಠ ಹೇಳಿದೆ.

2019ರ ಫೆಬ್ರುವರಿ-ಮಾರ್ಚ್‌ ನಲ್ಲಿ ನಡೆದ ಸಿಬಿಎಸ್‌ಸಿ ಪರೀಕ್ಷೆಯಲ್ಲಿ ಶೇ. 95.25 ಅಂಕ ಗಳಿಸಿದ್ದ 12ನೇ ತರಗತಿ ವಿದ್ಯಾರ್ಥಿ ಕೋರ್ಟ್‌ ಮೊರೆ ಹೋಗಿದ್ದರು. ದೆಹಲಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಬಯಸಿದ್ದರಿಂದ ಅರ್ಜಿದಾರ ವಿದ್ಯಾರ್ಥಿಯು ಒಂದು ವರ್ಷ ವ್ಯರ್ಥವಾದರೂ ಚಿಂತಿಸದೆ ಮತ್ತೊಮ್ಮೆ ಅಕೌಂಟೆನ್ಸಿ, ಇಂಗ್ಲಿಷ್ ಕೋರ್, ಅರ್ಥಶಾಸ್ತ್ರ ಮತ್ತು ಬ್ಯುಸಿನೆಸ್ ಸ್ಟಡೀಸ್ ವಿಷಯಗಳನ್ನು ಬರೆದು ಅಂಕ ಸುಧಾರಿಸಿಕೊಳ್ಳಲು ನಿರ್ಧರಿಸಿದ್ದರು. ಈ ಪೈಕಿ ಮಾರ್ಚ್ 24ರಂದು ನಿಗದಿಯಾಗಿದ್ದ ಬ್ಯುಸಿನೆಸ್ ಸ್ಟಡೀಸ್ ವಿಷಯದ ಪರೀಕ್ಷೆಯು ಲಾಕ್ ಡೌನ್ ಹಿನ್ನೆಲೆಯಲ್ಲಿ ರದ್ದುಗೊಂಡಿತ್ತು.

ಸುಪ್ರೀಂ ಕೋರ್ಟ್ ತನ್ನ ಜೂನ್ 25 ಮತ್ತು 26ರ ಆದೇಶದಲ್ಲಿ ರದ್ದುಗೊಂಡ ಪರೀಕ್ಷೆಗಳ ಸಾಮಾನ್ಯ ವಿದ್ಯಾರ್ಥಿಗಳ ಮೌಲ್ಯಮಾಪನಕ್ಕೆ ಅನ್ವಯಿಸಲು ಸೂಚಿಸಿರುವ ವಿಧಾನವನ್ನೇ ಅಂಕ ಸುಧಾರಣೆಗೆ ಪರೀಕ್ಷೆ ಬರೆದಿರುವ ತನಗೂ ವಿಸ್ತರಿಸಬೇಕು ಎಂದು ವಿದ್ಯಾರ್ಥಿಯು ಅರ್ಜಿಯಲ್ಲಿ ಕೋರಿದ್ದರು. ಅದರ ಅನುಸಾರ, ಉತ್ತಮ ಅಂಕಗಳಿಸಿದ ಸುಧಾರಿತ ಎರಡು ಪರೀಕ್ಷೆಗಳ ಸರಾಸರಿ ಅಂಕವನ್ನು ರದ್ದಾದ ಪರೀಕ್ಷೆಯ ಅಂಕವನ್ನಾಗಿ ಪರಿಗಣಿಸಬೇಕು ಎಂದು ಕೋರಿದ್ದರು.

ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಪೀಠವು ಹೀಗೆ ಹೇಳಿದೆ:

ವಿವಿಧ ವಿಷಯಗಳಲ್ಲಿ ಅಂಕ ಸುಧಾರಣೆಗಾಗಿ ಒಂದು ಶೈಕ್ಷಣಿಕ ವರ್ಷವನ್ನು ವ್ಯಯ ಮಾಡಿರುವ ವಿದ್ಯಾರ್ಥಿಯು ಎರಡು ವಿಷಯಗಳಲ್ಲಿ ಹಿಂದಿನ ವರ್ಷ ಪಡೆದ ಅಂಕಕ್ಕಿಂತ ಹೆಚ್ಚಿನ ಅಂಕ ಗಳಿಸಿದ್ದಾರೆ. ಇಂಥ ಸಂದರ್ಭದಲ್ಲಿ ಸಾಮಾನ್ಯ ವಿದ್ಯಾರ್ಥಿಗಿಂತ ಭಿನ್ನವಾಗಿ ಸದರಿ ವಿದ್ಯಾರ್ಥಿಯನ್ನು ಕಾಣುವುದು ಸಮಂಜಸವಲ್ಲ. ಸುಧಾರಿತ ಅಂಕ ಪಡೆಯಲು ಪರೀಕ್ಷೆ ಬರೆದ ವಿದ್ಯಾರ್ಥಿಯೂ ಸಾಮಾನ್ಯ ವಿದ್ಯಾರ್ಥಿಯಂತೆ ಕೋವಿಡ್ ತಂದೊಡ್ಡಿರುವ ಸಮಸ್ಯೆಯ ಫಲಾನುಭವಿಯಾಗಿದ್ದಾರೆ. ಸುಧಾರಿತ ಅಂಕ ಪಡೆಯಲು ಒಂದು ವರ್ಷದ ಶ್ರಮ ಹಾಗೂ ಪ್ರಯತ್ನ ಹಾಕಿರುವ ಅರ್ಜಿದಾರರಂತಹ ಸುಧಾರಣಾ ವಿದ್ಯಾರ್ಥಿಗಳಿಗೆ ಹೆಚ್ಚಿನ ನಷ್ಟವೇ ಆಗಿದೆ.
ದೆಹಲಿ ಹೈಕೋರ್ಟ್

ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಅಂಕ ಸುಧಾರಣೆಗಾಗಿ ಪರೀಕ್ಷೆ ಬರೆದ 4,500 ವಿದ್ಯಾರ್ಥಿಗಳಿಗೆ ಅನನುಕೂಲತೆ ಆಗಿದೆ ಎಂದಿರುವ ಕೋರ್ಟ್‌ ಹೀಗೆ ಹೇಳಿದೆ:

ಸಾಮಾನ್ಯ ವಿದ್ಯಾರ್ಥಿಗಳಿಗೆ ಸುಪ್ರೀಂ ಕೋರ್ಟ್‌ ನಿರ್ಧರಿಸಿರುವ ಮೌಲ್ಯಮಾಪನ ವಿಧಾನವು ಸುಧಾರಿತ ಅಂಕ ಪಡೆಯಲು ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೂ ಅನ್ವಯಿಸುತ್ತದೆ. ಹಾಗಾಗಿ ಅಂತಹ ವಿದ್ಯಾರ್ಥಿಗಳೂ ಸಹ ಯೋಜನೆಯ ಅನುಸಾರ ಅಂಕಗಳಿಗೆ ಅರ್ಹರಾಗಿರುತ್ತಾರೆ ಅಥವಾ ಸಿಬಿಎಸ್‌ಇ ಮುಂದೆ ಎಂದೇ ಐಚ್ಛಿಕ ಪರೀಕ್ಷೆಗಳನ್ನು ಆಯೋಜಿಸಿದರೆ ಪಾಲ್ಗೊಳ್ಳಲೂ ಸಹ ಅರ್ಹರಾಗಿರುತ್ತಾರೆ
ದೆಹಲಿ ಹೈಕೋರ್ಟ್

ಸುಪ್ರೀಂ ಕೋರ್ಟ್‌ ಒಪ್ಪಿಗೆ ನೀಡಿರುವ ಯೋಜನೆಯ ಅಡಿಯೇ ಅರ್ಜಿದಾರ ವಿದ್ಯಾರ್ಥಿಗೆ ಅಂಕ ಪಟ್ಟಿ ವಿತರಿಸುವಂತೆ ಸಿಬಿಎಸ್‌ಇಗೆ ಕೋರ್ಟ್‌ ಸೂಚಿಸಿದೆ. ಅರ್ಜಿದಾರ ವಿದ್ಯಾರ್ಥಿಯ ಪರ ರಿಷಿ ಮನ್ಚಂದ, ಅರುಣ್ ಕುಮಾರ್ ವಾದಿಸಿದರು. ಹಿರಿಯ ವಕೀಲ ಮಣೀಂದರ್ ಆಚಾರ್ಯ ಅಮಿಕಸ್ ಕ್ಯೂರಿಯಾಗಿದ್ದರು. ಅಮಿತ್ ಬನ್ಸಲ್ ಮತ್ತು ಸೀಮಾ ಡೊಲೊ ಅವರು ಸಿಬಿಎಸ್‌ಇ ಪರ ವಾದ ಮಂಡಿಸಿದರು.

Related Stories

No stories found.
Kannada Bar & Bench
kannada.barandbench.com